ಕಳೆದ ಮೂರ್ನಾಲ್ಕು ದಿನಗಳಿಂದ ರಶಿಯಾದಲ್ಲಿ ಡೆಲ್ಟಾ ರೂಪಾಂತರ ತಳಿಯ ಕೋವಿಡ್ ಸಾಂಕ್ರಾಮಿಕ ಹರಡಿದ್ದು, ಸಾವಿನ ಪ್ರಮಾಣ ಒಂದೇ ಸಮನೆ ಏರಿಕೆ ಆಗಿದೆ.
ಈಗಾಗಲೇ ಬಿದ್ದು ಹೋಗಿರುವ ಪ್ರವಾಸೋದ್ಯಮವನ್ನು ಬಡಿದೆಬ್ಬಿಸಲು ಕೊರೋನಾ ಮೀಟರ್ ಇತ್ಯಾದಿ ಕಾರ್ಯಕ್ರಮ ಹಮ್ಮಿಕೊಂಡಿರುವ ಇಯು- ಯೂರೋಪಿಯನ್ ಯೂನಿಯನ್ ಕಂಗಾಲಾಗಿದೆ. ಕೊರೋನಾ ವಯ್ರಸ್‌ಗಳಲ್ಲಿ ಡೆಲ್ಟಾ ತಳಿ ಅತಿ ವೇಗವಾಗಿ ಹರಡುವ ತಾಕತ್ತು ಹೊಂದಿರುವುದು ಯೂರೋಪ್ ದೇಶಗಳ ಆತಂಕ ಹೆಚ್ಚಿಸಿದೆ.
ಇತ್ತ ಆಸ್ಟ್ರೇಲಿಯಾದಲ್ಲೂ ಈ ವಾರ ಡೆಲ್ಟಾ ರೂಪಾಂತರ ತಳಿ ತನ್ನ ಆಟಾಟೋಪ ಆರಂಭಿಸಿರುವುದಾಗಿ ವರದಿಯಾಗಿದೆ.
ಬುಧವಾರ ರಶಿಯಾದಲ್ಲಿ 632 ಕೊರೋನಾ ಮರಣ ಆಗಿದೆ. ಇದು ಮೂರು ದಿನದ ಹಿಂದಿನ ಸಾವಿನ ದುಪ್ಪಟ್ಟು ಎನಿಸಿದೆ. ರಶಿಯಾ ಸಮರೋಪಾದಿಯಲ್ಲಿ ಇದನ್ನು ಎದುರಿಸುತ್ತಿದೆ. ಆದರೆ ದುಗುಡ ಮನೆ ಮಾಡಿದೆ.