ಮುಂಬಯಿ: ಮಕರ ಸಂಕ್ರಮಣ ಪರ್ವ ಕಾಲದಲ್ಲಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್, ಗೋಕುಲ, ಸಾಯನ್ ಮತ್ತು ಬಿ.ಎಸ್.ಕೆ.ಬಿ ಅಸೋಸಿಯೇಶನ್‍ನ ಸಹಯೋಗದೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಮಹಾಪೂಜೆಯನ್ನು ರವಿವಾರ (ಜ.14) ರಂದು ಗೋಕುಲ ಸಭಾಗೃಹದಲ್ಲಿ ಸಂಭ್ರಮದಿಂದ ಆಚರಿಸಿತು.

ಬಿ.ಎಸ್. ಕೆ.ಬಿ. ಎಸೋಸಿಯೇಶನ್ ಜತೆ ಕೋಶಾಧಿಕಾರಿ ಗಣೇಶ್ ಭಟ್‍ಮತ್ತು ಶುಭಾ ಭಟ್ ದಂಪತಿ ಅವರ ಯಜಮಾನತ್ವದಲ್ಲಿ, ವೇ| ಮೂ| ದರೆಗುಡ್ಡೆ ಶ್ರೀನಿವಾಸ್ ಭಟ್ ಅವರ ಪ್ರಧಾನ ಪೌರೋಹಿತ್ಯದಲ್ಲಿ ದೇವತಾ ಪ್ರಾರ್ಥನೆ, ಮಹಾಮಂಗಳಾರತಿ, ಸಾಮೂಹಿಕ ಸಂಕಲ್ಪದೊಂದಿಗೆ ಪೂಜಾ ವಿಧಿವಿಧಾನಗಳು ಸಾಂಪ್ರದಾಯಿಕವಾಗಿ ನೆರವೇರಿದವು. ವೇ| ಮೂ| ದರೆಗುಡ್ಡೆ ಶ್ರೀನಿವಾಸ್ ಭಟ್ ತಮ್ಮ ಪ್ರಾರ್ಥನೆಯಲ್ಲಿ "ಭಗವಾನ್ ಸೂರ್ಯ ತನ್ನ ಪಥವನ್ನು ಬದಲಿಸುವ ಮಕರ ಸಂಕ್ರಾಂತಿಯ ಪರ್ವ ಕಾಲದಿಂದ ಉತ್ತರಾಯಣ ಪರ್ವಕಾಲ ಪ್ರಾರಂಭವಾಗುತ್ತದೆ. ಇದು ಪ್ರವಚನ, ಪೂಜಾದಿ ಸತ್ಕರ್ಮಗಳಿಗೆ ಅತ್ಯಂತ ಪ್ರಶಸ್ತ ಕಾಲ. ಇನ್ನು ಕೆಲವೇ ದಿವಸಗಳಲ್ಲಿ ಹಿಂದೂಗಳ ಶತಶತಮಾನಗಳ ಹೋರಾಟದ ನಂತರ ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕನಸು ನನಸಾಗಲಿದೆ. ಮರ್ಯಾದಾ ಪುರುಷೋತ್ತಮ ಶ್ರೀ ರಾಮಚಂದ್ರನ ದಿವ್ಯ ಮೂರ್ತಿ ಪ್ರತಿಷ್ಠೆಯಾಗಲಿದೆ. ಇದು ನಮಗೆಲ್ಲಾ ದೊಡ್ಡ ಹಬ್ಬ. ನಾವೆಲ್ಲಾ ಈ ಪವಿತ್ರ ಹಬ್ಬವನ್ನು ಸಂಭ್ರಮಿಸೋಣ ಎಂದರು.

ಸಂಕ್ರಮಣದ ಈ ಪರ್ವ ಕಾಲದಲ್ಲಿ ಗೋಕುಲ ಶ್ರೀ ಗೋಪಾಲಕೃಷ್ಣನ ಸನ್ನಿಧಿಯಲ್ಲಿ, ಸಹಸ್ರ ನಾಮಾರ್ಚನೆ, ಹರಿನಾಮ ಸಂಕೀರ್ತನೆಯೊಂದಿಗೆ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಇಂದು ನಾವು ಆಚರಿಸಿದ್ದೇವೆ. ಈ ಪ್ರಸನ್ನ ಕಾಲದಲ್ಲಿ, ನೆರೆದ ಸದ್ಭಕ್ತರಿಗೆಲ್ಲಾ ಆಯುರಾರೋಗ್ಯ ಸುಖ ಸಂಪತ್ತನ್ನಿತ್ತು ಸದಾ ರಕ್ಷಿಸಲಿ ಎಂದು ಭಗವಂತನನ್ನು ಭಕ್ತಿಯಿಂದ ಬೇಡಿಕೊಳ್ಳೋಣ" ಎಂದು ಅನುಗ್ರಹ ನುಡಿಗಳನ್ನಾಡಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಗೋಕುಲ ಭಜನಾ ಮಂಡಳಿ ಮತ್ತು ವಲಯದ ಭಜನಾ ಮಂಡಳಿಗಳಾದ ಮಧ್ವೇಶ ಭಜನಾ ಮಂಡಳಿ, ಗೋಪಾಲಕೃಷ್ಣ ಭಜನಾ ಮಂಡಳಿ, ಹರಿಕೃಷ್ಣ ಭಜನಾ ಮಂಡಳಿ, ವಿಠಲ ಭಜನಾ ಮಂಡಳಿ, ಸ್ಕಂದ ಭಜನಾ ಮಂಡಳಿಯವರಿಂದ ಶ್ರೀ ಕೃಷ್ಣನಿಗೆ ಅತಿಪ್ರಿಯವಾದ ಕೊಳಲು ಮತ್ತು ವೃಂದಾವನ ಆಧಾರಿತ ದಾಸರ ಪದಗಳ ಹರಿನಾಮ ಸಂಕೀರ್ತನೆ ನೆರವೇರಿತು. ಗೋಕುಲ ಮಹಿಳಾ ವಿಭಾಗದವರಿಂದ ಅರಿಸಿನ ಕುಂಕುಮ, ಎಳ್ಳು0ಡೆ ವಿತರಣೆ ಜರಗಿತು.

ಈ ಸಂದರ್ಭದಲ್ಲಿ ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ನ ವಿಶ್ವಸ್ಥ ಮಂಡಳಿ ಮತ್ತು ಧಾರ್ಮಿಕ ಸಮಿತಿ ಸದಸ್ಯರು, ಬಿ. ಎಸ್.ಕೆ.ಬಿ. ಎಸೋಸಿಯೇಶನ್‍ನ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದರು. ಶ್ರೀ ಗೋಪಾಲಕೃಷ್ಣ ದೇವರಿಗೆ ನಿತ್ಯ ಪೂಜೆಯಾದ ನಂತರ ತೀರ್ಥ ಪ್ರಸಾದ ವಿತರಣೆ, ಪ್ರಸಾದ ಭೋಜನ ನೆರವೇರಿತು.