ಶತಮಾನ ದಾಟಿದ ಗೋಪುರ ಗಡಿಯಾರವೊಂದು ಮಂಗಳೂರಿನಲ್ಲಿ ಈಗಲೂ ಸರಿ ಸಮಯ ನೀಡುತ್ತಿದೆ. ಅದೇ ಅವಧಿಯ ಬೆಂಗಳೂರು, ಮೈಸೂರು ಮೊದಲಾದ ಕಡೆಯ ಗೋಪುರ ಗಡಿಯಾರಗಳು ಕಣ್ಣು ಮುಚ್ಚಿವೆ.
1541ರಲ್ಲಿ ಇಂಗ್ಲೆಂಡಿನ ಹ್ಯಾಂಪ್ಟನ್ ಕೋರ್ಟ್ ಪ್ಯಾಲೇಸ್ ನಲ್ಲಿ ಜಗತ್ತಿನ ಮೊದಲ ಗಡಿಯಾರ ಗೋಪುರ ಮೇಲೆದ್ದಿತು. ಅನಂತರ ಯೂರೋಪಿನ ನಾನಾ ದೇಶಗಳಲ್ಲಿ ಗಡಿಯಾರ ಗೋಪುರಗಳು ಸಾಮಾನ್ಯವೆನಿಸಿದವು. ಒಂದೂವರೆ ಶತಮಾನದಿಂದ ಭಾರತದ ನಾನಾ ನಗರಗಳಲ್ಲಿ ಗಡಿಯಾರ ಗೋಪುರಗಳು ತಲೆಯೆತ್ತಿದವು. ಡಿಜಿಟಲ್ ಗಡಿಯಾರ ಕ್ರಾಂತಿ ಮತ್ತು ಮೊಬಾಯಿಲ್ ಸಮಯ ಸೂಚನೆ ಸಿಕ್ಕ ಮೇಲೆ ಗೋಡೆ ಗಡಿಯಾರ, ಗೋಪುರ ಗಡಿಯಾರ ನೋಡುವವರು ಎಲ್ಲೋ ಒಬ್ಬರಾಗಿದ್ದಾರೆ.
ಕರಾವಳಿಯ ಮೊದಲ ಕನ್ನಡ ಶಾಲೆ, ಮೊದಲ ಇಂಗ್ಲಿಷ್ ಶಾಲೆ, ಮೊದಲ ಕಿಂಡರ್ ಗಾರ್ಟನ್, ಮೊದಲ ವಸತಿ ಶಾಲೆ, ಮೊದಲ ಹೆಣ್ಣು ಮಕ್ಕಳ ಶಾಲೆ, ಮೊದಲ ರಾತ್ರಿ ಶಾಲೆ, ಮೊದಲ ಟೀಚರ್ ತರಬೇತಿ ಶಾಲೆ ಎಂದು ನಾನಾ ಮೊದಲುಗಳ ಬಾಸೆಲ್ ಮಿಶನ್ ನವರು ಗಡಿಯಾರ ತಯಾರಕರೂ ಆಗಿದ್ದರು. ಸ್ಟೇಟ್ ಬ್ಯಾಂಕಿಗೆ ಹತ್ತಿರದ ಸಂತ ಪೌಲ್ ಇಗರ್ಜಿಯ ಗಡಿಯಾರ ಗೋಪುರ ನಿಲ್ಲಿಸಿದವರು ಬಾಸೆಲ್ ಮಿಶನ್ ನವರು. ಈ ಭಾಗದ ಮೊದಲ ಗಡಿಯಾರ ಗೋಪುರ ಅದು. ಅನಂತರ ಹಂಪನಕಟ್ಟೆಯ ಹಳೆಯ ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಒಂದು ಗಡಿಯಾರ ಗೋಪುರ ಆಯಿತು. ಅದು ಕೆಟ್ಟು ಗುಜರಿ ಸೇರಿ ಎಷ್ಟೋ ಕಾಲವಾಯಿತು. ಶತಮಾನ ಮೀರಿಯೂ ಸರಿಯಾದ ಸಮಯ ತೋರಿಸುವ ಕರ್ನಾಟಕದ ಏಕೈಕ ಗಡಿಯಾರ ಗೋಪುರ ಇದು ಒಂದು ಮಾತ್ರ.
ರೆವರೆಂಡ್ ಆಲ್ಪ್ರೆಡ್ ಫಿನೆಲ್ ಅವರು 1842ರಲ್ಲಿ ಈ ಇಗರ್ಜಿ ಕಟ್ಟಲು ಆರಂಭಿಸಿದರು. 1843ರಲ್ಲಿ ಅದು ಕಟ್ಟಿ ತೆರೆದುಕೊಂಡಿತು. ಅದರ ಬೆನ್ನಿಗೆ ಬಾಸೆಲ್ ಮಿಶನ್ ಮೂಲಕ ಇಲ್ಲಿ ಗಡಿಯಾರ ಗೋಪುರದ ನಿರ್ಮಾಣ ಆಯಿತು. ಒಂದೂವರೆ ಶತಮಾನದಿಂದ ಇದು ಸುಸ್ಥಿತಿಯಲ್ಲಿ ಇದ್ದು ಸಮಯ ಪಾಲನೆಯಲ್ಲಿ ದಾಖಲೆ ಮಾಡಿದೆ.
ಕ್ರಿ. ಪೂ. 3500ರಲ್ಲಿ ಈಜಿಪ್ತ್ ನಲ್ಲಿ ಸೂರ್ಯನ ನೆರಳಿನಾಧಾರದ ಗಡಿಯಾರ ಚಾಲನೆ ಪಡೆಯಿತು. ಇದೇ ಅವಧಿಯಲ್ಲಿ ಬ್ಯಾಬಿಲೋನಿಯಾದಲ್ಲೂ ನೆರಳು ಗಡಿಯಾರ ಅಸ್ತಿತ್ವಕ್ಕೆ ಬಂತು. ಕ್ರಿ. ಪೂ. 2000ದ ಬ್ರಿಟನ್ನಿನ ಸ್ಟೋನ್ ಹೆಂಜ್ ಕೂಡ ಇಂಥ ಸನ್ ಡಯಲ್ ಎನ್ನಲಾಗಿದೆ. ಕ್ರಿ. ಪೂ. 1400ರ ಹೊತ್ತಿಗೆ ನಿಶ್ಚಿತ ಅವಧಿ ಉರಿಯುವ ಕೆಲವು ವಸ್ತುಗಳು ತಯಾರಾದವು. ಕ್ರಿ. ಪೂ. 300ರಲ್ಲಿ ಆರ್ಕಿಮಿಡೀಸ್ ಗೇರ್ ಬದಲಾವಣೆಯ ಗಡಿಯಾರ ರೂಪಿಸಿದ.
ಕ್ರಿ. ಶ. 300ರಲ್ಲಿ ಉಸುಕು ಜಾರುವ ಗಡಿಯಾರ ಬಳಕೆಗೆ ಬಂತು. 885ರಲ್ಲಿ ಒಂದು ಗಂಟೆ ಉರಿಯುವ ಮೇಣದ ಬತ್ತಿಗಳು ಯೂರೋಪಿನಲ್ಲಿ ಬಳಕೆಗೆ ಬಂದವು. ಕ್ರಿ. ಶ. 1092ರ ಚೀನಾದ ಸು ಸಂಗ್ ಜಗತ್ತಿನ ಮೊದಲ ಯಾಂತ್ರಿಕ ಗಡಿಯಾರ ರೂಪಿಸಿದ.
1490ರಲ್ಲಿ ಲಾಕ್ ಸ್ಮಿತ್ ಪೀಟರ್ ಹೇಲ್ ನರ್ನ್ ಬರ್ಗ್ ನಲ್ಲಿ ಸ್ಪ್ರಿಂಗ್ ಪರಿಚಯಿಸಿದ.1500 ಸಣ್ಣ ಟೇಬಲ್ ಗಡಿಯಾರಗಳು ಬಂದವು. 1510ರಲ್ಲಿ ಜರ್ಮನಿಯಲ್ಲಿ ಕುತ್ತಿಗೆಯಲ್ಲಿ ನೇತು ಹಾಕಿಕೊಳ್ಳುವ ಸಣ್ಣ ಗಡಿಯಾರ ಹೊರಬಂತು. 1540ರಲ್ಲಿ ಗಡಿಯಾರಗಳಲ್ಲಿ ಸ್ಕ್ರೂ ಬಳಿಕೆ ಆಯಿತು. 1541ರಲ್ಲಿ ಮೊದಲ ಗಡಿಯಾರ ಗೋಪುರ ಎದ್ದಿತು. ಇವೆಲ್ಲ ಗಂಟೆ ಮಾತ್ರ ತೋರಿಸುವ ಗಡಿಯಾರಗಳು.
1577ರಲ್ಲಿ ಜಾಸ್ ಬರ್ಗಿ ಮೊದಲಿಗೆ ಮಿನಿಟ್ ಮುಳ್ಳು ಪರಿಚಯಿಸಿದ. ಜಿನೇವಾ ಆಗ ಲೋಕದ ಗಡಿಯಾರ ರಾಜಧಾನಿ. 1657ರಲ್ಲಿ ಹಾಲೆಂಡ್‌ನ ಹ್ಯೂ ಜೀನ್ ಪೆಂಡುಲಂ ಗಡಿಯಾರ ರೂಪಿಸಿದ. ಎಡಿನ್ ಬರೋದ ಅಲೆಗ್ಸಾಂಡರ್ 1840ರಲ್ಲಿ ಮೊದಲ ವಿದ್ಯುತ್ ಗಡಿಯಾರ ತಯಾರಿಸಿದ. 1900ರಿಂದ ವಾಚುಗಳು ಮಾರುಕಟ್ಟೆಗೆ ಬಂದವು. 1967ರಲ್ಲಿ ವಾಚು ಗಡಿಯಾರಗಳಲ್ಲಿ ಸೆಕೆಂಡು ಮುಳ್ಳುಗಳು ಮೂಡಿದವು. ಇಂದಿನ ಡಿಜಿಟಲ್ ಯುಗದಲ್ಲಿ ನ್ಯಾನೋ ಸೆಕೆಂಡುಗಳೆಲ್ಲ ಇದ್ದು, ಅದನ್ನು ಊಹಿಸುವುದೂ ಕಷ್ಟ.
ಬಾಸೆಲ್ ಮಿಶನ್ ಮತ್ತು ಸಂತ ಪೌಲ್ ಇಗರ್ಜಿಯ ಗಡಿಯಾರ ಗೋಪುರಕ್ಕೆ ಮಂಗಳೂರಿನ ಎಲ್ಲರೂ ಒಮ್ಮೆ ತಲೆಬಾಗಲೇಬೇಕು.
-By ಪೇಜಾ