ಅಜಡಿರಕ್ಟ ಇಂಡಿಕ ಎಂದು ಕರೆಯಲ್ಪಡುವ ಬೇವು ಇಲ್ಲವೇ ನೀಮ್ ಭಾರತ ಮೂಲದ ಮರ ಎಂದೇ ಖ್ಯಾತಿ ಪಡೆದಿದೆ.

ಕರಿಬೇವು ಎಂಬುದು ಒಂದು ಇದೆ. ಅದರ ಎಲೆ ಮತ್ತು ಕಾಯಿಗಳು ಬೇವಿನಂತೆಯೇ ಇರುತ್ತವೆ. ಆದ್ದರಿಂದ ಅದು ಕರಿಗೆ ಹಾಕುವ ಬೇವು. 

ಇದು ಕಹಿಬೇವು. ಏಕೆಂದರೆ ಇದರ ರುಚಿ ಕಹಿಯಾಗಿರುತ್ತದೆ. ಕಹಿ ಕಳೆದು ಬೇವು ಮಾತ್ರ ಉಳಿಸಿಕೊಂಡ ಕನ್ನಡಿಗ ಬುದ್ಧಿವಂತ ಬಿಡಿ. ಯುಗಾದಿಗೆ ಕರ್ನಾಟಕದ ಒಳನಾಡಿನಲ್ಲಿ ಬೇವು ಬೆಲ್ಲದ್ದೇ ಸುದ್ದಿ.

ಕರಾವಳಿಯಲ್ಲಿ ಬೇವಿನ ಮರಗಳು ಕಡಿಮೆ. ಬಳಕೆಯೂ ಕಡಿಮೆಯೇ. ಕೆಲವು ಚರ್ಮ ರೋಗಗಳಲ್ಲಿ ಬೇವಿನ ಎಲೆಯನ್ನು ಕುದಿಸಿದ ನೀರಿನಲ್ಲಿ ಸ್ನಾನ ಮಾಡಿಸುವ ಕ್ರಮ ಕರಾವಳಿಯಲ್ಲಿ ಇತ್ತು.

ಬೇವಿನ ಮರ ಇತರೆಲ್ಲ ಮರಗಳಂತೆಯೇ ಉಪಯುಕ್ತ. ಆದರೆ ಬೇವಿನ ಮರಕ್ಕೆ ಮಹತ್ವ ಬಂದಿರುವುದು ಬೇವಿನ ಎಣ್ಣೆಯಿಂದ.

ಬೇವಿನ ಎಣ್ಣೆಯನ್ನು ಮದ್ದಾಗಿ ನಾನಾ ರೀತಿಯಲ್ಲಿ ಬಳಸುತ್ತಾರೆ. ಸಿದ್ದ ಮತ್ತು ದೇಶೀಯ ಮದ್ಪದ್ಧತಿಗಳಲ್ಲಿ ಬೇವಿನೆಣ್ಣೆ ನಾನಾ ಮದ್ದುಗಳಲ್ಲಿ ಬಳಕೆಯಾಗುತ್ತದೆ.

ಹಾಗೆಯೇ ಸೌಂದರ್ಯ ಸಾಧನಗಳ ತಯಾರಿಕೆಯಲ್ಲೂ ಬೇವಿನೆಣ್ಣೆ ಬಳಸುತ್ತಾರೆ. ಅದರಲ್ಲೂ ಸಾಬೂನು ಭಾರತದಲ್ಲಿ ಬಳಕೆಗೆ ಬಂದ ಕಾಲದಿಂದಲೂ ಬೇವಿನ ಎಣ್ಣೆಯ ಹಲವು ಹೆಸರಿನ ಸಾಬೂನುಗಳು ಬಳಕೆಯಲ್ಲಿವೆ.

ಬೇವು ಕೀಟನಾಶಕ ಆಗಿರುವುದರಿಂದ ಬೇವಿನ ಎಣ್ಣೆಯನ್ನು ಕೀಟನಾಶಕ ಆಗಿಯೂ ಬಳಸುತ್ತಾರೆ. ಸಾವಯವ ಕೃಷಿಯವರು‌ ನೇರವಾಗಿ ಬೇವಿನ ಎಲೆಯ ರಸ ಮಾಡಿ ಕೀಟನಾಶಕವಾಗಿ ಬಳಸುತ್ತಾರೆ.

ಕರ್ನಾಟಕದ ಒಳನಾಡಿನಲ್ಲಿ, ಅದರಲ್ಲೂ ಉತ್ತರ ಕರ್ನಾಟಕದಲ್ಲಿ ಬೇವಿನ ಬೀಜ ಆರಿಸಿ ಎಣ್ಣೆಗೆ ಅಣಿಗೊಳಿಸುವುದು ಕೂಡ ಒಂದು ಕೆಲಸ. 

ಈಗ ಬೇವಿನ ಬೀಜದ ಕಾಲ. ಬೇವಿನ ಕಾಯಿ ಹಣ್ಣಾದಾಗ ಹೊರಕವಚ ಮತ್ತು ಬೀಜದ ನಡುವೆ ತುಸು ಲೋಳೆ ಇರುತ್ತದೆ. ಇದು ಅಷ್ಟು ಕಹಿಯಿಲ್ಲದೆ ತಿನ್ನಲಾಗುವಷ್ಟು ಸಿಹಿಯಾಗಿ ಇರುತ್ತದೆ. ಹಾಗೆ ತಿನ್ನುವವರು ಇದ್ದಾರಾದರೂ ತೀರಾ ಕಡಿಮೆ.

ಬೀಜವನ್ನು ಒಣಗಿಸಿದ ಮೇಲೆ ಹಿಂದೆ ಗಾಣದಲ್ಲಿ ಎಣ್ಣೆ ತೆಗೆಯುತ್ತಿದ್ದರು. ಇಂದೆಲ್ಲ ಬೇವಿನ ಎಣ್ಣೆ ತೆಗೆಯುವ ಮಿಲ್‌ಗಳು ಇವೆ. ಆಧುನಿಕತೆ ಹೆಚ್ಚಿದರೂ ಬೇವಿನ ಬಳಕೆ ನಿಂತಿಲ್ಲ; ನಿಲ್ಲುವ ಲಕ್ಷಣವೂ ಇಲ್ಲ.

ಮಂಗಳೂರಿನ ಕೆಲವೆಡೆ ಬೇವಿನ ಮರಗಳು ಇವೆ. ಮಂಗಳೂರು ಇಲ್ಲವೆ ಕುಡಲದ ಮೂಲ ಮುಖ್ಯ ರಸ್ತೆ ಬೋಳೂರಿನಿಂದ ಬೋಳಾರದವರೆಗಿನದು. ಆ ಮೂಲ ರಸ್ತೆಯಲ್ಲಿ ಇದ್ದ ಬೇವಿನ ಮರದಿಂದ ಜೋತುಬಿದ್ದ ಬೇವಿನ ಕಾಯಿಯ ಗೊಂಚಲನ್ನು ಚಿತ್ರದಲ್ಲಿ ನೋಡಬಹುದು. 

ಮೂಲ ರಸ್ತೆಯು ನೇತ್ರಾವತಿ ಮತ್ತು ಪಲ್ಗುಣಿ ನದಿಯನ್ನು ಸೇರಿಸುವ ರಸ್ತೆಯೂ ಹೌದು. ಬುಕ್ಕ ಪಟ್ಟಣ ಬೊಕ್ಕಪಟ್ಣ ಮತ್ತು ಹೊಯ್ಗೆ ಬಜಾರ್ ಪ್ರಮುಖ ಪೇಟೆಗಳಾಗಿದ್ದವು.

Article By


Perooru Jaru