ಮೀಸಲಾತಿ ಭಿಕ್ಷೆಯಲ್ಲ ಹಕ್ಕು ಎನ್ನುವುದು ಸುಲಭ, ಆದರೆ ಅದು ಸಿಕ್ಕಿದ್ದು ಶೋಷಿತರ ಮೇಲೆತ್ತಲು. ಶೋಷಕರೇ ಆಳಲು ತೊಡಗಿದರೆ‌ ಮೀಸಲಾತಿ ಮುರಿದು ಮುಕ್ಕುವ ನಾನಾ‌ ನಾಟಕಗಳು ನಡೆಯುತ್ತವೆ.

ಬ್ರಿಟನ್‌ ಸಂಸತ್ತು ಭಾರತಕ್ಕೆ ಸ್ವಾತಂತ್ರ್ಯ ನೀಡುವ ಘೋಷಣೆ ಮಾಡಿದ ಬೆನ್ನಿಗೆ 1946ರ‌ ಡಿಸೆಂಬರ್ ತಿಂಗಳಲ್ಲಿ ಕೇಂದ್ರ ಜನಪ್ರತಿನಿಧಿ ಸಭೆಯು ಸೇರಿ 30ರಷ್ಟು ಸಮಿತಿಗಳನ್ನು ರಚಿಸಿತು. ಅದರಲ್ಲಿ ಸಂವಿಧಾನ ರಚನಾ ಸಮಿತಿ ಸಹ ಒಂದು. ಆಗ ಕಾನ್ಸ್ಟಿಟ್ಯೂಯೆಂಟ್‌ ಎಸೆಂಬ್ಲಿಯಲ್ಲಿ ಮೇಲ್ಜಾತಿ ಜನರದೇ ದರಬಾರು ಇದ್ದುದರಿಂದ ನಾನಾ ಸಮಿತಿಗಳಲ್ಲೂ ಅವರೇ‌ ತುಂಬಿದ್ದರು.

ನಾನಾ ವಿಷಯ ತಜ್ಞ ಡಾ. ಭೀಮರಾವ್ ರಾಮಜಿ ಅಂಬೇಡ್ಕರ್ ಅದಾಗಲೇ ಕಾನೂನು ಮಟ್ಟಿಗೆ ತನ್ನ ಹಿರಿಮೆ ತೋರಿದ್ದರು. ಆಗ ಮಹಾತ್ಮಾ ಗಾಂಧೀಜಿಯವರು ನೆಹರೂರಿಗೆ ಸಂವಿಧಾನ ಸಮಿತಿಯಲ್ಲಿ ಅಂಬೇಡ್ಕರ್ ಇರುವುದು ಮುಖ್ಯ ಎಂಬ ಕಿವಿಮಾತು ಹೇಳಿದರು. ಹಾಗಾಗಿ ಸಮಿತಿಗಳೆಲ್ಲ ರಚನೆಯಾದ ಬಳಿಕ ಎಂಟು ತಿಂಗಳು ದಾಟಿದ‌ ಮೇಲೆ ಅಂಬೇಡ್ಕರ್ ಅಧ್ಯಕ್ಷತೆಯಲ್ಲಿ ಸಂವಿಧಾನ ಕರಡು ‌ಸಮಿತಿ ರಚಿಸಿತು. 1947ರ ಆಗಸ್ಟ್  29ರಂದು ಡ್ರಾಫ್ಟಿಂಗ್ ಕಮಿಟಿ ರಚನೆಗೊಂಡಿತು. ಅಸಾದುಲ್ಲಾ ಎಂಬ ಮುಸ್ಲಿಂ, ಅಂಬೇಡ್ಕರ್ ಬಿಟ್ಟರೆ ಇದರಲ್ಲೂ ಅವರ ಬಾಹುಳ್ಯವೇ ಇತ್ತು.

ಅಂಬೇಡ್ಕರ್ ಅವರು ಕರಡು ರಚಿಸಿದ ಮೇಲೆ ಅದನ್ನು ಸಂವಿಧಾನ ಜಾರಿ ಸಮಿತಿಗೆ ನೀಡುವುದಷ್ಟೆ ಕೆಲಸ. ಆದ್ದರಿಂದ ಅಂಬೇಡ್ಕರ್ ಅವರಿಂದಲೇ ಸಂವಿಧಾನ ನಿರೂಪಣೆ ಬಯಸಿದ ಕಾಂಗ್ರೆಸ್  ಸರಕಾರವು ಕಾಂಗ್ರೆಸ್‌ನಲ್ಲಿ ಇರದಿದ್ದ ಅವರನ್ನು ‌ಕಾನೂನು ಮಂತ್ರಿ ಮಾಡಿ ಸಂವಿಧಾನ ಮಂಡಿಸಲು ಅವಕಾಶ ಮಾಡಿಕೊಟ್ಟಿತು. ಆಗಲೂ ಅಂಬೇಡ್ಕರ್ ನೀಡಿದ ಮೀಸಲಾತಿ ಕರಡನ್ನು ‌ಜನಪ್ರತಿನಿಧಿ ಸಭೆ ಒಪ್ಪುವುದು ಸುಲಭವಿರಲಿಲ್ಲ. ಆದರೆ ಹಕ್ಕು ಎಂದು ಅಲ್ಲ. ಶತಮಾನಗಳಿಂದ ಶೋಷಣೆಗೊಳಗಾದ ಸಮುದಾಯದವರು ಇತರ ಮುಂದುವರಿದ ಸಮುದಾಯದವರ ಜೊತೆ ಸಮಾನತೆ ಸಾಧಿಸುವವರೆಗೆ ಮೀಸಲಾತಿ ಇರಲಿ‌ ಎಂದು ಕಾಂಗ್ರೆಸ್ ಸರಕಾರ ಅದಕ್ಕೆ ಒಪ್ಪಿಗೆ ನೀಡಿತು.

ಅದರ ಅವಧಿಯೂ ಇಂದಿನವರೆಗೆ ಮುಂದುವರಿದು ಬಂದಿದೆ. ಈ ಅವಧಿಯಲ್ಲಿ ದಲಿತರ ಪ್ರಗತಿ ಪಟ್ಟಣಕೇಂದ್ರಿತವಾದುದು ಬೇರೆ ‌ವಿಚಾರ.

ಹಾವನೂರು ವರದಿ, ಮಂಡಲ್ ಸಮಿತಿ ‌ವರದಿ ಇತ್ಯಾದಿಯ‌ ಹಾದಿಯಲ್ಲಿ ಮೀಸಲಾತಿಯನ್ನು ‌ವಿಸ್ತರಿಸಲಾಯಿತು. ಅಂತಿಮವಾಗಿ ಸುಪ್ರೀಂ ಕೋರ್ಟ್ ಮೀಸಲಾತಿ 50 ಶೇಕಡಾ ಮಿರಬಾರದು ಎಂದದ್ದರಿಂದ ಹಿಂದುಳಿದ ಜಾತಿ ಜನಾಂಗದವರಿಗೆ 27 ಶೇಕಡಾ ‌ಮೀಸಲಾತಿ‌ ದೊರೆಯಿತು. ಈ ಸಮುದಾಯದವರ‌ ಪ್ರಮಾಣ ‌ಭಾರತದಲ್ಲಿ 70 ಶೇಕಡಾದಷ್ಟು.

ದಲಿತರ ಎಸ್ ಸಿ/ಎಸ್ ಟಿ ಮೀಸಲಾತಿಯನ್ನು ನಾನಾ ಅಡ್ಡ ಹಾದಿಯಿಂದ ಲಪಟಾಯಿಸಿದಂತೆಯೇ ಈ ಮೀಸಲಾತಿ ಲಾಭವನ್ನು ಅಡ್ಡ ಹಾದಿಯಿಂದ ಮೇಲಿನ ಜಾತಿ ಜನರು ಎಗರಿಸುವುದು ನಿಂತಿಲ್ಲ. ಈ ಬಗ್ಗೆ ಹಲವು ಪ್ರಕರಣಗಳು ಕೋರ್ಟ್ ಏರಿವೆ. ನಿಶ್ಚಿತ ಪ್ರಮಾಣದಲ್ಲಿ ಮೀಸಲಾತಿ ನೇಮಕ ನಡೆಯದ್ದರಿಂದ‌ ಬ್ಯಾಕ್ ಲಾಗ್ ಹುದ್ದೆ ನೇಮಕಾತಿ ‌ನಿಯಮ ಇದೆ; ನೇಮಕಾತಿ ‌ಸೊನ್ನೆ.

ಈಗ 2ಎ ಗಲಾಟೆ ಇದೆ. ಕರ್ನಾಟಕದಲ್ಲಿ ಈ 2ಎ ಭೂರಹಿತ ಕಸುಬುದಾರರಿಗೆ ಮೀಸಲಾತಿ ನೀಡುವ ವಿಭಾಗವಾಗಿದೆ. ಕರ್ನಾಟಕದಲ್ಲಿ   102 ಸಮುದಾಯಗಳು ಇದರಡಿ ಬರುತ್ತವೆ ಮತ್ತು ಇವುಗಳ ಸಂಖ್ಯೆ ಜಾತಿ ರೀತ್ಯಾ 300ಕ್ಕೂ ಹೆಚ್ಚು. ಪಂಚಮಸಾಲಿಗಳು  3ಬಿ ವಿಭಾಗದಲ್ಲಿ ಇದ್ದಾರೆ. 3ಎ ಮತ್ತು 3ಬಿ ವಿಭಾಗಗಳು ಭೂ ಒಡೆತನ ಹೊಂದಿದವರನ್ನು ಸೂಚಿಸುತ್ತದೆ. ಆದರೂ ಕೆಸಿಇಟಿ ಪರೀಕ್ಷೆ ಮೂಲಕ 3ಎ 3ಬಿಯವರು ಕೂಡ 2ಎ ಮೀಸಲಾತಿ ಪಡೆಯುವ ಒಳದಾರಿ ಇದೆ. ಎಂಜಿನಿಯರಿಂಗ್ ಪ್ರವೇಶ ‌ನೇಮಕಾತಿ 2ಎ ಮೀಸಲಾತಿ ಪಡೆಯಲು ಕುಟುಂಬದ ವರಮಾನ 8 ಲಕ್ಷ ರೂಪಾಯಿ ಒಳಗಿರಬೇಕು. ಮೇಲ್ಜಾತಿಯ ಸಮುದಾಯದವರು ‌ಈಗಾಗಲೇ ಇದರಡಿ 2ಎ ಅನುಕೂಲ ದೋಚಿದ್ದು ಕಣ್ಣಿಗೆ ರಾಚುತ್ತಿದೆ. ಹೀಗಾಗುವಾಗ ನಿಜವಾದ 2ಎ ವರ್ಗದ ಜನರು ಆ ಮೀಸಲಾತಿ ಪಡೆಯಲು ವಿಫಲವಾದ ಉದಾಹರಣೆ ಹಲವು. ಇಂತಹ ಮೊಕದ್ದಮೆ ಕೂಡ ಕೋರ್ಟ್ ‌ಏರಿವೆ.

ದಲಿತರ ‌ಮೀಸಲಾತಿ‌ ಅವರ ಜನಸಂಖ್ಯೆಗೆ‌‌ ತಕ್ಕಂತೆ ಇರುವುದರಿಂದ ಓಬಿಸಿ ಜನರ ಕೆಲಸ ದಲಿತರಿಗಾಗುವುದಿಲ್ಲ. ಆದರೆ ದಲಿತರು‌ ನಿಮ್ಮ ‌ಕೆಲಸ‌ ಹೊಡೆದುಕೊಂಡಿದ್ದಾರೆ ಎಂದು ಸುಳ್ಳು ಪ್ರಚಾರ ಮಾಡಿ, ಓಬಿಸಿ ‌ಜನರ ದಿಕ್ಕು ತಪ್ಪಿಸಿ ಓಬಿಸಿ ಮೀಸಲಾತಿಯನ್ನು ಮೇಲ್ಜಾತಿಯ ಜನರೇ ಬಗಲಿಗೆ ಹಾಕಿಕೊಳ್ಳುವುದು ನಡೆದಿದೆ.

ಪಂಚಮಸಾಲಿಗಳು 2ಎ ಮೇಲೆ ‌ಕಣ್ಣು ಹಾಕಲು ಕಾರಣ ಕೈ ಕಸುಬುದಾರರಿಗೆ ಇದರಡಿ ಮೀಸಲಾತಿ ಇದೆ. ಅದರ ಮೊದಲು ಭೂರಹಿತ ಕಸುಬುದಾರರು ಎಂಬಲ್ಲಿ ಭೂರಹಿತ ಎಂಬುದನ್ನು ಇವರು ಪಕ್ಕಕ್ಕೆ ತಳ್ಳಿದ್ದಾರೆ. ಪಂಚಮಸಾಲಿಗಳು ಲಿಂಗಾಯತರಲ್ಲಿನ ಆಚಾರಿ ಕಸುಬುದಾರರಾದುದರಿಂದ 2ಎ‌ ಮೇಲೆ ಕಣ್ಣು. ಇತರ ಆಚಾರಿಗಳಂತೆ ಇವರಿಗೆ ಜನಿವಾರ ಇಲ್ಲದಿರುವುದೂ ಒಂದು ಅನುಕೂಲ. ಆದರೆ ‌ಶಿವದಾರ ಇದೆಯಲ್ಲ?  300ಕ್ಕೂ ಹೆಚ್ಚು ಜಾತಿಗಳವರು ಈಗಾಗಲೇ 2ಎ ಅಡಿ ಈಗಾಗಲೇ ನ್ಯಾಯ ಸಿಗದೆ ಪರದಾಡುತ್ತಿದ್ದಾರೆ. ಇನ್ನು ಬಹುಸಂಖ್ಯಾತರಾದ ಹಾಗೂ ಭೂ ಒಡೆತನ ಹೊಂದಿದವರೂ ಆದ ಪಂಚಮಸಾಲಿಗಳಿಗೆ 2ಎ ವಿಭಾಗದಲ್ಲಿ ಜಾಗ ಕೊಟ್ಟರೆ ವಂಚಿತ ಓಬಿಸಿ ಜನರಿಗೆ ಮತ್ತೆ ‌ವಂಚಿಸಿದಂತೆ ಆಗುತ್ತದೆ. ಅದಕ್ಕಿಂತ ಮುಖ್ಯವಾಗಿ ಇದಕ್ಕೆಲ್ಲ ಕಾರಣ ಬಿಜೆಪಿ ಅಧಿಕಾರದಲ್ಲಿ ಇರುವುದು. ಮೀಸಲಾತಿ ಹೋರಾಟ ಎತ್ತಿಕಟ್ಟಿ ಇರುವ ಮೀಸಲಾತಿಗೆ ಕಲ್ಲು ಹಾಕುವ ಹುನ್ನಾರ ಈ ಬೇಡಿಕೆಗಳ ಹಿಂದೆ ಇದೆ. 


-By ಪೇಜಾ