ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ: ಕಳೆದ ಹಲವಾರು ತಿಂಗಳುಗಳಿಂದ ಮಾಧ್ಯಮಗಳಲ್ಲಿ ನಿರಂತರವಾಗಿ ಎಚ್ಚರಿಸಿದ ಪರಿಣಾಮವಾಗಿ ಮೂಡುಬಿದಿರೆ ಬಸ್ಸು ನಿಲ್ದಾಣದ ಪ್ರಯಾಣಿಕರ ತಂಗುದಾಣ ಸುಸ್ಥಿತಿಗೆ ಬಂದಿದೆ. ಅದಕ್ಕಾಗಿ ಪುರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು, ಅಧಿಕಾರಿಗಳು, ಸದಸ್ಯರುಗಳು ಎಲ್ಲರನ್ನು ಅಭಿನಂದಿಸಬೇಕಾಗಿದೆ. ಅದೇ ರೀತಿ ಕಿನ್ನಿಗೋಳಿ, ಬಿ ಸಿ ರೋಡ್, ಇರುವೈಲ್ ಕಡೆಗೆ ತೆರಳುವ ಬಸ್ಸುಗಳ ನಿಲುಗಡೆಯ ಹಿಂಬದಿಯಲ್ಲಿ ಕಸ ಕಡ್ಡಿಗಳಿಂದ ತುಂಬಿದ್ದ ಪ್ರದೇಶವನ್ನು ಸ್ವಚ್ಛಗೊಳಿಸಿ ಬಹಳ ಸುಂದರವಾಗಿಸಲಾಗಿದೆ. ಈ ಕೆಲಸ ನಡೆದು ಒಂದು ವಾರಗಳ ಕಾಲ ಮುಗಿದರೂ ಕೂಡ ಈತನಕ ಆ ಪ್ರದೇಶಕ್ಕೆ ದ್ವಿಚಕ್ರ ವಾಹನಗಳನ್ನು ಕೊಂಡು ಹೋಗುವುದಕ್ಕೆ ಬೇಕಾದ ವ್ಯವಸ್ಥೆಗಳನ್ನು ಇನ್ನೂ ಮಾಡಿರುವುದಿಲ್ಲ.
ವಿದ್ಯುತ್ ಟ್ರಾನ್ಸ್ ಫರ್ಮರ್ ತಡೆಗೋಡೆಗಳ ಒಟ್ಟಿಗೆ ಆ ಪ್ರದೇಶಕ್ಕೆ ತೆರಳುವ ಮಾರ್ಗದ ಅಡ್ಡವಾಗಿ ಬಸ್ಸುಗಳನ್ನು ಕೂಡ ಇರಿಸಲಾಗುತ್ತಿದೆ. ಸುಮಾರು 150-200 ದ್ವಿಚಕ್ರ ವಾಹನಗಳನ್ನು ನಿಲ್ಲಿಸುವ ಸ್ಥಳಾವಕಾಶದ ಉಪಯೋಗ ವಿಳಂಬವಾಗುತ್ತಿರುವುದರ ಉದ್ದೇಶ ತಿಳಿಯುತ್ತಿಲ್ಲ. ಆ ಪ್ರಕಾರ ಸಂಬಂಧಿತ ಉದ್ದೇಶಕ್ಕೆ ಮೇಲ್ಕಂಡ ಸ್ಥಳವನ್ನು ಉಪಯೋಗಿಸುತ್ತಿದ್ದಲ್ಲಿ, ಶಿರ್ತಾಡಿ, ನಾರಾವಿ ಕಡೆ ಚಲಿಸುವ ವಾಹನಗಳವರು ಬಹಳ ಆರಾಮವಾಗಿ ಅವರ ಪ್ರದೇಶದಲ್ಲಿ ಬಸ್ಸುಗಳನ್ನು ನಿಲ್ಲಿಸಲು ಸಾಧ್ಯವಾಗುತ್ತಿತ್ತು. ಆದರೆ ಈ ಕಾರ್ಯ ನಡೆದ ಕಾರಣ ಬಸ್ಸು ನಿಲ್ದಾಣದ ಅವ್ಯವಸ್ಥೆ ಹಿಂದಿನಂತೆಯೇ ಮುಂದುವರೆದಿದೆ.
ಆದಷ್ಟು ಶೀಘ್ರ ದ್ವಿಚಕ್ರ ವಾಹನಗಳನ್ನು ಸೂಕ್ತ ಸ್ಥಳಕ್ಕೆ ವರ್ಗಾಯಿಸುವ ಜರೂರತ್ತಿದೆ ಎಂದು ಶಿರ್ತಾಡಿ, ನಾರಾವಿ ಕಡೆಯ ಬಸ್ಸಿನ ಚಾಲಕ-ನಿರ್ವಾಹಕರು ಅಭಿಪ್ರಾಯ ಪಟ್ಟಿದ್ದಾರೆ.