ನೀ ಹೃದ್ಗೋಚರವಾದಂತೆಯೇ ಅದೆಲ್ಲಿಯ ಉತ್ಸಾಹ ಭರಿಸಿರುವೆ ಗೌರಿಮ......

ಮನದಲ್ಲಿ ಸೆರೆಯಾದವ ಜೀವ ಕಣಕಣವನೂ ಪುಳಕ ಗೊಳಿಸಿರುವೆ  ಗೌರಿಮ!


ನಿನ್ನ ಹೆಸರ್ಹಿಡಿದು ಯಾರು ಕೂಗಿದರೂ ಮೂಡುವುದು ಮುಗುಳ್ನಗು ನನ್ನಲ್ಲಿ......

ಅಪ್ಪುವಿಕೆಗೆ ಕರಗಿ ಆ ಬಾಹು ಬಂಧದಲಿ ಸೇರಿಹೋಗಲು ಬಯಸಿರುವೆ ಗೌರಿಮ!


ದೂರ ಸರಿದರೂ ಸವೆಯದೇ ಕಾಡುವುದು ನೀ ಕೊಟ್ಟ ಆ ಮಧುರ ನೆನಪು......

ಜೊತೆಯಾಗಿ ಒಂದಷ್ಟು ಸವಿ ಕ್ಷಣಗಳಿಗೆ ಸಾಕ್ಷಿ ನಾವೆಂದು ನುಡಿಸಿರುವೆ ಗೌರಿಮ!


ಹುಟ್ಟುಂಟು ಸಾವುಂಟು ಈ ಮಧ್ಯೆ ಬೆಳಗಲು ಇದೆ ನಮ್ಮ ದೀರ್ಘ  ಒಲವು

ಮತ್ತೆ ಮತ್ತೆ ಅನುಭವಿಸುವ ಉತ್ಕಟತೆಯನ್ನು ಕಣ್ಣೆದುರು ತೋರಿಸಿರುವೆ ಗೌರಿಮ!


ಎಲ್ಲರಿಗೂ ತೋರ್ವಂತೆ ಅರ್ಥೈಸಿಕೊಳುವಂತೆ  ಪ್ರೀತಿಯ ನೀತಿಯನು ಕಲಿಸಿಬಿಡು

ನಿನ್ನ ಗುಂಗಲೇ ಜೀವನ ದಾರಿಯಲಿ ಜನಪ್ರಿಯತೆಯನು ಗಳಿಸಿರುವೆ ಗೌರಿಮ!


ತನುವಲಿ ಘಮಿಸುವುದು ಗಂಧದ ಪರಿಮಳದಂತೆ ನಿನ ಪ್ರೀತಿ ಸರ್ವತ್ರ......  

ಅನುಭವವ ಹೆಚ್ಚಿಸುವ ಪ್ರೇಮ ಒಸರನು ಜನ್ಮಾಂತರಕೆ ಹರಿಸಿರುವೆ ಗೌರಿಮ!!!

ಜೀವಪರಿ