ಬೆಳಗು ಮುಂಜಾವಲ್ಲಿ..
ತೆಂಗು,ಕಂಗು ಬಾಳೆ ...
ತೂಗಿ ಬಳುಕುವಾಗ...
ತಂಗಾಳಿ ಸುಳಿ,ಸುಳಿ ಬೀಸ್ಯಾವೋ...
ಬೆಳ್ಳಿ ಮುಗಿಲೇರಿ,ಹೊಂಬಣ್ಣವ ಬೀರಿ...
ಎಳೆ ಬಿಸಿಲಲಿ ಸೂರ್ಯ ಹೊಳೆದಾನೋ...
ಚುಮುಗುಡುವಾ ಚಳಿಯಲ್ಲಿ..
ಚಿಂವ್ ಗುಟ್ಟುತ್ತಾ ಹಕ್ಕಿ...
ಕಾದಲನ ಕೂಗುತ್ತ ಕರೆದಾವೋ...
ಜಿಂಕೆಯ ವನಪು...
ಗರಿ ಬೀಸಿ ನವಿಲು...
ಸ್ವರ ತುಂಬಿ ಕೋಗಿಲೆ ಹಾಡಿ ನಲಿದಾವೋ...
ನಿದಿರೆಯ ಕಣ್ ತೆರೆದು...
ಹೊದಿಕೆಯ ತೆರೆ ಸರಿಸಿ...
ಉದಕದಿ ಮುತ್ತಿನಂತ ಮುಖ ತೊಳೆಯೋ..
ಉದಯ ರಾಗದಿ ಪಕ್ಷಿ..
ಎದೆ ತುಂಬಿ ಹಾಡುತ್ತ...
ನಿಮಗೆ ಶುಭ ಕೋರುವವೋ....
ವಾರಾಹಿ, ಸೀತಾ ನದಿಯು ...
ಜುಳು ಜುಳು ಗುಟ್ಟುತ್ತ...
ಕಲ್ಲು ಹೆಬ್ಬಂಡೆಯಲಿ,ಕೊಳಲಿನನಾದ ಗರೆದಾವೋ...
ಬಳ್ಳಿಯಂತೆ ಬಳುಕಿ..
ಹಳ್ಳ ಕೊಳ್ಳ ತುಂಬಿ...
ತುಳುಕಿ ಬಳುಕಿ ಹರಿದಾವೋ..
ಕೆಸರಲ್ಲೇ ನೀರುಂಡು...
ಹಸಿರೆಲೆಯಲ್ಲಿ ಬಿಳಿಮಲ್ಲೆ...
ತುಸು ನಾಚುತ ಅರಳ್ಯಾವೋ...
ಹಾಲೂಣುವ ಹಸುಕರುವೆಲ್ಲ...
ಹವಣಿಸುತಲೋಮ್ಮೆ...
ಹಾತೊರೆದು ಓಡ್ಯಾವೋ...
ಕವಳವು ಕುಡಿತುಂಬಿ ...
ಪಾದದ ಅಡಿಯಲ್ಲಿ ...
ಮುತ್ತಿಡಲು ಎಳೆ ಹುಲ್ಲು , ಕಾದೈತೋ...
ಕಾರಂಜಿ ಚಿಮ್ಮೋವಾಗ ...
ಸಾಲು ಸಾಲಾಗಿ ಸಾರಂಗದ ...
ಹಿಂಡೇಲ್ಲಾ ನಲಿತಾವೋ..
ಹಚ್ಚ ಹಸಿರಿನ ಭತ್ತದ ತೆನೆಯು...
ತೂಗಿ ಓಲಾಡುತ್ತಾ,ನವರತ್ನದ ...
ಪಚ್ಚೆಯಂತೆ ಗದ್ದೇಲಿ ತಲೆ ದುಗ್ಯಾವೋ..
ಬೆಟ್ಟದ ತುಂಬೆಲ್ಲ ನೋಡು...
ಹಿಮ ಗರೆದು ಮೇಲಲ್ಲಿ ...
ಹಾಲ್ ಮೊಸರಂತೆ ತೋರಿಹವೋ...
ಜೋಗದ ಝರಿ ಗಿಂತ ವೇಗದಿ...
ಧಬ ಧಬನೇ ದುಮ್ಮಿಕ್ಕುವ...
ಜೋಮ್ಲು ಜಲಪಾತದಿ ಮಿಂದೇಳೋ...
ಕಾಡಿನ ಮಧ್ಯದಿ ಕೈ ಬೀಸಿ ಕರೆಯುವ ..
ಕಲರವದ ಸದ್ಧಿನಲ್ಲಿಯ ಝರಿಯದು..
ಕೋಡ್ಲು ಜಲಪಾತವ ನೋಡಿ ತಣಿಯೋ...
ಮಲೆನಾಡಿನ ಮೂಡಲದಿ..
ಮುಕ್ಕೋಟಿ ದೇವರು ..
ಒಟ್ಟಾಗಿ ಹರಸುತ ನಿಂತಾರೋ...
ಅಮೃತಗಳಿಗೆಯಲಿ...
ಕರಮುಗಿದು ಶಿರ ಬಾಗಿದರೆ ...
ವರನೀಡಿ ದೈವವು ಹರಸುವುದೋ....
ರಚನೆ:-ಪ್ರೀತಿ ಮಾಂತೇಶ ಬನ್ನೇಟ್ಟಿ.
ವಿಜಯಪುರ ಜಿಲ್ಲೆ.