ಮುಂದೆ ನಿನ್ನ ಗುರಿ ಇದೆ, ಮುಂದೆ ಸಾಗು ಎಂದು ಚಿಕ್ಕವರಿಂದ ನಮಗೆ ತಲೆ ತುಂಬಿರುವುದು ನಾವು ನೋಡಿದ್ದೇವೆ. ಪ್ರತಿ ಬಾರಿಯು ತನ್ನ ಗುರಿ ಮುಟ್ಟಲು ಎಲ್ಲರು ಒದ್ದಾಡುತ್ತಿರುತ್ತಾರೆ. ಕೆಲವರು ಮುಟ್ಟುತ್ತಾರೆ, ಕೆಲವರು ಕೈ ಸೋತು ಸುಮ್ಮನಾಗುತ್ತಾರೆ.

ಕಾರು, ಬಂಗ್ಲೆ, ಉದ್ಯೋಗ, ಹಣ ಮಾಡುವುದು ಮಾತ್ರ ಗುರಿಯಲ್ಲ. ಮನುಷ್ಯ ಹುಟ್ಟಿ ನಡೆದಾಡುವ ಗುರಿ, ಊಟಮಾಡುವ ಗುರಿ, ಹೀಗೆ ಅವನು ಬೆಳೆದಂತೆಲ್ಲ ಅವನಗುರಿ ಬದಲಾಗುತ್ತ ಇರುತ್ತದೆ ಅವನು ಕೊನೆ ಉಸಿರೆಳೆಯುವವರೆಗೂ.

Pic Credit: https://lattice.com/

ನಮ್ಮ ಗುರಿ ಸಿದ್ದಯ್ಯ ಪುರಾಣಿಕರು  ಹೇಳಿದಂತೆ, ಮೊದಲು ಮಾನವನಾಗು. ಮೊದಲು ಮಾನವನಾಗಲು ಏನು ಬೇಕು, ಏನು ಬೇಡ ಎಂಬುದು ತಿಳಿಯುತ್ತ ಸಾಗಬೇಕು. ಸಮಾಜಕ್ಕೊಂದು ಪ್ರಜೆಯಾಗಬೇಕು.

ಹಣ, ಉದ್ಯೋಗ ಅದು ಇದು ಸಂಪಾದನೆಗೊಸ್ಕರ ಇನ್ಬೊಬ್ಬರನ್ನು ತುಳಿದು ಸಾಗುವುದಲ್ಲ. ಅಲ್ಲು ಗೋಲ್ಮಾಲ್ ಮಾಡಿ ಗೋಲ್ ರೀಚಾಗುವುದಲ್ಲ. ನಮ್ಮ ಸಾಧನೆ ಸತ್ತನಂತರವು ಹತ್ತಾರು ಜನಕ್ಕೆ ಮಾರ್ಗ ಅಥವಾ ಉಪಯೋಗ ಆಗುವಂತಿರಲಿ.

ಯಾಕೇ ಇವೆಲ್ಲ ಹೇಳುತ್ತಿದ್ದೇನೆಂದರೆ, ಹಿಂದೊಮ್ಮೆ ನಾನು ಒಂದು ಇಂಗ್ಲೀಷ್ ಚಲನ ಚಿತ್ರ ನೋಡಿದೆ. ಆ ಮೂವಿಯ ಹೆಸರು ನೆನಪಿಲ್ಲ, ಆದರೆ ಆ ಮೂವಿಯ ನೀತಿಪಾಠ ನನ್ನ ಮನಸ್ಸಿನಲ್ಲಿ ಇನ್ನೂ ಅಚ್ಚೊತ್ತಿದೆ.

ಅದು ಒಂದು ಕಾರ್ ರೇಸ್ ಪಂದ್ಯ. ಅದರ ನಿಯಮವೇನೆಂದರೆ, ಒಂದೊಂದು ಹಂತ ದಾಟಿದಾಗಲು ಒಂದೊಂದು ಕೀ ಸಿಗುತ್ತದೆ. ಮೂರು ಕೀ  ಸಿಗುವುದು ತುಂಬಾ ಕಷ್ಟ. ನೂರಕ್ಕೆ ಒಬ್ಬನಿಗೆ ಮಾತ್ರ. ಆ ಕೊನೆಯ ಕೀ ಸಿಕ್ಕಿದರೆ ಅವನು ಮುಂದೆ ಯಾವ ಕೆಲಸ ಮಾಡುವ ಹಾಗಿಲ್ಲ, ಅಷ್ಟು ಹಣ, ಬಂಗ್ಲೆ ಕಾರು ಕೊಡುತ್ತಿದ್ದರು.

ಆದರೆ ಅದರಲ್ಲಿ ಒಬ್ಬ ಗೆದ್ದ ವ್ಯಕ್ತಿ ಇದ್ದ. ಸೋತವರು ಕೂಡ ಇದ್ದರು. ಸೋತವರ ಆಲೋಚನೆ ಒಂದೇ ತರಹವಿತ್ತು. ಎಲ್ಲರು ಯೋಚಿಸಿದಂತೆ ಯೋಚಿಸಿ ಕೀಗಾಗಿ ಮುಂದೆ ಮುಂದೆ ಅಕ್ಕಪಕ್ಕ ಹೋಗಿ ಹುಡುಕುತ್ತಿದ್ದರು.

ಅವರ ಪೆಟ್ರೋಲ್ ಖಾಲಿಯಾದಾಗ ಅವರು ಸೋಲುತ್ತಿದ್ದರು. ಗುರಿ ಮಾತ್ರ ಅವರು ತಲುಪುತ್ತಿರಲಿಲ್ಲ.

ಒಂದು ಕುರಿ ಗುಂಡಿಗೆ ಬಿದ್ದರೆ ಇನ್ನೊಂದು ಕುರಿ ಹಳ್ಳಕ್ಕೆ ಬಿಳುತ್ತದಲ್ಲ ಹಾಗೇ..!

ಆದರೆ ಒಬ್ಬ ಗುರಿ ಸಾಧಿಸಿದ ಸಾಧಕನಿಗೆ ಕೊನೆಯ ಕೀ ಸಿಕ್ಕಿದ್ದು ಹೇಗೆಂದರೆ, ಎಲ್ಲರು ಮುಂದಿದೆ ಎಂದು ಹೋದರೆ ಅವನು ಮಾತ್ರ ಕಾರನ್ನು ಆದಷ್ಟೂ ಹಿಂದೆ ಓಡಿಸಿದ. ಅಲ್ಲಿ ಅವನಿಗೆ ಅವನ ಕೀ ದೊರಕಿತು.

ಇದು ಕೇವಲ ಕಾರಿನ ಪಂದ್ಯದ ಕಥೆಯಲ್ಲ, ನಮ್ಮ ಜೀವನದಲ್ಲು ಇದನ್ನು ಅಳವಡಿಕೆ ಮಾಡಿಕೊಳ್ಳಬೇಕು.

ಕೇವಲ ಮುನ್ನುಗ್ಗುತ್ತ ಸಾಗುವುದಲ್ಲ. ಹಿಂದಿನವರ ರೀತಿ, ಅವರ ಸ್ಥಿತಿ, ಅವರ ಗತಿ ಹಾಗು ಅವರೊಬ್ಬರಲ್ಲದೆ ಎಲ್ಲರ ಪ್ರಗತಿ. ಬದುಕಿದ ಶೈಲಿ  ಅವರ ಸಂಸ್ಕೃತಿ, ಅವರು ಯೋಚಿಸುತ್ತಿದ್ದ ಪರಿ ಇದನೆಲ್ಲ ಯೋಚಿಸಿ ನಮ್ಮ ಜೀವನದಲ್ಲಿ ಅಳವಡಿಕೆ ಮಾಡಿಕೊಂಡಾಗ ನಮಗೂ ಹಾಗೂ ನಾವಿರುವ ಸಮಾಜಕ್ಕೂ ಒಳಿತಾಗುವುದು. ನಮಗೂ ಅಂತಹ ಕೀ ದೊರಕಬಹುದು.

ಸರ್ವೇ ಜನಃ ಸುಖಿನೋ ಭವಂತು.

- ಮಸಣದ ಕಾವಲುಗಾರ (ನಾಗೇಶ್ ಗಡಿಗೇಶ್ವರ)