ಉಜಿರೆ:  1968ರ ಅಕ್ಟೋಬರ್ 24 ರಂದು ಧರ್ಮಸ್ಥಳದಲ್ಲಿರುವ ನೆಲ್ಯಾಡಿ ಬೀಡಿನಲ್ಲಿ (ಹೆಗ್ಗಡೆಯವರ ಮೂಲ ನಿವಾಸ) ಅಂದಿನ ವೀರೇಂದ್ರ ಕುಮಾರ್ ತನ್ನ 21 ನೆ ವರ್ಷ ಹರೆಯದಲ್ಲಿ 21ನೆ ಧರ್ಮಧಿಕಾರಿಯಾಗಿ ಸಂಪ್ರದಾಯದಂತೆ ಪಟ್ಟಾಭಿಷಿಕ್ತರಾದರು.

ಸತ್ಯ, ಧರ್ಮ, ನ್ಯಾಯ, ನೀತಿ ನೆಲೆನಿಂತ  ಪವಿತ್ರ ಸ್ಥಳ ಧರ್ಮಸ್ಥಳ. ಸರ್ವಧರ್ಮೀಯರಿಗೂ ಶ್ರದ್ಧಾ-ಭಕ್ತಿಯಕೇಂದ್ರವಾದ ಧರ್ಮಸ್ಥಳದಲ್ಲಿ  ಅನ್ನದಾನ, ವಿದ್ಯಾದಾನ, ಔಷಧಿದಾನ ಮತ್ತು ಅಭಯದಾನ ನಿತ್ಯೋತ್ಸವವಾಗಿದೆ. “ಮಾತು ಬಿಡ ಮಂಜುನಾಥ” ಎಂಬುದು ಧರ್ಮಸ್ಥಳಕ್ಕೆ ಸಂಬಂಧಪಟ್ಟಂತೆ ಎಲ್ಲರಿಗೂ ಚಿರಪರಿಚಿತವಾಗಿದೆ.

ಸಾಧನೆಗಳ ಸರದಾರ: ದೇವಸ್ಥಾನದ ಪೂಜೆ, ಉತ್ಸವಗಳು, ಕಾಲಾವಧಿಜಾತ್ರೆ ಮೊದಲಾದ ಕಾರ್ಯಗಳ ಜೊತೆಗೆ ಲೋಕಕಲ್ಯಾಣಕ್ಕಾಗಿ ಅನೇಕ ಸಮಾಜಮುಖಿ ಸೇವಾಕಾರ್ಯಗಳನ್ನು ಡಿ. ವೀರೇಂದ್ರ ಹೆಗ್ಗಡೆಯವರು ಪ್ರಾರಂಭಿಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ದೇಶದೆಲ್ಲೆಡೆ ಗ್ರಾಮಾಭಿವೃದ್ಧಿ ಮತ್ತು ಸ್ವ-ಉದ್ಯೋಗ ತರಬೇತಿ ಕೇಂದ್ರಗಳು, ಉಜಿರೆ, ಮಂಗಳೂರು, ಬೆಂಗಳೂರು, ಮೈಸೂರು, ಉಡುಪಿ, ಧಾರವಾಡದಲ್ಲಿ ಕೆ.ಜಿ.ಯಿಂದ ಪಿ.ಜಿ. ವರೆಗಿನ ಶಿಕ್ಷಣ ಸಂಸ್ಥೆಗಳು, ಎಂಜಿನಿಯರಿಂಗ್, ಮೆಡಿಕಲ್, ನರ್ಸಿಂಗ್, ಆಯುರ್ವೇದ, ಪ್ರಕೃತಿ ಚಿಕಿತ್ಸಾ ಆಸ್ಪತ್ರೆಗಳು (ಉಜಿರೆ, ಪರೀಕಾ, ಬೆಂಗಳೂರು) ಬೆಂಗಳೂರು, ಮೈಸೂರು, ಬೆಳ್ತಂಗಡಿ, ಭದ್ರಾವತಿ ಬಂಟ್ವಾಳದಲ್ಲಿ ಕಲ್ಯಾಣ ಮಂಟಪಗಳ ನಿರ್ಮಾಣ, ಪ್ರತಿವರ್ಷ ಧರ್ಮಸ್ಥಳದಲ್ಲಿ ಉಚಿತ ಸಾಮೂಹಿಕ ವಿವಾಹ, ಕೆರೆಗಳಿಗೆ ಕಾಯಕಲ್ಪ, ಶ್ರದ್ಧಾ ಕೇಂದ್ರಗಳ ಸ್ವಚ್ಛತಾ ಅಭಿಯಾನ, ಶಾಲೆಗಳಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ, ಅಳಿವಿನಂಚಿನಲ್ಲಿರುವ ಐತಿಹಾಸಿಕ ಸ್ಮಾರಕಗಳು ಮತ್ತು ದೇಗುಲಗಳ ಜೀರ್ಣೋದ್ಧಾರ ಮತ್ತು ಸಂರಕ್ಷಣೆ- ಮಂಜೂಷಾ ವಸ್ತಸಂಗ್ರಹಾಲಯ, ಶಾಸನಗಳು ಮತ್ತು ತಾಳೆಗರಿಗಳ ಸಂರಕ್ಷಣಾ ಕಾರ್ಯಇವೆಲ್ಲ ಲೋಕ ಕಲ್ಯಾಣಕ್ಕಾಗಿ ಹೆಗ್ಗಡೆಯವರ ಚಿಂತನಾ ಲಹರಿಯಲ್ಲಿ ಮೂಡಿ ನನಸಾದ ಯಶಸ್ವಿ ಯೋಜನೆಗಳು.

ಇವರ ಸೇವೆ-ಸಾಧನೆ, ದಕ್ಷ ನಾಯಕತ್ವಗುಣ ಹಾಗೂ ಕಾರ್ಯ ವೈಖರಿಯನ್ನು ಮನ್ನಿಸಿ ಪ್ರಧಾನಿ ನರೇಂದ್ರ ಮೋದಿಯವರೆ ಇವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿರುವುದು ಧರ್ಮಸ್ಥಳಕ್ಕೆ ಸಂದ ಮಾನ್ಯತೆ ಹಾಗೂ ಗೌರವವಾಗಿದೆ.

ನಾಳಿನ ಕಾರ್ಯಕ್ರಮಗಳು: ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮಂಗಳವಾರ ಬೆಳಿಗ್ಯೆ ಶ್ರೀ ಮಂಜುನಾಥ ಸ್ವಾಮಿದೇವಸ್ಥಾನ ಮತ್ತು ಭಗವಾನ್ ಶ್ರೀ ಚಂದ್ರನಾಥ ಸ್ವಾಮಿ ಬಸದಿಗೆ ಹೋಗಿ ದೇವರದರ್ಶನ ಮಾಡಿ ಲೋಕಕಲ್ಯಾಣಕ್ಕಾಗಿ ವಿಶೇಷ ಪೂಜೆ, ಪ್ರಾರ್ಥನೆ ಸಲ್ಲಿಸುವರು.

ಬಳಿಕ ಹೆಗ್ಗಡೆಯವರ ನಿವಾಸದಲ್ಲಿ (ಬೀಡಿನಲ್ಲಿ)  ಊರಿನ ನಾಗರಿಕರು, ಭಕ್ತರು, ಆಪ್ತರು, ಅಭಿಮಾನಿಗಳು, ಜನಪ್ರತಿನಿಧಿಗಳು ಹೆಗ್ಗಡೆಯವರಿಗೆ ಫಲಪುಷ್ಪ ಅರ್ಪಿಸಿ ಶ್ರದ್ಧಾ-ಭಕ್ತಿಯಿಂದ ಗೌರವಾರ್ಪಣೆ ಮಾಡುವರು.

ಅಪರಾಹ್ನ ಐದು ಗಂಟೆಗೆ ಮಹೋತ್ಸವ ಸಭಾಭವನದಲ್ಲಿ ಅಭಿನಂದನಾ ಸಮಾರಂಭ ನಡೆಯುತ್ತದೆ. ಉಜಿರೆಎಸ್.ಡಿ.ಎಂ. ಕಾಲೇಜಿನ ಸ್ಥಾಪಕ ಪ್ರಾಂಶುಪಾಲ ಹಾಗೂ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ. ಎಸ್. ಪ್ರಭಾಕರ್‍ ಅಭಿನಂದನಾ ಭಾಷಣ ಮಾಡುವರು.

ಕ್ಷೇತ್ರದ ಹಿರಿಯ ನೌಕರರನ್ನು ಹಾಗೂ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಹೆಗ್ಗಡೆಯವರು ಸನ್ಮಾನಿಸುವರು. ಮುಂದೆ ಅನುಷ್ಠಾನಗೊಳಿಸುವ ಹೊಸ ಯೋಜನೆಗಳನ್ನು ಕೂಡಾ ಅವರು ಪ್ರಕಟಿಸುವರು.

ಧರ್ಮಸ್ಥಳದಲ್ಲಿ ಎಲ್ಲೆಲ್ಲೂ ಸಂಭ್ರಮ-ಸಡಗರ. ಹಬ್ಬದ ವಾತಾವರಣ. ದೇವಸ್ಥಾನ, ಬೀಡು ಹಾಗೂ ವಿವಿಧ ಕಟ್ಟಗಳನ್ನು ಆಕರ್ಷಕ ವಿನ್ಯಾಸದಿಂದ ಅಲಂಕರಿಸಲಾಗಿದೆ. ಜೊತೆಗೆ ನವರಾತ್ರಿ ಸಂಭ್ರಮ ವಿಶೇಷ ಮೆರುಗನ್ನು ನೀಡಿದೆ. ಸರಣಿ ರಜೆಯಿಂದಾಗಿ ನಾಡಿನೆಲ್ಲೆಡೆಯಿಂದ ಬಂದ ಭಕ್ತರಗಡಣವೂ ಇದೆ.