ಕಾರ್ಕಳ: ಯಡಿಯೂರಪ್ಪ ಅವರು ಅವಿಭಜಿತ ಜಿಲ್ಲೆಯೊಂದಿಗೆ ಉತ್ತಮ ಸಂಬಂಧ ಹೊಂದಿದ್ದರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎವೈ. ವಿಜಯೇಂದ್ರ ಹೇಳಿದರು. ಅವರು ನ. 18 ರ ಸಂಜೆ ಕಾರ್ಕಳ ಬಿಜೆಪಿ ಕಚೇರಿಗೆ ಭೇಟಿ ನೀಡಿ ಬಿಜೆಪಿ ಮಂಡಲ ವತಿಯಿಂದ ಸನ್ಮಾನ ಸ್ವೀಕರಿಸಿ ಬಳಿಕ ಮಾತನಾಡಿದರು. ಸಂಘಟನೆಗೆ ಯಾವ ರೀತಿಯಲ್ಲಿ ಶಕ್ತಿ ತುಂಬಬಹುದು ಎನ್ನುವುದಕ್ಕೆ ಉಡುಪಿ ಹಾಗೂ ದ. ಕ. ಜಿಲ್ಲೆ ಮಾದರಿ ಎಂದರು. ಬಿಜೆಪಿ ರಾಜ್ಯಾಧ್ಯಕ್ಷನಾದ ನಂತರ ಮೊದಲ ಬಾರಿಗೆ ಕಾರ್ಕಳಕ್ಕೆ ಭೇಟಿ ನೀಡಿದ್ದೇನೆ ಎಂದರು. ಕರಾವಳಿಯಲ್ಲಿ ಸಂಘಟನೆ ಸದೃಢವಾಗಿದೆ ಎಂದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಇದೆ ಎಂಬ ಭಾವನೆ ಜನರಲ್ಲಿಲ್ಲ. ಕಾಂಗ್ರೆಸ್ ಪಕ್ಷದ ಪೊಳ್ಳು ಭರವಸೆ ನಂಬಿ ಮೋಸ ಹೋದೆವು ಎಂಬ ಭಾವನೆ ರಾಜ್ಯದ ಜನತೆಯಲ್ಲಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾತಿ ಜಾತಿಯ ನಡುವೆ ಒಡಕು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆಯೇ ಹೊರತು ರಾಜ್ಯದ ಅಭಿವೃದ್ಧಿ ಬಗ್ಗೆಯಲ್ಲ ಎಂದು ವಿಜಯೇಂದ್ರ ಟೀಕಿಸಿದರು.
ಬಿಜೆಪಿಯಲ್ಲಿ ಒಮ್ಮತವಿದೆ. ಕಾರ್ಯಕರ್ತರ ವಿಶ್ವಾಸ ಪಡೆಯುವಲ್ಲಿ ನಾಯಕರು ಯಶಸ್ವಿಯಾದರೆ, ಸಹಜವಾಗಿಯೇ ಮತದಾರರ ವಿಶ್ವಾಸ ಪಡೆಯಲು ಸಾಧ್ಯವಾಗುತ್ತದೆ ಎಂದ ಅವರು ಯಡಿಯೂರಪ್ಪನವರ ಮಗ ಅನ್ನುವ ಅಹಂ ನನ್ನಲ್ಲಿಲ್ಲ. ಕಾರ್ಯಕರ್ತರ ಬೆನ್ನೆಲುಬಾಗಿ ಕಾರ್ಯನಿರ್ವಹಣೆ ಮಾಡುತ್ತೇನೆ ಎಂದರು.

ಶಾಸಕ ವಿ. ಸುನಿಲ್ ಕುಮಾರ್ ಮಾತನಾಡಿ, ಉಡುಪಿಗೆ ಪ್ರಧಾನಿ ಮೋದಿ ಭೇಟಿ ಸಂದರ್ಭ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಬೇಕೆಂದು ಕರೆ ನೀಡಿದರು.
ಬಿಜೆಪಿ ಹಿರಿಯ ಮುಖಂಡರಾದ ಬೋಳ ಪ್ರಭಾಕರ್ ಕಾಮತ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ನವೀನ್ ಕುತ್ಯಾರು, ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ಉಡುಪಿ ಶಾಸಕ ಯಶ್ನಾಲ್ ಸುವರ್ಣ, ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ, ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಸ್ವಾಗತಿಸಿ, ರವೀಂದ್ರ ಕುಮಾರ್ ಕುಕ್ಕುಂದೂರು ಕಾರ್ಯಕ್ರಮ ನಿರೂಪಿಸಿದರು.

ಶಾಸಕರ ಮನೆಗೆ ಭೇಟಿ
ಬಿಜೆಪಿ ಕಚೇರಿಯಿಂದ ವಿಜಯೇಂದ್ರ ಅವರು ಶಾಸಕ ವಿ. ಸುನಿಲ್ ಕುಮಾರ್ ಅವರ ಮನೆಗೆ ಭೇಟಿ ನೀಡಿದರು. ಈ ವೇಳೆ ಸುನಿಲ್ ಕುಮಾರ್ ಹಾಗೂ ಅವರ ತಾಯಿ ಪ್ರಮೋದಾ, ಪತ್ನಿ ಪ್ರಿಯಾಂಕಾ ರಾಜ್ಯಾಧ್ಯಕ್ಷರನ್ನು ಬರಮಾಡಿಕೊಂಡರು. ದ.ಕ. ಸಂಸದ ಬ್ರಿಜೇಶ್ ಚೌಟ, ಶಾಸಕರಾದ ಯಶ್‌ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಲಿ, ಹರೀಶ್ ಪೂಂಜಾ, ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಕುತ್ಯಾರು, ಮಾಜಿ ಅಧ್ಯಕ್ಷ ಸುರೇಶ್ ಕುಯಿಲಾಡಿ, ಬಿಜೆಪಿ ಪ್ರಭಾರಿ ಉದಯ ಕುಮಾರ್ ಉಪಸ್ಥಿತರಿದ್ದರು.