1784ರಲ್ಲಿ ಬೋಳೂರಿನಲ್ಲಿ ಕಟ್ಟಿದ ಸುಲ್ತಾನ್ ಬತ್ತೇರಿ ವೀಕ್ಷಣಾ ಗೋಪುರ ಆಗಿರುವುದರೊಂದಿಗೆ ಮದ್ದು ಗುಂಡುಗಳ ನೆಲೆ ಸಹ ಆಗಿತ್ತು.
ಇಡೀ ಕರ್ನಾಟಕವನ್ನು ಆಳಿದ ಒಬ್ಬ ಅರಸು ಎಂದರೆ ಅದು ಟಿಪ್ಪು ಸುಲ್ತಾನ್ ಮಾತ್ರ. ಆದರೆ ಆತನ ಬಳಿಕ ತುಂಡಾದ ಅದು 1956ರಲ್ಲೂ ಪೂರ್ಣ ಒಂದಾಗಲಿಲ್ಲ. ಕರಾವಳಿಯಲ್ಲಿ ಟಿಪ್ಪು ವಿಜಯ ಸಾಧಿಸುವ ಹೊತ್ತಿಗೆ ಹಲವಾರು ಯುದ್ಧ ಮತ್ತು ಕಲ್ಲು ಕೋಟೆಗಳನ್ನು ಕಟ್ಟಿ ಹಣಕಾಸು ಮಿತವ್ಯಯದಲ್ಲಿದ್ದ. ಹಾಗಾಗಿ ಮಂಗಳೂರಿನಲ್ಲಿ ಒಂದು ಬುರುಜು ಮಾತ್ರ ಕಟ್ಟಿಸಿದ. ಬೆಂಗಳೂರಿನಲ್ಲಿ ಕೆಂಪೇಗೌಡ ಕಟ್ಟಿಸಿದ್ದ ಮಣ್ಣಿನ ಕೋಟೆಯನ್ನು ಕಲ್ಲಿನದಾಗಿಸಿದ್ದು ಸಹ ಹೈದರ್ ಟಿಪ್ಪು ಅವರುಗಳು.
ಫಿರಂಗಿಗಳು ಬಂದ ಮೇಲೆ ಸಾಮಾನ್ಯ ಕೋಟೆಗಳು ಫಿರಂಗಿ ಗುಂಡು ತಾಳುತ್ತಿರಲಿಲ್ಲ. ಫಿರಂಗಿ ದೊಡ್ಡದಾದಂತೆ ಭಾರೀ ಕಲ್ಲುಗಳ ಕೋಟೆಗಳು ಅನಿವಾರ್ಯ ಎನಿಸಿದವು. ಟಿಪ್ಪು ಸುಲ್ತಾನ್ ಕೆಳದಿಯನ್ನು ಗೆದ್ದುಕೊಳ್ಳುವುದರೊಂದಿಗೆ ಮಂಗಳೂರು ಕರಾವಳಿ ಟಿಪ್ಪುವಿನ ಮೈಸೂರು ರಾಜ್ಯಕ್ಕೆ ಸೇರಿತು. ಮರು ವರುಷವೇ ಸುಲ್ತಾನ್ ಬೋಳೂರಿನಲ್ಲಿ ವೀಕ್ಷಣಾ ಗೋಪುರ ಕಟ್ಟಿದ. ಅದು ಸುಲ್ತಾನ್ ಬತ್ತೇರಿ ಎಂದೇ ಕರೆಸಿಕೊಂಡಿತು. ಇದರ ಮೇಲೆ ನಿಂತರೆ ಅರಬ್ಬೀ ಸಮುದ್ರದಲ್ಲಿ ಓಡಾಡುವ ಹಡಗುಗಳು ಕಾಣಿಸುತ್ತವೆ. ಇದರಲ್ಲಿ ಫಿರಂಗಿ ಊರಲಾಗಿತ್ತು. ಬ್ರಿಟಿಷ್ ಹಡಗು ಇತ್ತ ಬಂದರೆ ಫಿರಂಗಿ ಸಿಡಿಯುತ್ತಿತ್ತು. ಅದಕ್ಕೆ ಅಗತ್ಯದ ಸೈನಿಕರು ಇಲ್ಲಿ ಕಾವಲಿದ್ದರು.
ಫಲ್ಗುಣಿ ನದಿಯ ದಡದ ಬೋಳೂರು, ಬೋಳಾರಗಳು ಬೊಳ್ಳದ ಊರು ಮತ್ತು ಬೊಳ್ಳದ ಅರುಗಳು. ಬೋಳೂರಿನಾಚೆ 8 ಕಿಮೀ ಉದ್ದಕ್ಕೆ ಬೆಂಗರೆ ಅಂಚು ಚಾಚಿಕೊಂಡಿದೆ. ಅದರಾಚೆ ಅರಬ್ಬೀ ಕಡಲು. ಬೋಳಾರು ಆಗಿನ ಬಂದರು. ಪೋರ್ಚುಗೀಸರು ಈಗಿನ ಮೀನುಗಾರಿಕಾ ಬಂದರು ಪ್ರದೇಶ ಬೆಳೆಸಿದರು. ಸ್ವತಂತ್ರ ಭಾರತದ ಆಧುನಿಕ ಬಂದರು ಪಣಂಬೂರು ಹಿಡಿದಿದೆ. ಮಂಗಳೂರು ಪ್ರಾಕೃತಿಕ ಬಂದರು ಅಲ್ಲ, ಅಗೆದು ಆಳಗೊಳಿಸಿದ ಬಂದರು ಇದು.
ಸುಲ್ತಾನ್ ಬತ್ತೇರಿ ಒಳಗೆ ಕೋಣೆಯಿದ್ದು ಸುಲ್ತಾನರ ಕಾಲದಲ್ಲಿ ಇಲ್ಲಿ ಗನ್ ಪೌಡರ್ ಶೇಖರಣೆ ಮಾಡುತ್ತಿದ್ದರು. ಮುಂದೆ ಅದನ್ನು ಮುಚ್ಚಲಾಯಿತು. ಹಾಗಾಗಿ ನಾವೀಗ ಒಳಗೆ ಹೋಗಿ ನೋಡುವುದು ಸಾಧ್ಯವಿಲ್ಲ.
ಇದು ಭಾರತೀಯ ಪುರಾತತ್ವ ಇಲಾಖೆಯು ಪಟ್ಟಿ ಮಾಡಿದ ರಕ್ಷಿತ ಚಾರಿತ್ರಿಕ ಮಹತ್ವದ ಕುರುಹು ಆಗಿದೆ. ಆದ್ದರಿಂದ ಇದಕ್ಕೆ ಹಾನಿ ಮಾಡಿದರೆ ಭಾರೀ ದಂಡ ಮತ್ತು ಸೆರೆಮನೆ ಶಿಕ್ಷೆ ಸಿಗುತ್ತದೆ. 1799ರಲ್ಲಿ ಯುದ್ಧ ರಂಗದಲ್ಲಿ ಹೋರಾಡುತ್ತ ಟಿಪ್ಪು ಮಡಿಯುವುದರೊಂದಿಗೆ ಇದು ಬ್ರಿಟಿಷರ ವಶವಾಯಿತು. 1837ರ ಕಲ್ಯಾಣಪ್ಪ ಕಾಟಕಾಯಿ ದಂಗೆಯ ಬಳಿಕ ಬ್ರಿಟಿಷರು ಇನ್ನೊಂದು ವೀಕ್ಷಣಾ ಗೋಪುರದ ಅಗತ್ಯ ಕಂಡುಕೊಂಡರು. ಅನಂತರ ಅವರು ಈಗಿನ ಬಾವುಟ ಗುಡ್ಡೆಯಲ್ಲಿ ದುರ್ಬೀನಿನಿಂದ ವೈರಿ ಹಡಗು ಗಮನಿಸಲು ಕಟ್ಟಿದ ವಾಚ್ ಟವರ್ ಸ್ವತಂತ್ರ ಭಾರತದಲ್ಲಿ ತಪ್ಪಭಿಪ್ರಾಯದಿಂದ ಲೈಟ್ ಹೌಸ್ ಎನಿಸಿಕೊಂಡಿದೆ.
-By ಪೇಜಾ