ಉಚ್ಚ ನ್ಯಾಯಾಲಯವು ಮುಚ್ಚಳಿಕೆ ಬರೆದುಕೊಂಡು ಮಂಗಳೂರು ಸ್ಮಾರ್ಟ್ ಸಿಟಿ ಎಂಬ ಕೆಲಸಗಳನ್ನು ಮುಂದುವರಿಸಲು ಅನುಮತಿ ಸಿಕ್ಕ ಬೆನ್ನಿಗೆ ಹಂಪನಕಟ್ಟೆ ವೃತ್ತ ಅಗೆಯುವುದು ನಡೆದಿದೆ.
ಸಾವಿರಾರು ವರುಷಗಳಿಂದ ಅಗೆದಗೆದು ಒಗೆದ ನೆಲ, ಸ್ಮಾರ್ಟ್ ಸಿಟಿ ಜನ ತನ್ನದೆಂದು ಮತ್ತೆ ಅಗೆದಿದ್ದಾರೆ. ಅಗೆದಲ್ಲಿ ಕಾಂಕ್ರೀಟ್ ಕೂರಲಿದೆ. ಒಳ ನೆಲದ ಕತೆ ಸದ್ಯಕ್ಕೆ ಗುಪ್ತ. ಯಾಕೆಂದರೆ ಕಾಂಕ್ರೀಟ್ ಅಗೆದು ಉತ್ಖನನ ನಡೆಸುವುದು ಕಷ್ಟ. ಆದರೆ ಸ್ಮಾರ್ಟ್ ಸಿಟಿ ಕೆಲಸ ಎಂದರೆ ನಷ್ಟವಾದರೂ ಸರಿ ಮತ್ತೆ ಮತ್ತೆ ಅಗೆಯುವುದು ಬುದ್ಧಿವಂತ ಧರ್ಮ; ಅದೇ ಕೆಲವರಿಗೆ ಮರ್ಮ.
ಹಂಪಿಯ ಕಟ್ಟೆ ವಿಜಯನಗರ ಕಾಲದ ಸುಂಕದ ಕಟ್ಟೆ ಆಗಿದ್ದು ಹಂಪನಕಟ್ಟೆ ಆಗಿದೆ. ಆಗಿನಿಂದ ಇಲ್ಲಿ ಅಗೆದವರ ಲೆಕ್ಕ ಇಟ್ಟವರಿಲ್ಲ. ಬಿರುವರು ಇಲ್ಲಿ ಭೂಮಿ ಹೊಂದಿದ್ದ ಮಾರಿದ ದಾಖಲೆ ಇದೆ. ಹಾಗೆಯೇ ಬಾಸೆಲ್ ಮಿಶನ್ ಜನ ಕೊಂಡು ಅನಂತರ ಕೊಟ್ಟ ದಾಖಲೆಯೂ ಇದೆ. ಕಟ್ಟೆಯ ಪಕ್ಕದ ವಿಜಯ ಪೆನ್ನಿನ ಅಂಗಡಿ 1965ರವರೆಗೆ ಬಾಸೆಲ್ ಮಿಶನ್ ಪ್ರಕಟಣೆಗಳ ಮಾರಾಟದ ಪುಸ್ತಕ ಮಳಿಗೆ ಆಗಿತ್ತು. ಅವರು ಅದನ್ನು ಮುಚ್ಚಿದ ಮೇಲೆ ಚಂದ್ರನಾ ಬ್ರದರ್ಸ್‌ರಿಗೆ ಮಾರಿದ್ದರು. ಈ ಕಡೆ ದೀವಾರ್, ಅತ್ತ ಜಾರಪ್ಪಣ್ಣ ಆಸ್ತಿ ಇತ್ಯಾದಿ ಯಾವುದೂ ಇಂದು ಆ ಸಮುದಾಯದವರ ಕೈಯಲ್ಲಿ ಇಲ್ಲ.
ಅದು ಹಳೆಯ ಕತೆ. 93 ವರುಷಗಳ ಹಿಂದೆ ಮಂಗಳೂರು ಬಂಟ್ವಾಳ ಬಸ್ ಓಡತೊಡಗಿದ ಮೇಲೆ ಹಂಪನಕಟ್ಟೆ ಬಸ್ ನಿಲ್ದಾಣ ಆದುದರಿಂದ ಸುತ್ತ ವ್ಯಾಪಾರ ಚಟುವಟಿಕೆ ಅಧಿಕವಾಯಿತು. ರಸ್ತೆ ಸುಧಾರಿಸುತ್ತ, ಅಗಲವಾಗುತ್ತ ಬಂತು. ವೃತ್ತದಲ್ಲಿ ಸಿಗ್ನಲ್ ದೀಪ ಬಂತು, ನಿಷ್ಕ್ರಿಯವಾಯಿತು. 20 ವರುಷಗಳ ಹಿಂದೆ ಬಸ್ ನಿಲ್ದಾಣ ಇಲ್ಲವಾದ ಮೇಲೆ ಹಂಪನಕಟ್ಟೆ ಸುತ್ತ ವ್ಯಾಪಾರ ವಹಿವಾಟು ಕುಂದಲಿಲ್ಲ. ಬಸ್ ನಿಲ್ದಾಣದೊಳಗಿನ ವ್ಯಾಪಾರ ಬಿತ್ತು, ಹಲವು ಅಂಗಡಿ ಹೋಟೆಲುಗಳು ಮುಚ್ಚಿದವು.
ಸ್ಮಾರ್ಟ್ ಸಿಟಿ ಎಂಬ ಬುದ್ಧಿವಂತ ನಗರದ ಲಕ್ಷಣ ಬರೇ ಕಾಂಕ್ರೀಟ್ ರಸ್ತೆ ಅಲ್ಲ. ಆದರೆ ಅದೂ ಒಂದು ಅಂಶ ಎಂದುಕೊಳ್ಳೋಣ. ಪಚ್ಚನಾಡಿಯ ಕಸ ನಿರ್ವಹಣೆ ಬಗೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯ ಮೇಲೆ ಕೋರ್ಟ್ ಸ್ಮಾರ್ಟ್ ಸಿಟಿ ಕಾಮಗಾರಿಗೆ ತಡೆ ನೀಡಿತ್ತು. ಕಸ ನಿರ್ವಹಣೆ ಸರಿ ಪಡಿಸುವ ಮುಚ್ಚಳಿಕೆ ಮೇಲೆ ಈಗ ಹಿಡಿದ ಕೆಲಸ ಮುಗಿಸಲು ಅನುಮತಿಯನ್ನು ನೀಡಲಾಗಿದೆ. ಬಾಬರಿ ಮಸೀದಿ ಒಡೆಯುವುದಿಲ್ಲ ಎಂದು ಕೋರ್ಟಿಗೆ ಬರೆದುಕೊಟ್ಟ ಮುಚ್ಚಳಿಕೆ ಸಹಿತ ಹಲವು ಮುಚ್ಚಳಿಕೆಗಳನ್ನು ಮುರಿದ ರಾಜಕಾರಣಿಗಳು ಇವರು.
ಸ್ಮಾರ್ಟ್ ಸಿಟಿ ಅರ್ಥಾತ್ ಬುದ್ಧಿವಂತ ನಗರವು ಡಿಜಿಟಲ್ ಆಡಳಿತ, ಸಮಗ್ರ ಸುಲಭ ಲಭ್ಯ ಮಾಹಿತಿ, ಜನಪ್ರತಿನಿಧಿಗಳೊಂದಿಗೆ ಸಾರ್ವಜನಿಕರ ಪಾಲ್ಗೊಳ್ಳುವಿಕೆ, ಸಮಸ್ಯೆಗಳಿಗೆ ಅತಿ ವೇಗದ ಪರಿಹಾರ ಇಂಥವನ್ನು ಅವಲಂಬಿಸಿದೆ. ಸುಗಮ ಸಂಚಾರಕ್ಕೆ ಸೊಗಸಿನ ರಸ್ತೆ ಅಗತ್ಯ. ಹಂಪನಕಟ್ಟೆಯಲ್ಲಿ ಅರೆಬರೆ ಆದ ಕೆಲಸ ಮುಗಿಸಲು ಜೋಡಿ ಜೆಸಿಬಿಗಳು. ಅಗೆಯತೊಡಗಿವೆ. ಅಗೆದು ಮುಗಿಯುವ ತನಕ ಮತ್ತೆ ಸಂಚಾರಕ್ಕೆ ತುಸು ವ್ಯತ್ಯಯದ ಪಥ ನಿರ್ದೇಶನ ನೀಡಲಾಗಿದೆ. ಬೇಗನೆ ಕಜ್ಜ ಮುಗಿದು ಸುಗಮ ಸಂಚಾರ ಆರಂಭವಾದೀತು. ಆಗ ಸ್ಮಾರ್ಟಾಗಿ ನಗಬಹುದು, ಸ್ಮಾರ್ಟಾಗಿ ಸುತ್ತಲೂಬಹುದು.
-By ಪೇಜಾ