ಉಡುಪಿ:- ಮಲ್ಪೆ ಬಂದರಿನಲ್ಲಿ ಮೀನು ಹಿಡಿಯುವ ಕೆಲಸದಲ್ಲಿ ನಿರತರಾಗಿದ್ದ 17 ಬಾಲ ಕಾರ್ಮಿಕರನ್ನು ಗುರುವಾರ ರಕ್ಷಣೆ ಮಾಡಲಾಗಿದೆ.
ಕರ್ನಾಟಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಮಕ್ಕಳ ರಕ್ಷಣಾ ಘಟಕ, ಕಾರ್ಮಿಕ ಇಲಾಖೆ ಮತ್ತು ಪೊಲೀಸ್, ಮಕ್ಕಳ ಸಹಾಯವಾಣಿ ಮತ್ತು ನಾಗರಿಕ ಸೇವಾ ಟ್ರಸ್ಟ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮಕ್ಕಳನ್ನು ರಕ್ಷಣೆ ಮಾಡಿದೆ ಎಂದು ವರದಿಗಳಿಂದ ತಿಳಿದುಬಂದಿದೆ.
ಕೋವಿಡ್‌ನಿಂದಾಗಿ ಶಾಲೆಗಳು ಆರಂಭವಾಗದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಭಾಗದಿಂದ ಬಂದಿರುವ ವಲಸೆ ಕಾರ್ಮಿಕರು ಮಕ್ಕಳನ್ನು ಕೂಲಿ ಕೆಲಸಕ್ಕೆ ಕರೆ ತಂದಿದ್ದಾರೆ. ರಕ್ಷಣೆಗೊಳಗಾಗಿರುವ ಬಾಲಕಾರ್ಮಿಕರೆಲ್ಲರೂ ಕೊಪ್ಪಳ, ಬಳ್ಳಾರಿ ಮೂಲದವರೆಂದು ಹೇಳಲಾಗುತ್ತಿದೆ. ಜಂಟಿ ಕಾರ್ಯಾಚರಣೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ, ಪೊಲೀಸ್ ಇಲಾಖೆ ಸಾಥ್ ನೀಡಿದೆ.
ಮಕ್ಕಳ ಸಹಾಯವಾಣಿ ನಾಗರಿಕ ಸೇವಾ ಟ್ರಸ್ಟ್ ಕಾರ್ಯಕರ್ತರು ಕೂಡ ರಕ್ಷಣೆಗೆ ಸಹಕಾರ ನೀಡಿದ್ದಾರೆ. ಸದ್ಯ ಮಕ್ಕಳ ಕಲ್ಯಾಣ ಸಮಿತಿ ಮುಂದೆ 17 ಬಾಲ ಕಾರ್ಮಿಕರನ್ನು ಹಾಜರುಪಡಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಕಾರ್ಯಾಚರಣೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಾಣಾಧಿಕಾರಿ ಸದಾನಂದ ನಾಯಕ್, ಕಾನೂನು ಪರಿವೀಕ್ಷಣಾಧಿಕಾರಿ ಪ್ರಭಾಕರ ಆಚಾರ್, ರಕ್ಷಾಣಾಧಿಕಾರಿ ಮಹೇಶ್ ದೇವಾಡಿಗ, ಕಾರ್ಮಿಕ ಅಧಿಕಾರಿ ಕುಮಾರ್, ಕಾರ್ಮಿಕ ನಿರೀಕ್ಷಕ ಪ್ರವೀಣ್ ಇದ್ದರು.