ಮುಂಬಯಿ: ದಿ| ಚಂದ್ರಶೇಖರ್ ರಾವ್ ಮೆಮೋರಿಯಲ್ ಟ್ರಸ್ಟ್ ವತಿಯಿಂದ ಮತ್ತು ಮುಂಬಯಿ ಚುಕ್ಕಿ ಸಂಕುಲದ ಸಹಯೋಗದೊಂದಿಗೆ ಇಂದಿಲ್ಲಿ ರವಿವಾರ ಸಂಜೆ ದಿ. ಚಂದ್ರಶೇಖರ್ ರಾವ್ ಅವರ ಜನ್ಮದಿನ ಸ್ಮರಣಾರ್ಥವಾಗಿ ಮುಂಬಯಿ ಅವರ ನಿವಾಸದಲ್ಲಿ ಹಮ್ಮಿ ಕೊಂಡಿತ್ತು. ಅಂದು ಕವಿ ಕಾವ್ಯ ವಾಚನದ ಜೊತೆಗೆ ಧಾರಾವಿ ಕನ್ನಡ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ವಿತರಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಟ್ರಸ್ಟಿನ ಅಧ್ಯಕ್ಷೆ ಶ್ರೀದೇವಿ ಸಿ. ರಾವ್ ಅವರು, ನನ್ನ ಪತಿ ದಿ. ಚಂದ್ರಶೇಖರ್ ರಾವ್ ಅವರು ಸಾಹಿತ್ಯ ಪ್ರಿಯರಾಗಿದ್ದರು. ಸಾಹಿತಿಗಳೆಂದರೆ ಅವರಿಗೆ ಅಚ್ಚುಮೆಚ್ಚು. ಹೊಸ ಹೊಸ ಬರಹಗಾರರು ಬೆಳಕಿಗೆ ಬರಬೇಕು ಎಂದು ಬಯಸಿದವರು ಅವರು. ಅವರ ಇಚ್ಛೆಯಂತೆ ಈ ಟ್ರಸ್ಟ್ ನ ಮೂಲಕ ಅವರಿಗೆ ಪ್ರಿಯವಾದ ಸಾಹಿತ್ಯ ಕಾರ್ಯಕ್ರಮಗಳನ್ನು ಪ್ರತೀ ವರ್ಷ ಹಮ್ಮಿಕೊಂಡು ಬರುತ್ತಿದ್ದೇನೆ. ಇದಕ್ಕೆಲ್ಲ ಅವರೇ ಪ್ರೇರಣೆ. ಮುಂಬಯಿಯಲ್ಲಿ ಲೇಖಕರ ಬಹಳಷ್ಟು ಪ್ರತಿಗಳು ಪ್ರಕಟಗೊಳ್ಳುತ್ತವೆ. ಆದರೆ ಕೃತಿ ಸಮೀಕ್ಷೆ ಕಾರ್ಯಕ್ರಮಗಳು ಜರಗುವುದಿಲ್ಲ. ಈ ನಿಟ್ಟಿನಲ್ಲಿ ಪ್ರತಿ ವರ್ಷ ಕೃತಿ ಸಮೀಕ್ಷೆ ಕಾರ್ಯಕ್ರಮ ನಡೆಸಿ ಲೇಖಕರನ್ನು ಗೌರವಿಸುವಂತಹ ಯೋಜನೆಯನ್ನು ಟ್ರಸ್ಟಿನ ಮೂಲಕ ಹಾಕಿಕೊಳ್ಳಬೇಕೆಂದಿದ್ದೇನೆ. ಅದಕ್ಕೆ ತಮ್ಮೆಲ್ಲರ ಸಹಕಾರದ ಅಗತ್ಯವಿದೆಯೆಂದು ನುಡಿದರು.

ಮುಖ್ಯ ಅತಿಥಿಯ ಸ್ಥಾನದಿಂದ ಮಾತನಾಡಿದ ಕತೆಗಾರ್ತಿ ಡಾ| ದಾಕ್ಷಾಯಣಿ ಯಡಹಳ್ಳಿ ಅವರು ಚಂದ್ರಶೇಖರ್ ರಾವ್ ಅವರ ಸಾಹಿತ್ಯ ಪ್ರೇಮದಿಂದಾಗಿ ಇಂದಿಲ್ಲಿ ಸೇರಿರುವ ಸಾಹಿತ್ಯ ಅಭಿಮಾನಿಗಳನ್ನು ಕಂಡಾಗ ಮೂರು ಪೀಳಿಗೆಯ ಸಂಗಮವಾದಂತೆ ಅನ್ನಿಸುತ್ತದೆ. ಮಕ್ಕಳೆಂದರೆ ರಾವ್ ಅವರಿಗೆ ಅಚ್ಚುಮೆಚ್ಚು. ಸಾಹಿತಿಗಳೆಂದರೆ ಪ್ರಿಯರು. ಹಿರಿಯರೆಂದರೆ ಆದರ. ಹೀಗೆ ಇಂದಿನ ಈ ಕಾರ್ಯಕ್ರಮಕ್ಕೆ ಹಿರಿಯರು ಕಿರಿಯರೆಲ್ಲರೂ ಪ್ರೀತಿಯಿಂದ ಆಗಮಿಸಿರುವುದು ವಿಶೇಷವೇ ಆಗಿದೆ. ಇದೊಂದು ಅರ್ಥಪೂರ್ಣ ಕಾರ್ಯಕ್ರಮ ಎಂದು ನುಡಿದರು.
ಇನ್ನೋರ್ವ ಅತಿಥಿ ಲೇಖಕಿ ಲತಾ ಸಂತೋಷ್ ಶೆಟ್ಟಿ ಅವರು ಮಾತನಾಡುತ್ತಾ ನಾವು ಎಷ್ಟು ದಿನ ಬದುಕಿದ್ದೇವೆ ಎನ್ನುವುದಕ್ಕಿಂತ ಹೇಗೆ ಬದುಕಿದ್ದೇವೆ ಎನ್ನುವುದು ಮುಖ್ಯ. ಏನು ಬಿಟ್ಟು ಹೋಗಿದ್ದೇವೆ ಎನ್ನುವುದಕ್ಕಿಂತ ಏನು ಬಿತ್ತಿ ಹೋಗಿದ್ದೇವೆ ಎನ್ನುವುದು ಮುಖ್ಯ. ಚಂದ್ರಶೇಖರ್ ಅವರ ಧರ್ಮಪತ್ನಿ ಶ್ರೀದೇವಿಯವರು ಪತಿಯ ಇಚ್ಛೆಯಂತೆ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಾಹಿತ್ಯ ಪ್ರೇಮವನ್ನು ಮೆರೆಯುತ್ತಿರುವುದು ನಿಜಕ್ಕೂ ಶ್ಲಾಘನೀಯವಾದುದು ಎಂದರು.

ಅಂದು ನೆರೆದವರಲ್ಲಿ ಶೋಭಾ ಎಸ್ ಶೆಟ್ಟಿ, ಕುಮದಾ ಶೆಟ್ಟಿ, ದೀಪ ಶೆಟ್ಟಿ, ಸರೋಜಾ ಅಮಾತಿ, ಗಾಯತ್ರಿ ನಾಗೇಶ್, ಚುಕ್ಕಿ ಸಂಕುಲದ ಗೋಪಾಲ ತ್ರಾಸಿ, ಡಾ| ಜಿ.ಪಿ. ಕುಸುಮಾ ಸ್ವರಚಿತ ಕವನಗಳನ್ನು ವಾಚಿಸಿದರು. ಇದೇ ಸಂದರ್ಭದಲ್ಲಿ ಡಾ.ಜಿ.ಪಿ.ಕುಸುಮಾ ಚಂದ್ರಶೇಖರ್ ರಾವ್ ಅವರ ಎರಡು ಕವನಗಳನ್ನು ಪ್ರಸ್ತುತ ಪಡಿಸಿದರು. ಶ್ರೀಕಾಂತ್ ಅಮಾತಿಯವರು ಹಾಡೊಂದನ್ನು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದಲ್ಲಿ ಚಂದ್ರಶೇಖರ ರಾವ್ ಅವರ ಅಭಿಮಾನಿಗಳು ತಮ್ಮ ಮನೋಗತವನ್ನು ವ್ಯಕ್ತಪಡಿಸಿದರು.

ಬಳಿಕ ಧಾರಾವಿ ಕನ್ನಡ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಟ್ರಸ್ಟಿನ ಅಧ್ಯಕ್ಷೆ ಶ್ರೀದೇವಿ ರಾವ್ ಅವರು ವಿದ್ಯಾರ್ಥಿ ವೇತನ ಮತ್ತು ನೆನಪಿನ ಕಾಣಿಕೆಯನ್ನು ವಿತರಿಸಿದರು.
ಕಾರ್ಯಕ್ರಮದ ಆರಂಭದಲ್ಲಿ ಅಂಜಲಿ ಶಿಧೋರೆ ಅವರು ಪ್ರಾರ್ಥನಾ ಗೀತೆ ಹಾಡಿದರು. ಚುಕ್ಕಿ ಸಂಕುಲದ ಪರವಾಗಿ ಡಾ. ಜಿ.ಪಿ. ಕುಸುಮಾ ಅವರು ಕಾರ್ಯಕ್ರಮ ನಿರೂಪಿಸಿ ವಂದಿಸಿದರು.