ಸಸ್ಯ ಶಾಸ್ತ್ರದಲ್ಲಿ ಬ್ರಾಕ್ಟ್ ಎಂದರೆ ಬದಲಾದ ವೇಷದ ಎಲೆ ಇಲ್ಲವೇ ರೂಪಾಂತರಿ ಎಲೆ ಎಂದು ಅರ್ಥ. ನಮ್ಮ ಸುತ್ತ ಮುತ್ತ ಇಂತಾದ್ದನ್ನು ಸಾಕಷ್ಟು ಕಾಣಬಹುದು.
ಎಲೆಗಳು ದ್ಯುತಿಸಂಶ್ಲೇಷಣೆ ಕ್ರಿಯೆಯ ಮೂಲಕ ಆಹಾರ ತಯಾರಿಸಿಕೊಳ್ಳುತ್ತವೆ. ಎಲೆಯಲ್ಲಿ ಪತ್ರ ಹರಿತ್ತು ಇರಬೇಕಾದುದು ಮುಖ್ಯ. ಆದ್ದರಿಂದ ಈ ಎಲೆಗಳು ಹಸಿರು ಬಣ್ಣದಲ್ಲಿ ಇರುತ್ತವೆ.
ಕೆಲವು ಕ್ರೋಟನ್ ಗಿಡಗಳಲ್ಲಿ ಪತ್ರಹರಿತ್ತು ಬೇರೆ ಬಣ್ಣಕ್ಕೆ ಹೊಂದಿಕೊಂಡಿದ್ದು ಒಂದಷ್ಟು ಮಟ್ಟಿಗೆ ದ್ಯುತಿಸಂಶ್ಲೇಷಣೆ ಕ್ರಿಯೆ ನಡೆಸಬಲ್ಲವು. ಬೇರೆಯೇ ಉದ್ದೇಶಕ್ಕೆ ಕೆಲವು ಸಸ್ಯಗಳಲ್ಲಿ ಮಾಡಿಫೈಡ್ ಎಲೆಗಳು ಇರುತ್ತವೆ. ಇವನ್ನು ಸಸ್ಯ ಶಾಸ್ತ್ರದ ಪ್ರಕಾರ ಬ್ರಾಕ್ಟ್ ಎನ್ನುವರು.
ಇವುಗಳ ಮುಖ್ಯ ಉದ್ದೇಶ ಇವುಗಳ ಚಿಕ್ಕ ಹೂವುಗಳಿಗೆ ದುಂಬಿ, ಚಿಟ್ಟೆ, ಜೇನುನೊಣ ಮೊದಲಾದ ಪರಾಗಸ್ಪರ್ಶದ ಕೀಟಗಳನ್ನು ಸೆಳೆಯುವುದಾಗಿದೆ.
ನಮ್ಮ ಸುತ್ತ ಮುತ್ತ ಇವು ಸಾಕಷ್ಟು ಇವೆ. ಅವು ಬೇರೆ ಬೇರೆ ಬಣ್ಣದಲ್ಲೂ ಇರುತ್ತವೆ. ಮುಖ್ಯವಾಗಿ ಬಿಳಿ ಬಣ್ಣದವು ಹೆಚ್ಚು. ಕಾಡು ಬದಿಗಳಲ್ಲಿ ಇಲ್ಲಿ ಚಿತ್ರದಲ್ಲಿ ಇರುವ ಬಿಳಿ ಎಲೆಗಳನ್ನು ನೀವು ನೋಡಿರಬಹುದು. ಹೂ ತೀರಾ ಚಿಕ್ಕದಿದ್ದು, ದುಂಬಿಗೆ ಕಾಣಿಸದು. ಅದು ಕಾಣಿಸಲು ಈ ಬಿಳಿ ಎಲೆಯ ವ್ಯವಸ್ಥೆ ಆಗಿದೆ. ಇವು ಹೂವಲ್ಲ. ಬ್ರಾಕ್ಟ್ ಆದ ಎಲೆಗಳು ಎಂಬುದನ್ನು ನೆನಪಿಡಿ.
ಸಾಕಷ್ಟು ಬೋಗನ್ವಿಲ್ಲಾ ನೋಡಿರುತ್ತೀರಿ. ಲವಂಗ ಗಾತ್ರದ ಹೂವಿಗೆ ಆಕರ್ಷಕ ಬ್ರಾಕ್ಟ್ಗಳು ಇರುತ್ತವೆ. ಆ ರೂಪಾಂತರಿ ಎಲೆಗಳು ಬಿಳಿ, ಗುಲಾಬಿ ಬಣ್ಣದಲ್ಲೆಲ್ಲ ಇರುತ್ತವೆ.
ಬಾಳೆಯ ಹೂವನ್ನು ಮುಚ್ಚಿರುವುದು ಕೂಡ ಬ್ರಾಕ್ಟ್ ಎಲೆಗಳೇ ಆಗಿವೆ. ಇಂತಾ ಎಲೆ ಹೂವುಗಳು, ಎಲೆಗಳು ವಾರಗಟ್ಟಲೆ ಬಾಳುವುದರಿಂದ ಇವುಗಳಲ್ಲಿ ಕೆಲವು ಅಲಂಕಾರಿಕ ವಾಣಿಜ್ಯ ಮಹತ್ವವನ್ನು ಪಡೆದಿವೆ.
Article By
Perooru Jaru