ಬೆಂಗಳೂರು:- ಬಿಲ್ಲವ ಅಸೋಸಿಯೇಶನ್ ಬೆಂಗಳೂರು(ರಿ) ವತಿಯಿಂದ ದಿನಾಂಕ 18.10.2020 ರ ಭಾನುವಾರದಂದು ಮಧ್ಯಾಹ್ನ 3.00 ಗಂಟೆಗೆ ಸರಿಯಾಗಿ ನಗರದ ಬನ್ನೇರುಘಟ್ಟ ರಸ್ತೆಯಲ್ಲಿರುವ ಬಿಲ್ಲವ ಭವನದಲ್ಲಿ ಸಂಘದ ಬಡಕುಟುಂಬದ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡುವ ಸಲುವಾಗಿ "ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ" ನಡೆಯಿತು. ಕಾರ್ಯಕ್ರಮಕ್ಕೆ ನಗರದ ಉಪ್ಪಾರಪೇಟೆ ಸಂಚಾರ ವಿಭಾಗದ ಪೋಲೀಸ್‍ ಇನ್ಸ್ ಪೆಕ್ಟರ್ ಶಾಂತಾರಾಮ್‍ರವರು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ದೀಪ ಬೆಳಗುವುದರೊಂದಿಗೆ ಚಾಲನೆ ನೀಡಿ, ಇಂದಿನ ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ವಿದ್ಯೆ ಪಡೆಯುವುದು ಎಲ್ಲರ ಪ್ರಮುಖ ಗುರಿಯಾಗಿದೆ. ಈ ನಿಟ್ಟಿನಲ್ಲಿ ಸಮಾಜದ ಬಡ ವಿದ್ಯಾರ್ಥಿಗಳಿಗೆ ಸಂಘದ ವತಿಯಿಂದ ವಿದ್ಯಾರ್ಥಿವೇತನ ನೀಡುವುದರ ಮೂಲಕ ಉತ್ತೇಜನ ನೀಡುತ್ತಿರುವುದು ಬೆಂಗಳೂರು ಬಿಲ್ಲವ ಅಸೋಸಿಯೇಶನ್‍ನ ಶ್ಲಾಘನೀಯ ಕೆಲಸಗಳಲ್ಲಿ ಒಂದಾಗಿದೆ ಎಂದರು.

ಸಂಘದ ಅಧ್ಯಕ್ಷರಾದ ಎಂ.ವೇದ ಕುಮಾರ್‍ ರವರು ಅತಿಥಿ ಗಣ್ಯರನ್ನು ಸ್ವಾಗತಿಸುತ್ತಾ, ಸಂಘದ ಸಮಾಜ ಮುಖಿ ಕೆಲಸಗಳನ್ನು ವಿವರಿಸುತ್ತಾ ಇತ್ತೀಚಿನ ಕೋವಿಡ್‍ ಕಾಯಿಲೆಯಿಂದಾಗಿ ಲಾಕ್‍ಡೌನ್ ಸಂದರ್ಭದಲ್ಲಿ ಉದ್ಯೋಗ ವಂಚಿತರಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ಸಮಾಜದ ಸುಮಾರು 40 ಬಡಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ನೀಡಿರುವ ಬಗ್ಗೆ, ಸದಸ್ಯರಿಗೆ ಸಂಘದ ವತಿಯಿಂದ ಉಚಿತವಾಗಿ ಆಯುಷ್ಮಾನ್‍ ಕಾರ್ಡ್ ಮಾಡಿಸಿಕೊಡುವ ಬಗ್ಗೆ ಸಂಘದ ವತಿಯಿಂದ ಈಗಾಗಲೇ ಉಚಿತ ವಿದ್ಯಾರ್ಥಿ ನಿಲಯ ನಡೆಸಿಕೊಂಡು  ಬರುತ್ತಿದ್ದು, ವಿದ್ಯಾರ್ಥಿನಿಯರಿಗಾಗಿ ಉಚಿತ ವಿದ್ಯಾರ್ಥಿನಿ ನಿಲಯ ಸ್ಥಾಪಿಸುವ ಬಗ್ಗೆ, ಬ್ರಹ್ಮ ಶ್ರೀ ನಾರಾಯಣ ಗುರುಗಳ ತತ್ವದಂತೆ ಒಂದು ಸ್ಕೂಲನ್ನು ಸ್ಥಾಪಿಸುವ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಸಮಾಜದ ವಯೋವೃದ್ಧರಿಗಾಗಿ ಉಚಿತ ವೃದ್ಧಾಶ್ರಮ ಕಲ್ಪಿಸುವ ಗುರಿಯನ್ನು ಬಿಲ್ಲವ ಅಸೋಸಿಯೇಶನ್ ಬೆಂಗಳೂರು ಹೊಂದಿದೆ ಎಂದರು.

ವಿದ್ಯಾರ್ಥಿ ವೇತನ ಪ್ರಯೋಜನ ಪಡೆಯಲು ಬಂದ ಸಮಾಜದ 70 ವಿದ್ಯಾರ್ಥಿಗಳಿಗೆ ಸುಮಾರು 5.00 ಲಕ್ಷ ರೂಪಾಯಿಗಳ ಹಣವನ್ನು ವಿತರಣೆ ಮಾಡಲಾಯಿತು.

ವೇದಿಕೆಯಲ್ಲಿ ಸಂಘದ ಗೌರವಾಧ್ಯಕ್ಷರಾದ  ಭಾಸ್ಕರ ಸಿ. ಅಮೀನ್ ಸಲಹಾ ಸಮಿತಿ ಸದಸ್ಯರಾದ ಲಕ್ಷ್ಮಣ್‍ ಅಮೀನ್, ಹಿರಿಯ ಉಪಾಧ್ಯಕ್ಷ  ಕೇಶವ ಪೂಜಾರಿ, ಉಪಾಧ್ಯಕ್ಷ  ಬಿ.ಎಮ್. ಉದಯಕುಮಾರ್, ಪ್ರಧಾನ ಕಾರ್ಯದರ್ಶಿ ಭಾಸ್ಕರ ಪೂಜಾರಿ, ಜತೆ ಕಾರ್ಯದರ್ಶಿ  ರಾಜೇಶ್‍ಕುಮಾರ್, ಕೋಶಾಧಿಕಾರಿ  ವಿ.ಗೋಪಾಲ್, ಸಂಘಟನಾ ಕಾರ್ಯದರ್ಶಿ  ಜೆ.ನಾರಾಯಣ ಪೂಜಾರಿ, ಮಹಿಳಾ ಘಟಕದ ಅಧ್ಯಕ್ಷೆ  ಜಲಜಾ ಶೇಖರ್, ಸೇವಾದಳದ ಅಧ್ಯಕ್ಷ  ಶಿವಾನಂದ ಸಾಲ್ಯಾನ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿವೇತನ ಸಮಿತಿ ಸದಸ್ಯರಾದ  ಸಂಪತ್‍ಕುಮಾರ್‍ಡಿ. ಎನ್‍ ಇವರು ವಹಿಸಿದ್ದರು. ಸಂಘದ ಉಪಾಧ್ಯಕ್ಷ  ಬಿ.ಎಂ.ಉದಯಕುಮಾರ್ ವಂದನಾರ್ಪಣೆಗೈದರು.

ಇದಕ್ಕೂ ಮೊದಲು ಬೆಳಿಗ್ಗೆ 10.00 ಗಂಟೆಯಿಂದ ಸಂಘದ ಸದಸ್ಯರಿಗಾಗಿ ಆಯುಷ್ಮಾನ್‍ ಕಾರ್ಡ್ ನೋಂದಣಿ ಕಾರ್ಯಕ್ರಮ ನಡೆಯಿತು.ಇದರಲ್ಲಿ ಸುಮಾರು 200ಕ್ಕೂ ಹೆಚ್ಚು ಸದಸ್ಯರು ಸಾಮಾಜಿಕ ಅಂತರ ಕಾಪಾಡಿಕೊಂಡು ತಮ್ಮ ಹೆಸರನ್ನು ನೋಂದಾಯಿಸಿ ಉಚಿತವಾಗಿ ಆಯುಷ್ಮಾನ್‍ಕಾರ್ಡ್ ಪಡೆಯುವಲ್ಲಿ ಯಶಸ್ವಿಯಾದರು.

ಬೆಳಿಗ್ಗೆ 11.00 ಗಂಟೆಗೆ ಸಂಘದ ಮಾಸಿಕ ಕಾರ್ಯಕಾರಿ ಸಮಿತಿ ಸಭೆ ನಡೆಯಿತು.12.00 ಗಂಟೆಯಿಂದ ಮಹಿಳಾಘಟಕದ ಸದಸ್ಯರಿಂದ ಬ್ರಹ್ಮಶ್ರೀ ನಾರಾಯಣಗುರು ಮಂದಿರದಲ್ಲಿ "ಲಲಿತಾ ಸಹಸ್ರನಾಮ" ಕಾರ್ಯಕ್ರಮ ನಡೆಯಿತು.