ಮಧ್ಯರಾತ್ರಿಯಲಿ ಹೆಣ್ಣವಳು
ಗೊಂದಲದ ಜೋಳಿಗೆ ಹಿಡಿದು
ನಡು ನಡುಗಿ ಭಯತುಂಬಿ
ಹೊರಟಳು ಭವಿಷ್ಯದ ಕನಸ ಹಿಡಿದು
ರಾಮರಾಜ್ಯದ ಹುಡುಗಿ ಇವಳಾಗದೆ ಹೋದುದಕೆ
ಬಾಪು ಅವನು ಕಾಲಾತೀತನಾಗಿ ನಗುತಲಿಹನು......
ಅಹಿಂಸೆಯದು ತಾಳಲಾಗದ ಬೇನೆ
ಕಣ್ಣೋಟದಲೇ ಕಿಚ್ಚು ಹಚ್ಚುವ ರೋಷ
ಮಾನವೀಯತೆಯ ಬೇಲಿಯ ಮುರಿದು
ಏಟಿಗೆದುರೇಟು ನೀಡಿದವಗೆ ಸ್ವಾಗತ
ಅಹಿಂಸೆಯ ಮಾರ್ಗವದು ಹಿಂಬಾಲಿಸದೆ ಹೋದುದಕೆ
ಬಾಪು ಅವನು ಕಾಲಾತೀತನಾಗಿ ನಗುತಲಿಹನು......
ಸತ್ಯದಾ ಮುದಿತನ ಮಸಣದಲಿ ಕಾದಿದೆ
ಹೂಳುವ ವೀರನವ ಬೇಡಿಕೆಯಲಿಹನು
ಮೂರು ಕೋತಿಗಳವು ಮುನ್ನೂರು ಹೆಡೆದಿಹವು
ಅಂಗವಿಕಲತೆಯಲಿ ತಡಕಾಡುತಿಹವು
ಸತ್ಯವದು ಸುಳ್ಳಿನ ಕಾಲದೂಳಾಗಿ ಹೋದುದಕೆ
ಬಾಪು ಅವನು ಕಾಲಾತೀತನಾಗಿ ನಗುತಲಿಹನು......
-ಜೀವ ಪರಿ