ಬಂಡ ಜಾಯಮಾನದವನು ಕಣ್ರೀ ಇವನು..ಎಷ್ಟು ಬೈದ್ರೂ ಮತ್ತೆ ಮತ್ತೆ ಅದೇ ಮೊಂಡಾಟ ಮಾಡ್ತಾನೆ. ಧಿಮಾಕು ತೀರ್ಸೋಕೆ ಹೊಟ್ಟೆ ಕೇಳ್ಬೇಕಲ್ಲ !? ಕೂಳು ಬಿದ್ದಿಲ್ಲಾಂದ್ರೆ ಎಲ್ಲ ಅಹಂಕಾರ ಇಳಿದು ಹೋಗತ್ತೆ. ಆಗ ಹಿಂಗೆ ಬಂದು ಕೈಕಟ್ಟಿ ನಿಲ್ಲೋದು ನನ್ನೆದುರಿಗೆ...ಹೀಗೆ ಧನಿಕನೊಬ್ಬ ತನ್ನ ಒಣ ಪ್ರತಿಷ್ಠೆಯನ್ನು ಮತ್ತೊಬ್ಬ ಹೂಂಕರಿಸುವ ಮೂರ್ಖನೆದುರು ಬಡಾಯಿ ಕೊಚ್ಚಿಕೊಳ್ಳುತ್ತಾನೆ.
ಪಾಪ ಆ ಕೂಲಿಯವ ಇದನ್ನೆಲ್ಲಾ ಅನ್ನಿಸಿಕೊಂಡೂ ಸಹ, ಸ್ವಾಭಿಮಾನ ಬಿಟ್ಟು ಅವರೆದುರಿಗೆ ತಲೆತಗ್ಗಿಸಿ ನಿಂತಿರ್ತಾನೆ. ಯಾಕೆ ಅಂತ ಕೇಳಿ ನೋಡಿ ?
ಹೊಟ್ಟೆ ಪಾಡು ಸ್ವಾಮಿ... ನನ್ನನ್ನೇ ನಂಬಿರೊ ಕುಟುಂಬ ಉಪವಾಸ ಬೀಳಬೇಕಾಗುತ್ತೆ ಇವರು ಬೈದರು ಅಂತೇನಾದರು ನಾನು ಈ ಕೆಲಸ ಬಿಟ್ಟುಹೋದರೆ. ಮತ್ತೆಲ್ಲಿ ಕೆಲಸ ಹುಡುಕೋದು ? ದಿನಗೂಲಿ ಬದುಕು ನಮ್ಮದು. ಒಂದೊಂದು ದಿನದ ದುಡಿಮೆಯು ಅವಶ್ಯಕ...ಅಂತಾನೆ.
ಅಸಲಿಗೆ ಈ ಕೂಲಿಯವನಿಗಿರುವ ಸ್ವಾಭಿಮಾನ ಆ ಧನಿಕನಿಗಿರುವುದಿಲ್ಲ. ಈ ಕೂಲಿಯವ ಮಾಡಿದ ಕೆಲಸಕ್ಕೆ ತಕ್ಕ ಕೂಲಿ ಕೇಳುತ್ತಾನೆ. ಆ ಯಜಮಾನ ಹಿಂದೂಮುಂದೂ ಹಲ್ ಚಲ್ ಮಾಡಿ ಕೂಲಿ ಹಣದಲ್ಲೂ ಚೌಕಾಸಿ ಮಾಡಿ ಅರ್ಧ ಕತ್ತರಿ ಹಾಕುತ್ತಾನೆ. ಪಾಪ ಬಿಸಿಲಿನಲ್ಲಿ ದುಡಿದು ದಣಿದವ ಅಸಹಾಯಕತೆಯ ಕಣ್ಣು ಬಿಡುತ್ತಾ, ದುಡಿಸಿಕೊಂಡವನೆದುರು ಕೈಕಟ್ಟಿ ನಿಲ್ಲುತ್ತಾನೆ. ಮರುಮಾತಾಡಿದರೆ ಅಹಂಕಾರದ ಬೈಗುಳಗಳ ಸುರಿಮಳೆ. ಇಲ್ಲಿ ಬಿಟ್ಟರೆ ಮತ್ತೆಲ್ಲೊ ಕೆಲಸ ಅರಸಿ ಹೊರಡುವುದು ಬಹು ಪ್ರಯಾಸದ ಕೆಲಸ ಈ ಕೂಲಿಯವನಿಗೆ ಎಂದು ಆ ಧನಿಕ ಚೆನ್ನಾಗಿ ಬಲ್ಲವನೆ. ಅದಕ್ಕೆ ತನಗೆ ಬೇಕಾದಂತೆ ದುಡಿಸಿಕೊಂಡು ಬಿಡುತ್ತಾನೆ.
ಸ್ವಾತಂತ್ರ್ಯದ ಪ್ರಜಾಪ್ರಭುತ್ವ ದೇಶಲ್ಲಿದ್ದೇವೆ ನಾವು. ಆದರೆ ನಿಜಕ್ಕೂ ಉಳ್ಳವರ ದೌರ್ಜನ್ಯ ನಿಂತುಹೋಗಿದೆಯೇ !? ಬಹುಶಃ ಕಮ್ಮಿಯಾಗಿರಬಹುದು ಅಷ್ಟೇ !. ಸಾಹುಕಾರ ಸಂಪತ್ತು ಗುಡ್ಡೆಹಾಕಿ ಮೆರೆಯೋದು ಬದುಕಿಗಾಗೆಯೆ. ಹಾಗೆಯೆ ಆ ಕೂಲಿಯವನದ್ದೂ ಬದುಕೇ. ಆದರೆ ವಿಭಿನ್ನ ಯೋಜನೆಗಳಷ್ಟೆ. ಒಬ್ಬ ಬದುಕನ್ನು ಮತ್ತಷ್ಟು ಚೆಂದಗೊಳಿಸಿಕೊಂಡು ಮೆರೆಯಲು ದುಡಿಯುತ್ತಾನೆ. ಇನ್ನೊಬ್ಬ ಬದುಕೋದಕ್ಕಾಗಿ ದುಡಿತಾನೆ. ಅವನದ್ದು ಶೋಕಿ, ಇವನದ್ದು ಶೋಕ ಅಷ್ಟೇ ! ನಿಜವಾದ ಆತ್ಮತೃಪ್ತಿ ಯಾರಿಗಾಗಿರುತ್ತದೆ ? ಕೇವಲ ಹೊಟ್ಟೆ ತುಂಬಿಸಿಕೊಳ್ಳುವವನಿಗೋ ಅಥವಾ ಇನ್ನಷ್ಟು, ಮತ್ತಷ್ಟು ಎಂದು ಬಯಕೆಗಳೊಳಗೇ ಮುಳುಗಿ ಸುಂದರ ವಾಸ್ತವವನ್ನು ಕಳೆದುಕೊಳ್ಳುತ್ತ ಮುಪ್ಪಾಗುತ್ತಿರುವ ಅತೃಪ್ತನಿಗೋ ?!
ಯಾವುದೋ ಗಲ್ಲಿಯ ಮೂಲೆ ಅಂಗಡಿಯಲ್ಲಿ ಚಹಾ ಮಾರುವವನದ್ದೂ ಬದುಕೆ. ತಿಪ್ಪೆಯ ಎಂಜಲೆಲೆ ಕೆದಕಿ ಹಸಿವನಿಂಗಿಸಿಕೊಳ್ಳಲೆತ್ನಿಸುವ ಕೂಸಿನದ್ದೂ ಬದುಕೆ. ಎಲ್ಲರ ಹೋರಾಟವು ನಡೆವುದು ಬಂಡಗೇಡಿ ಬದುಕಿಗಾಗೆ..! ಥತ್ತೇರಿ...ಬರೀ ಬದುಕು ಅಂತ ಬಡ್ಕೊಳೊದೆ ಆಯ್ತು. ನಿಜಕ್ಕೂ ಬದುಕು ಎಂದರೇನು ? ವ್ಯಾಖ್ಯಾನಕ್ಕೆ ನಿಲುಕದ ಕಾವ್ಯವದು. ಒಬ್ಬರಿಗೊಂದೊಂದು ಅನುಭವ ನೀಡುವುದು. ಸ್ಪರ್ಶವಲ್ಲ, ವಾಸನೆಯಲ್ಲ, ಕೈಗೆಟಕುವ ವಸ್ತುವೂ ಅಲ್ಲ. ಆದರೂ ಬದುಕು ಅನ್ನುವುದೊಂದಿದೆ. ನಾವಿದ್ದು ಖುದ್ದಾಗಿ ಅನುಭವಿಸಿಯೇ ಅರ್ಥೈಸಿಕೊಳ್ಳಬೇಕಾಗಿರುವುದು. ಉತ್ತರ ಹುಡುಕುತ್ತಾ ಹೊರಟಷ್ಟು ಜಟಿಲವಾಗಿ ಮುಗಿದೇ ಹೋಗುವಂತದ್ದು..! ಉಸಿರಿರುವವರೆಗೂ ಘಮಿಸಿ, ಅರಸಿ ಬಂದವರಿಗೆ, ತನ್ನ ತಾ ಸುಟ್ಟುಕೊಂಡರೂ ಕಂದೀಲಾಗಿ ಉರಿದು, ಸುತ್ತಲೂ ಬೆಳಕ ಪಸರಿಸಿ, ಜಾತ್ರೆ ಮುಗಿದಮೇಲೆ ಯಾತ್ರೆ ಮುಗಿಸಿ ಬಂದಲ್ಲಿಗೇ ಮತ್ತೆ ಹೊರಡುವುದು. ಮರಳಿ ಮರೆಯಾಗುವುದು !
ಹೌದಲ್ಲವೇ..? ಎಲ್ಲರೂ ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ. ಆದರೆ ಕಾಲ ಕೊಂಚ ಬಂದಲಾಗಿದೆ. ಅಂತೆಯೇ ಬಯಕೆ_ಹರಕೆಗಳ ಪಟ್ಟಿಯೂ ಬೆಳೆಯುತ್ತಿದೆ. ಬರಿ ಹೊಟ್ಟೆ, ಬಟ್ಟೆಗಾಗಿ ನಾವಿಂದು ದುಡಿಮೆಯ ಹಿಂದೆ ಬಿದ್ದು ಮುಪ್ಪಾಗುತ್ತಿದ್ದೇವ ? ನಿಮ್ಮನ್ನೊಮ್ಮೆ ನೀವೆ ಕೇಳಿಕೊಳ್ಳಿ...ಅಂತಿಮವಾಗಿ ಜನ್ಮಸಾರ್ಥಕ್ಯದ ಭಾವ ಮೂಡಿದರೆ ಅದೇ ನಿಮ್ಮ ನಿಜವಾದ ಬದುಕು !!
_ಪಲ್ಲವಿ ಚೆನ್ನಬಸಪ್ಪ
(ಗಡೀಹಳ್ಳಿ. ಚಿಕ್ಕಮಗಳೂರು)