ಮಂಗಳೂರು, ಜನವರಿ 21: ಮಾಜೀ ರಾಜ್ಯ ಸಭೆ ಮತ್ತು ಹಾಲಿ ವಿಧಾನ ಪರಿಷತ್ ಸದಸ್ಯರಾಗಿರುವ ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ಅವರು ಸಂಸತ್ತಿನಲ್ಲಿ ಎತ್ತಿದ ಸಮಸ್ಯೆಯ ಮೇಲೆ ರಚಿಸಿರುವ ತುಳು ಕೊಡವ ಭಾಷೆಗಳ ಅಳಿವು ಉಳಿವು ಭಾಷಣಗಳು ಭಾಗ 1 ಪುಸ್ತಕ ಬಿಡುಗಡೆಯು ಶುಕ್ರವಾರ ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ಬಿಡುಗಡೆ ಆಯಿತು.

ಪ್ರೊ. ಚಿನ್ನಪ್ಪ ಗೌಡ ಅವರು ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು. ಈ ತುಂಬಿ ತುಳುಕುವ ಸಭೆಯಲ್ಲಿ ತುಂಬಿ ತುಳುಕುವ ತುಳು ವಿಷಯಕ ಪುಸ್ತಕವಾಗಿ ಇದು ಬಿಡುಗಡೆ ಆಗಿದೆ. ಎಲ್ಲಿ ಹೋದರೂ ಅಲ್ಲಿನ ನೆಲ ದನಿ ಕೇಳುವ ಗುಣವುಳ್ಳ ಹರಿಪ್ರಸಾದ್ ಅವರು ತುಳು ಕೊಡವ ಮತ್ತು ಅಲ್ಲಿನ ಬ್ಯಾರಿ ಭಾಷೆಯಂತಾ ಆಳದವರೆಗೂ ಹೋಗಿ ಹರಿಪ್ರಸಾದ್ ಸಂಸತ್ತಿನಲ್ಲಿ ಗುಡುಗಿದ್ದಾರೆ. ಅದು ಈಗ ಪುಸ್ತಕವಾಗಿ ಇದು ಭಾಷೆಯನ್ನು ಕಾಪಾಡಿಕೊಳ್ಳಲೇ ಬೇಕಾದ ಮಹತ್ವವನ್ನು ಹರಿಪ್ರಸಾದ್ ಇದರಲ್ಲಿ ವಿವರಿಸಿದ್ದಾರೆ ಎಂದು ಚಿನ್ನಪ್ಪ ಗೌಡ ಹೇಳಿದರು. 

ನನ್ನ ಕ್ಷೇತ್ರದ ಸ್ವಸ್ಥ ಸಮಾಜಕ್ಕಾಗಿ ಹರಿಪ್ರಸಾದ್ ಭಾಷೆಯನ್ನು ಪರಿಗಣಿಸಿದ್ದಾರೆ. ಅವರು ಭಾಷಾ ವಿಜ್ಞಾನಿ ಅಲ್ಲದಿದ್ದರೂ ವಿಷಯ ಮಂಡನೆಯನ್ನು ಸಮರ್ಥ ರೀತಿಯಲ್ಲಿ ಮಾಡಿದ್ದಾರೆ. ಫಿನ್ಲೆಂಡ್‌ನ ಜನಸಂಖ್ಯೆ 50 ಲಕ್ಷ. ಅಷ್ಟೇ ಜನಸಂಖ್ಯೆ ಇರುವ ತುಳು ಭಾಷೆಯು ಎಲ್ಲ ಬಗೆಯ ಚಾರಿತ್ರಿಕ ಹಿರಿಮೆ ಹೊಂದಿದ್ದರೂ ಅದಕ್ಕೆ ಸಿಗಬೇಕಾದ ಸ್ಥಾನಮಾನ ದೊರೆತಿಲ್ಲ. ಈ ಬಗೆಗೆ ಪೂರ್ಣ ಇಚ್ಛಾ ಶಕ್ತಿಯೊಡನೆ ಹರಿಪ್ರಸಾದ್ ಕೆಲಸ ಮಾಡಿದ್ದಾರೆ ಎಂದು ಚಿನ್ನಪ್ಪ ಗೌಡ ವಿವರಿಸಿದರು.

ಪುಸ್ತಕದ ಸಂಪಾದಕ ಜಯಕುಮಾರ್ ಅವರು ಮಾತನಾಡಿ ಕಾಸರಗೋಡು ಸಂಸದರು ಹರಿಪ್ರಸಾದ್‌ರಂತೆಯೇ ಈಗ ಸಂಸತ್ತಿನಲ್ಲಿ ತುಳು ವಕಾಲತ್ತು ವಹಿಸಿದ್ದಾರೆ ಎಂದು ಹೇಳಿದರು.

ಆರಂಭದಲ್ಲಿ ಹಿಂದುಳಿದ ಘಟಕದ ಸಾಹುಲ್ ಹಮೀದ್ ಅವರು ಎಲ್ಲ ಅತಿಥಿಗಳನ್ನು ಸ್ವಾಗತಿಸಿ, ಪರಿಚಯ ಮಾಡಿಕೊಟ್ಟರು. 

ಪುಸ್ತಕ ಕೊಟ್ಟ ಹಾಗೂ ಸಭೆಯ ಅಧ್ಯಕ್ಷತೆ ವಹಿಸಿದ್ದ ಬಿ. ಕೆ. ಹರಿಪ್ರಸಾದ್ ಅವರು ಮಾತನಾಡಿ ನಾನು ತುಳು ಮತ್ತಿತರ ಭಾಷೆಗಳ ಬಗೆಗೆ ಸಂಸತ್ತಿನಲ್ಲಿ ಕಾಸಗಿ ಕಾನೂನು ತಂದಿದ್ದೆ. ಆಗ ನಿಮಗೇಕೆ ಭಾಷಾ  ವಿಷಯ ಎಂದು ಸಭಾಪತಿ ಕೇಳಿದ್ದರು. ಆದರೆ ಅನಂತರ ಅದರ ಅವಕಾಶ ಪಡೆದು ದೇಶದ ನಾನಾ ಭಾಷೆಗಳವರು ಚರ್ಚೆಯಲ್ಲಿ ಪಾಲುಗೊಂಡರು. ಹಿಂದಿ ವ್ಯಾವಹಾರಿಕ ಭಾಷೆಯೇ ಹೊರತು ಜನ ಭಾಷೆಯಲ್ಲ. ಅಲ್ಲಿ ಭೋಜಪುರಿ, ಮೈಥಿಲಿ ಮೊದಲಾದವು ಇವೆ. ಹಿಂದಿ ರಾಷ್ಟ್ರ ಭಾಷೆಯಲ್ಲ. ಒಂದು ವೇಳೆ ಅದು ರಾಷ್ಟ ಭಾಷೆಯಾದರೆ ಎಲ್ಲರ‌ ಮಾತೃಭಾಷೆಯೂ ರಾಷ್ಟ್ರ ಭಾಷೆಯೇ ಎಂದು ಬಿ. ಕೆ. ಹರಿಪ್ರಸಾದ್ ಹೇಳಿದರು.

ಕನ್ನಡ ಭಾಷಿಕರು ಆರು ಕೋಟಿ ಇದ್ದು, ಮಾತನಾಡುವವರ ಸಂಖ್ಯೆಯ ರೀತ್ಯಾ ದೇಶದಲ್ಲಿ ಕನ್ನಡವು ಒಂಬತ್ತನೇ ಸ್ಥಾನದಲ್ಲಿ ಇದೆ. ಕೇಂದ್ರ ಸರಕಾರವು ಕನ್ನಡಕ್ಕೆ 3 ಕೋಟಿ ಕೊಟ್ಟರೆ ಹಿಂದಿ ಅಭಿವೃದ್ಧಿಗೆ ಒಂದೂವರೆ ಸಾವಿರ ಕೋಟಿ ಕೊಟ್ಟಿದೆ. ಇನ್ನು ಸಂಸ್ಕೃತಕ್ಕೆ ವ್ಯರ್ಥವಾಗಿ ಕೋಟಿ ಕೋಟಿ ಹಣ ಸುರಿಯುತ್ತದೆ. ಆದರೆ ಜನ ಭಾಷೆಗಳಿಗೆ ಮನ್ನಣೆ ಇಲ್ಲ ಎಂದರೆ ಹೇಗೆ? ಆರು ಭಾಷೆ ಮಾತನಾಡುವ ನಾನು ಯಾವ ಭಾಷೆಗೂ ವಿರೋಧಿಯಲ್ಲ. ನಿರ್ಲಕ್ಷಿತ ಭಾಷೆಗಳಿಗೆಲ್ಲ ಪ್ರೋತ್ಸಾಹ ಕೊಡಬೇಕಾದುದು ಅತ್ಯಗತ್ಯ ಎಂದು ಹರಿಪ್ರಸಾದ್ ಹೇಳಿದರು.

ವಿಧಾನ ಪರಿಷತ್ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಕುಮಾರ್, ಎಂಎಲ್‌ಸಿ ಮಂಜುನಾಥ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.