ಎಲ್ಲೋ ಅಲೆದಾಡುತಿದ್ದ ಚೈತನ್ಯವದು

ವಸುಧೆಯ ಮಡಿಲಲಿ ಜನನ ಕಾಯವಾಗಿ

ಹೆಸರು ದೊರಕಿತು ಅರಿವು ಮೂಡಿತು

ನೆರೆದ ಅಪರಿಚಿತರ ಮಧ್ಯೆ ಒಂಟಿಯಾಗಿ


ಕಣದಿ ಕಣ ಸೇರಿದೆ ಜೀವಿ ನಾ  ಬೆಳೆದಿಹೆ

ಕುಟುಂಬದಲಿದ್ದ ಕಣ್ಣು ಪರಿಸರಕೂ ಹರಡಿದೆ

ಎತ್ತ ನೋಡಿದರೂ ಸಮಯ ತಿಂದವರು

ಗೊಂದಲ ಮರೆತು ಬದುಕ ಬಂದವಳಿಲ್ಲಿ ಒಂಟಿ


ಅಂದೊಮ್ಮೆ ಗೆಳೆತನಕೆ ವ್ಯಾಖ್ಯಾನ ಸಿಗಲಿಲ್ಲ

ಇಂದು ಸಿಕ್ಕಿದ್ದು ನನ್ನ ಪರಿಧಿಯಲಿ ನಿಲುತಿಲ್ಲ

ಸ್ನೇಹ  ಅಗತ್ಯವೇ ಎನುವಷ್ಟು ಸಂಶಯ

ವಾದವಿವಾದಗಳ ತಿಕ್ಕಾಟದ ಮಧ್ಯೆ ನಾ ಇಲ್ಲಿ‌ ಒಂಟಿ


ಜೊತೆಯಾದವರೆಲ್ಲ ಸ್ವಾರ್ಥದಿ ಮೂರ್ಖರಲ್ಲ

ಕಾಳಜಿ ತೋರುವವರ ಗಣತಿಯೂ ಕಡಿಮೆಯಲ್ಲ

ತಿರುಗಿ ನೀಡಲು ನನ್ನಲೇನಿದೆಯೆಂಬುದೇ ಪ್ರಶ್ನೆ

ಉತ್ತರ ಸಿಗದೇ ತಡವರಿಸುತಿಹಳು ಈ ಒಂಟಿ

-ಜೀವಪರಿ