ಉಡುಪಿ ನ 21: ಕೌಟುಂಬಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದ ಕಾನೂನು ಕ್ರಮಗಳನ್ನು  ಕುರಿತು ತಳಮಟ್ಟದಲ್ಲಿಯೇ ಅರಿವು ಮೂಡಿಸುವ ಮೂಲಕ ಮಹಿಳೆಯರ ಮತ್ತು ಮಕ್ಕಳ ಮೇಲಾಗುವ ದೌರ್ಜನ್ಯ ಪ್ರಕರಣಗಳನ್ನು ಗಣನೀಯವಾಗಿ ಕಡಿಮೆ ಮಾಡಲು ಅಗತ್ಯ ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ ಅಧಿಕಾರಿಗಳಿಗೆ ಸೂಚಿಸಿದರು.

ಅವರು ಗುರುವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ವಿವಿಧ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. 

ಜಿಲ್ಲೆಯ ಸಖಿ ಒನ್ ಸ್ಟಾಪ್ ಹಾಗೂ ಸಾಂತ್ವನ ಕೇಂದ್ರಗಳಲ್ಲಿ ಹಲವು ವರ್ಷಗಳಿಂದ ಇತ್ಯರ್ಥವಾಗದೆ ಬಾಕಿ ಉಳಿದಿರುವ ದೌರ್ಜನ್ಯ ಪ್ರಕರಣಗಳನ್ನು ವೈಯಕ್ತಿಕ ಗಮನಹರಿಸಿ ಶೀಘ್ರವಾಗಿ ವಿಲೇವಾರಿ ಮಾಡುವುದರೊಂದಿಗೆ ಪ್ರಕರಣಗಳಿಗೆ ತಾರ್ಕಿಕ ಅಂತ್ಯ ಒದಗಿಸಬೇಕು ಎಂದರು.

ಜಿಲ್ಲೆಯಲ್ಲಿ ಸಖಿ ಒನ್ ಸ್ಟಾಪ್ ಕೇಂದ್ರದಲ್ಲಿ ಅಕ್ಟೋಬರ್ ಮಾಹೆವರೆಗೆ 180 ಪ್ರಕರಣಗಳು ದಾಖಲಾಗಿದ್ದು, 121 ಪ್ರಕರಣಗಳು ಇತ್ಯರ್ಥವಾಗಿ, 20 ಪ್ರಕರಣಗಳು ನ್ಯಾಯಾಲಯದಲ್ಲಿ, 8 ಪ್ರಕರಣಗಳು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಲ್ಲಿ, 9 ಪ್ರಕರಣಗಳು ಕಾನೂನು ಸಮಾಲೋಚನೆ ಹಾಗೂ 22 ಪ್ರಕರಣಗಳು ಆಪ್ತಸಮಾಲೋಚನೆಯಲ್ಲಿ ಬಾಕಿ ಉಳಿದಿದೆ. ಕುಂದಾಪುರ ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರದಲ್ಲಿ ಕ್ರಮವಾಗಿ 107 ಪ್ರಕರಣಗಳಲ್ಲಿ 94 ಇತ್ಯರ್ಥವಾಗಿ, 13 ಆಪ್ತ ಸಮಾಲೋಚನೆಯಲ್ಲಿ, ಉಡುಪಿಯಲ್ಲಿ 80 ರಲ್ಲಿ 71 ಪ್ರಕರಣ ಇತ್ಯರ್ಥವಾಗಿ, 8 ಆಪ್ತ ಸಮಾಲೋಚನೆಯಲ್ಲಿ ಹಾಗೂ ಕಾರ್ಕಳದಲ್ಲಿ 67 ಪ್ರಕರಣಗಳಲ್ಲಿ 53 ಇತ್ಯರ್ಥವಾಗಿ, 14 ಆಪ್ತ ಸಮಾಲೋಚನೆಯಲ್ಲಿದೆ. ಬಾಕಿ ಉಳಿದಿರುವ ಎಲ್ಲ ಪ್ರಕರಣಗಳನ್ನು ಆದಷ್ಟು ತ್ವರಿತಗತಿಯಲ್ಲಿ ವಿಲೇವಾರಿ ಮಾಡಬೇಕು. ಒಂದೊಂಮ್ಮೆ ಕೇಂದ್ರಗಳಲ್ಲಿ ಬಗೆಹರಿಸಲಾಗದಂತಹ ಜಟಿಲ ಪ್ರಕರಣಗಳಿದ್ದಲ್ಲಿ ಕಾನೂನು ಸಮಾಲೋಚನೆ ವರ್ಗಾಯಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ದೌರ್ಜನ್ಯ ಪ್ರಕರಣಗಳ ಬಗ್ಗೆ ಹಾಗೂ ಅವುಗಳಿಗೆ ದೊರೆಯುವ ಕಾನೂನು ನೆರವಿನ ಬಗ್ಗೆ ವ್ಯಾಪಕವಾಗಿ ಅರಿವು ಮೂಡಿಸುವ ಕಾರ್ಯವನ್ನು ಆಶಾ ಕಾರ್ಯಕರ್ತೆಯರು, ಅಂಗನವಾಡಿ, ಶಿಶು ಅಭಿವೃದ್ದಿ ಸಹಾಯಕರ ಮೂಲಕ ಕೈಗೊಳ್ಳಬೇಕು ಎಂದು ಅವರು ಹೇಳಿದರು.

ಹದಿಹರೆಯದ ಬಾಲಕಿಯರು ಹಾಗೂ ಮಹಿಳೆಯರಲ್ಲಿ ರಕ್ತಹೀನತೆ ಒಂದು ಗಂಭೀರ ಸಮಸ್ಯೆಯಾಗಿದ್ದು, ಇದು ಇನ್ನಿತರ ರೋಗಗಳಿಗೆ ಕಾರಣವಾಗುತ್ತದೆ. ಪೌಷ್ಠಿಕ ಆಹಾರ ಸೇವನೆಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದ ಅವರು, ಸರಕಾರಿ ವಸತಿ ನಿಲಯ ಹಾಗೂ ಉದ್ಯೋಗ ನಿಲಯಗಳಲ್ಲಿರುವ ಬಾಲಕಿಯರು ಹಾಗೂ ಮಹಿಳೆಯರಿಗೆ ಪೌಷ್ಟಿಕಾಂಶಯುಕ್ತ ಆಹಾರ ನೀಡಬೇಕು ಎಂದರು.

ಶಿಶುಪಾಲನಾ ಕೇಂದ್ರಗಳಲ್ಲಿರುವ 6 ತಿಂಗಳು ಮೀರಿದ ಶಿಶುಗಳಿಗೆ ಹಾಲಿನ ಜೊತೆಗೆ ಇತರ ಪೌಷ್ಟಿಕ ಆಹಾರ ನೀಡಬೇಕು ಎಂದ ಅವರು, ಮಹಿಳೆಯರು ಸ್ವ-ಉದ್ಯೋಗ ಕೈಗೊಳ್ಳಲು ಸಹಾಯಕವಾಗುವಂತೆ ಸಂಜೀವಿನಿ ಕಾರ್ಯಕರ್ತೆಯರಿಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಯೋಜನೆಯಡಿ ನೋಂದಾಯಿಸಿ ಗರಿಷ್ಟ ಅನುದಾನ ದೊರಕುವಂತೆ ಕ್ರಮಕೈಗೊಳ್ಳಬೇಕು ಎಂದರು.

ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ ನಿರ್ಮಾಣ ಕಾರ್ಯಗಳ ಪ್ರಗತಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಕಟಪಾಡಿಯಲ್ಲಿ ನಿರ್ಮಾಣವಾಗುತ್ತಿರುವ ವಸತಿ ಗೃಹ ಹಾಗೂ ಮಣಿಪಾಲದಲ್ಲಿರುವ ಕಟ್ಟಡದ ನವೀಕರಣ ಕಾರ್ಯಗಳನ್ನು ಆದ್ಯತೆಯ ಮೇರೆಗೆ ಕೈಗೊಂಡು ಶೀಘ್ರದಲ್ಲೇ ಪೂರ್ಣಗೊಳಿಸಬೇಕು. ಮಹಿಳೆಯರು ಕೆಲಸದ ಸ್ಥಳದಲ್ಲಿ ಎದುರಿಸುವ ಲೈಂಗಿಕ ಕಿರುಕುಳದ ಬಗ್ಗೆ ದೂರು ಸಲ್ಲಿಸಲು ಅನುಕೂಲವಾಗುವಂತೆ, ಹತ್ತು ಜನರಿಗಿಂತ ಹೆಚ್ಚು ಉದ್ಯೋಗಿಗಳಿರುವ ಎಲ್ಲ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಆಂತರಿಕ ದೂರು ಸಮಿತಿಯನ್ನು ರಚಿಸಬೇಕು ಎಂದ ಅವರು, ದಾಖಲಾದ ದೂರುಗಳು ಮತ್ತು ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ವರದಿ ನೀಡಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಮಾತನಾಡಿ, ಸಖಿ ಹಾಗೂ ಸಾಂತ್ವನ ಕೇಂದ್ರಗಳಲ್ಲಿ ಪ್ರಕರಣಗಳನ್ನು ಹೆಚ್ಚು ಸಮಯ ಉಳಿಸಿಕೊಳ್ಳದೆ ಅವುಗಳನ್ನು ಪ್ರಾಧಿಕಾರಕ್ಕೆ ವರ್ಗಾಯಿಸಬೇಕು. ಕೇಂದ್ರಗಳಿಗೆ ಬರುವ ಪ್ರಕರಣಗಳ ಸಂಖ್ಯೆಗಳನ್ನು ಪರಿಗಣಿಸಿ ಅಗತ್ಯವಿರುವಲ್ಲಿ 2 ಕಾನೂನು ಸಲಹೆಗಾರರನ್ನು ನಿಯುಕ್ತಿಗೊಳಿಸಲಾಗುವುದು ಈ ಬಗ್ಗೆ ಪ್ರಾಧಿಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಮಂಡಳದ ಒಕ್ಕೂಟದ ಅಧ್ಯಕ್ಷೆ ವಸಂತಿ ಕೊರಡ್ಕಲ್ ಅವರು ಜಿಲ್ಲೆಯಲ್ಲಿ ಪುರುಷರು ಕೂಡಾ ತಮ್ಮ ಕೌಟುಂಬಿಕ ಸಮಸ್ಯೆಗಳನ್ನು ಹಂಚಿಕೊಳ್ಳಲು ಮುಂದಾಗುತ್ತಿದ್ದು ಅವರಿಗೂ ಮತ್ತು ಅವರ ಕುಟುಂಬಿಕರಿಗೂ ಆಪ್ತಸಮಾಲೋಚನೆ ನೀಡುತ್ತಿರುವ ಬಗ್ಗೆ ಸಭೆಯ ಗಮನಕ್ಕೆ ತಂದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ, ವಿವಿಧ ಇಲಾಖೆಗಳ ಅನುಷ್ಠಾನಾಧಿಕಾರಿಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.