ಹೇ ಮನವೇ.....
ಹೀಗೆ ಕರೆಯಲು ಕಾರಣವಿದೆ ಹುಡುಗ.... ಒಂಟಿ ಬದುಕಲಿ ಬಲವಂತದಿಂದ ಎಲ್ಲರನೂ ಹೊರದೂಡಿದವಳಿವಳು. ಸ್ವಗತದಲೇ ಮಾತನಾಡಿ ತೃಪ್ತವಾದವಳು. ಈಗ ನಿನ್ನೋಡನೆ ಮಾತನಾಡಲು ಈ ಮನ ಹವಣಿಸಿದೆ ಎಂದಮೇಲೆ ನೀ ನನ್ನ ಮನಸ್ಸಲ್ಲದೇ ಇನ್ನೇನು?!....?
ನಿಜವಾಗಿಯೂ ನಾವು ಹಂಚಿಕೊಂಡ ಮೊದಲ ಸಂದೇಶ ನನಗೆ ನೆನಪಿಲ್ಲ. ಆದರೆ ನೀ ಹತ್ತಿರಾಗುವಂತೆ ಮಾಡಿದ್ದು, ನಿನ್ಮ ನೇರ ನುಡಿಗಳು. ಇನ್ನೂ ಮುಂದುವರಿದರೆ, ನಿನ್ನ ಬದುಕಿನ ಹಿಂದಿರುವ ನೆನಪುಗಳು. ಆ ದಿಸೆಯಲ್ಲಿ ನಾವಿಬ್ಬರೂ ಸಹಚಾರಿಗಳು.
ಹೇ ಪ್ರೇಮ ಕೌಸ್ತುಭವೇ..... ನೀ ಯಾಕೆ ತಡವಾಗಿ ದೊರೆತೆ ನನಗೆ?.... ಈಗ ನಮ್ಮ ದಾರಿ ಬೇರೆ ಬೇರೆಯಿದೆ. ದೂರ ತೀರದಿ ನಿಂತು ಕಾಣದಂತೇ ಕಾಣುವ ನಿನ್ನ ನೆರಳ ಕಂಡು ಆ ನೆರಳ ಹೆಜ್ಜೆಗುರುತ ಹುಡುಕುವ ನನ್ನ ಪ್ರಯತ್ನ ಭ್ರಮೆಯೇನೋ ಅನ್ನಿಸುತ್ತಿದೆ. ಕತ್ತಲಾದರೆ, ಮಲಗುವ ಬೆಳಕಲ್ಲಿ ನೆರಳು ಕಾಣದಾದೀತಲ್ಲ ಎನ್ನುವ ಭಯವಿದೆ. ನಮ್ಮ ವಿರುದ್ದ ದಾರಿಗಳನ್ನು ಒಂದೇ ಗುರಿಯೆಡೆಗೆ ತಿರುಗಿಸುವ ಪ್ರಯತ್ನ ಜಾರಿಯಲ್ಲಿದೆ.
ನಿನ್ನ ಹೆಸರ ಕರೆಯುವುದರಲ್ಲೇ ಅದೆಂತ ರೋಮಾಂಚನ ಈ ಮನಕ್ಕೆ....! ನೀ ನನಗಷ್ಟೇ ಸಿಗಬೇಕು ಎನ್ನುವ ಸ್ವಾರ್ಥ ಒಳಮನಸ್ಸಿಂದ ಹೊರಬರಲು ತಹ ತಹಿಸಿದೆ. ಆದರೆ ವಾಸ್ತವಿಕತೆಗೆ ಚಿತ್ತವ ಹೊಂದಿಸಿಕೊಂಡಿರುವೆ ಹೃದಯವಿಹಾರಿ..... ನಿನ್ನೊಳಗೂ ಮೂಡುತ್ತಿರು ಒಲವ ನಾನು ಗುರುತಿಸಬಲ್ಲೆ. ಅದು ನನಗೆ ಖುಷಿಯ ವಿಚಾರವೇ.
ಹೇ ಹುಡುಗ ನಾವೊಂದು ಕರಾರು ಮಾಡಿಕೊಳ್ಳೋಣವೇ.....!?.... ಹೌದು ಕಣೋ ಎಂದು ಮುರಿಯದ, ಅನಿಯಮಿತ, ಕರಾರು. ನಮ್ಮ ಪ್ರೀತಿ ಯಾರಿಗೂ ನೋವು ತರುವುದು ಬೇಡ. ಯಾರಿಗೂ ಮುಳುವಾಗುವುದು ಬೇಡ. ಹೀಗೇ ಜೊತೆಗಿರೋಣ ಮಾನಸಿಕವಾಗಿ. ನಿನ್ನ ಊರುಗೋಲು ನಾನಾಗಿ, ನನ್ನ ಉಸಿರ ಗಾಳಿ ನೀನಾಗಿ..... ಎಂದೋ ಒಮ್ಮೆ ಅವಕಾಶದ ಕೈಯ ಹಿಡಿತದಲಿ ಸಿಕ್ಕಾಗ, ಭೇಟಿಯಾಗೋಣ. ಕರಹಿಡಿದು ಪ್ರೀತಿಯ ಪರಸ್ಪರ ಆವಾಹಿಸಿಕೊಳ್ಳೋಣ. ನಿನ್ನ ಹೆಜ್ಜೆಯಲಿ ನನ್ನ ಹೆಜ್ಜೆ ನಿಲ್ಲುವುದೋ ಎಂದು ಅವಲೋಕಿಸೋಣ. ಸಾಧ್ಯವಾದರೆ,....... ಕಣ್ಣೋಟಗಳ ಸೇರಿಸಿ..... ನನ್ನ ಮುಖವ ಆ ಬೊಗಸೆಯಲಿ ಹಿಡಿದು ಹಣೆಗೆ ಒಂದೇ ಒಂದು ಹೂ ಮುತ್ತು......
ಇನ್ನೇನು ಹೇಳಲಿ ಮನವೇ......ಇದಕಿಂತ ಜಾಸ್ತಿ
ನೀನೇ ಇನ್ನು ಈ ಹೃದಯದ ಆಸ್ತಿ.
ಆ ಹೃದಯದ ಬಡಿತ ಈ ಎದೆಗೂಡಲಿ ಕೇಳ ಬಯಸುವ ನಿನ್ನವಳು,
ಜೀವಪರಿ