ಪಶ್ಚಿಮ ಘಟ್ಟದ ಭೂಕುಸಿತ, ಜಲ ಪ್ರವಾಹ ಆಗಿ ಒಂದು ತಿಂಗಳು ಆಗುತ್ತಾ ಬಂತು. ಒಂದಷ್ಟು ರಾಜಕಾರಣಿಗಳು, ಅಧಿಕಾರಿಗಳು, ಜನರು ಬಂದು ಮನರಂಜನೆಯ ರೂಪದಲ್ಲಿ ವೀಕ್ಷಣೆ ಮಾಡಿ ಪ್ರಚಾರ ಪಡೆದುಕೊಂಡು ಹೋದರು.

(ಕ್ಷಮಿಸಿ, ಪ್ರಾಮಾಣಿಕವಾಗಿ ಸ್ಪಂದಿಸಿದ ಕೆಲವರನ್ನು ಹೊರತು ಪಡಿಸಿ) ಕೆಲವರಿಗೆ ಪರಿಹಾರ ಸಿಕ್ಕಿತು, ಕೆಲವರಿಗೆ ಸಿಕ್ಕುವ ಭರವಸೆ ಸಿಕ್ಕಿತು. ದುರಂತ ಆದ ಅಲ್ಲಿನ ಸ್ಥಳೀಯರು ಇನ್ನು ನಿರಂತರ ಅಲ್ಲಿ ಭಯದ ವಾತಾವರಣದಲ್ಲೇ ಇರುವಂತಾಯಿತು. ಕಳೆದ ವರ್ಷ ಕೇರಳ, ಮಡಿಕೇರಿ, ಈ ಸಲ ಚಾರ್ಮಾಡಿ, ಶಿರಾಡಿ... ಇನ್ನು ಮುಂದಿನ ಸಲ ಎಲ್ಲಿ , ಏನು ದುರಂತ ಆಗುವುದೋ ಎಂಬ ಭಯ ಪರಮ ನೆಂಟು ಆಗಿ ಬಿಟ್ಟಿದೆ....ಇಂತಹ ಭೂಕುಸಿತ, ಜಲ ಸ್ಫೋಟ ಯಾಕೆ ಆಯಿತು, ಹಿಂದೆ ಯಾಕೆ ಆಗುತ್ತಿರಲಿಲ್ಲ ಎಂಬ ಪ್ರಶ್ನೆ ಈಗ ಬಲವಾಗಿ ಕಾಡುತ್ತಿದೆ. .ಈ ಬಗ್ಗೆ ಸರಕಾರ ಆಗಲಿ, ರಾಜಕಾರಣಿ ಗಳಾಗಲಿ, ಭೂಗರ್ಭ ಅಧಿಕಾರಿಗಳಾಗಲಿ, ಅಥವಾ ಇದಕ್ಕೆ ಸಂಬಂಧ ಪಟ್ಟ ಇಲಾಖೆ ಗಳಾಗಲಿ ಯಾರು ಕೂಡಾ ಸರ್ವೇ, ಸಮೀಕ್ಷೆ , ತನಿಖೆ ಮಾಡಿ ಒಂದು ಅಧ್ಯಯನ ವರದಿ ಮಾಡುವುದಾಗಲಿ, ವೈಜ್ಞಾನಿಕ ಸಮೀಕ್ಷೆ ಮಾಡುವುದಾಗಲಿ ಯಾವುದೂ ಮಾಡುತ್ತಿಲ್ಲ. ಕಾಟಾಚಾರಕ್ಕೆ ಪಶ್ಚಿಮ ಘಟ್ಟದ ಬಗ್ಗೆ ಏನೂ ಜ್ಞಾನ ಇಲ್ಲದ ಯಾವುದೋ ಅಧಿಕಾರಿಗಳು ಬಂದು ಹೋಗಿದ್ದಾರೆ, ಅವುಗಳಿಗೆ ಅಲ್ಲಿ ಏನು ಆಗಿದೆ ಅಂತಾ ಏನೂ ಗೊತ್ತಿಲ್ಲ. ಹಾಗಾದರೆ ಈ ದುರಂತಗಳಿಗೆ ಅಂತ್ಯವಿಲ್ಲವೆ ? ಇದು ವರ್ಷ ವರ್ಷ ನಿರಂತರ ಆಗಲಿರುವ ಸರಣಿ ದುರಂತವೇ ? ರಾಜಕಾರಣಿಗಳಿಗೆ ಇಂತದ್ದು ಬೇಕು ಬಿಡಿ...ಅವರಿಗೆ ಬರ ಬಂದರೂ ಕುಶಿ, ನೆರೆ ಬಂದರೂ ಕುಶಿ...ಬರ ಪರಿಹಾರ, ನೆರೆ ಪರಿಹಾರ....ಒಟ್ಟಾರೆ ಧನದ ಹಾರದ ಮೇಲೆ ಹಾರ ಸಿಗುತ್ತದೆ. ಪಶ್ಚಿಮ ಘಟ್ಟ ಸಂರಕ್ಷಣೆಗೆ ಮಾಧವ ಗಾಡ್ಗೀಳ್ ವರದಿ ಬಂದಾಗ ವಿರೋಧ ಆಯಿತು..ನಂತರ ಕಸ್ತೂರಿ ರಂಗನ್ ವರದಿ ಬಂದಾಗ ಅದನ್ನೂ ತಿರಸ್ಕರಿಸಿದರು. ಊರಿಗೆ ಒಂದು ಪೊಲೀಸ್ ಸ್ಟೇಷನ್ ಇಲ್ಲದೇ ಇದ್ದರೆ ಹೇಗೆ ಊರಲ್ಲಿ ಕಳ್ಳ ಖದೀಮರು ತುಂಬಿ ಹೋಗುತ್ತಾರೋ ಅದೇ ರೀತಿ ಪಶ್ಚಿಮ ಘಟ್ಟ ಸಂರಕ್ಷಣೆಗೆ ಯಾವುದೇ ವರದಿ ಇಲ್ಲಾ, ಭದ್ರತೆ ಇಲ್ಲಾ...ಇದರ ಪರಿಣಾಮ ಕಳ್ಳರ ಸಾಮ್ರಾಜ್ಯ ಇಡೀ ಪಶ್ಚಿಮ ಘಟ್ಟವನ್ನೆ ಕಬಳಿ ಸಿತು. ಗಣಿಗಾರಿಕೆ, ರೆಸಾರ್ಟ್, ಟಿಂಬರ್ ಮಾಫಿಯಾ, ಅರಣ್ಯ ಅತಿಕ್ರಮಣ ನಿರಂತರ ಆಗುತ್ತಲೇ ಹೋಯಿತು. ಪಶ್ಚಿಮಘಟ್ಟದ ಮೆದುಳು, ಕರುಳು , ಅವಯವಗಳನ್ನು ಕತ್ತರಿಸುವ ಪ್ರಕ್ರಿಯೆ ನಿರಂತರ ಆಗಿ ಪಶ್ಚಿಮ ಘಟ್ಟದ ವೇದನೆ, ರೋದನ ಕೆ ಯಾರೂ ಕಿವಿ ಆಗಲೇ ಇಲ್ಲ..ಎಲ್ಲರೂ ಪಶ್ಚಿಮ ಘಟ್ಟವನ್ನು ವ್ಯಾವಹಾರಿಕ ಚೌಕಟ್ಟಿನಲ್ಲಿ ಕಂಡು ಕೊಂಡು ತಮ್ಮ ತಮ್ಮ ಸ್ವಾರ್ಥ ಲಾಭ ಗಳಿಕೆಯನ್ನು ಕಂಡರೇ ಹೊರತು ಅಲ್ಲಿನ ನೋವಿನ ಹಿಂದಿನ ಮರ್ಮವನ್ನು ಅರ್ಥ ಮಾಡಿಕೊಳ್ಳಲೇ ಇಲ್ಲ.....ನೋವು ತಿಂದು ತಿಂದು ಇನ್ನು ಸಾಧ್ಯವೇ ಇಲ್ಲಾ ಎಂದಾದಾಗ, ತಾಳ್ಮೆಯ ಎಲ್ಲಾ ಆಯಾಮಗಳನ್ನು ಕಳೆದುಕೊಂಡಾಗ ಪಶ್ಚಿಮ ಘಟ್ಟದ ರೌದ್ರ ಪ್ರತಾಪ ಏನು ಎಂಬುದನ್ನು ಕೇವಲ 5 ನಿಮಿಷಗಳಲ್ಲಿ ಮೊನ್ನೆ ತೋರಿಸಿ ಕೊಟ್ಟಿತು. ವರುಷ, ವರುಷ ಗಳಿಂದಲೂ ಪಶ್ಚಿಮ ಘಟ್ಟವನ್ನು ಕೊಚ್ಚಿ, ಕಡಿದು ಛಿದ್ರ ಮಾಡಿದ ಫಲಿತಾಂಶ ಕೆಲವೇ ಕೆಲವು ನಿಮಿಷದಲ್ಲಿ ಮನೆ, ತೋಟ, ಗದ್ದೆ ಎಲ್ಲಾ ಕೊಚ್ಚಿ ಹೋಯಿತು. ಇಲ್ಲಿ ಒಂದು ಪ್ರಶ್ನೆ ಸಹಜ ...ಯಾರೋ ಕಳ್ಳ ರಾಜಕಾರಣಿಗಳು, ಧುಷ್ಟ ಸಿರಿವಂತರು ಪಶ್ಚಿಮ ಘಟ್ಟವನ್ನು ಕೊರೆದದ್ದು ಯಾರೋ ಪ್ರಾಮಾಣಿಕ ಜನರು, ಬಡವರು, ರೈತರು ಬಲಿ ಆಗುತ್ತಿದ್ದಾರೆ...ಹೌದು...ಆದರೆ ಒಂದು ವಿಚಾರ ಈ ಪ್ರಶ್ನೆಗೆ ಉತ್ತರ ಆಗುತ್ತದೆ...ಅದೇನೆಂದರೆ ಭ್ರಷ್ಟ ರಾಜಕಾರಣಿಗಳು ಭದ್ರವಾಗಿ ಇದ್ದ ಪಶ್ಚಿಮ ಘಟ್ಟವನ್ನು ಛಿದ್ರ ಗೊಳಿಸುವಾಗ ಕೆಟ್ಟವರು, ಖದೀಮರು ಈ ರಾಜಕಾರಣಿಗಳಿಗೆ ಬೆಂಬಲ ನೀಡುವಾಗ ಪ್ರಾಮಾಣಿಕ ಜನರು, ಮತದಾರರು ಸುಮ್ಮನೆ ಕೈಕಟ್ಟಿ ಬಾಯಿ ಮುಚ್ಚಿ ಇರುವುದೇ ಈ ಎಲ್ಲಾ ಅನಾಹುತಗಳಿಗೆ ಕಾರಣ. ಉದಾಹರಣೆಗೆ ಎತ್ತಿನಹೊಳೆ ಯೋಜನೆ.. ಕಳೆದ 3 ವರುಷ ಗಳಿಂದ ಎತ್ತಿನ ಹೊಳೆ ಯೋಜನೆಯಿಂದಾಗಿ ದ.ಕ.ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಬರ ಆಗಿದ್ದರೂ ಯಾರೂ ಕೂಡ ಧ್ವನಿ ಎತ್ತದೇ ಮೌನ ಆಗಿದ್ದು , ಒಂದು ಅಸಂಬದ್ಧ ಯೋಜನೆ ಪಶ್ಚಿಮ ಘಟ್ಟದ ಧಾರಣಾ ಶಕ್ತಿಗೂ ಮೀರಿ ದೌರ್ಜನ್ಯ ರೀತಿಯಲ್ಲಿ ಆಗುತ್ತಿರುವಾಗ ಜನರು ಮೌನ ಆಗಿದ್ದರೆ ಇಂತಹ ದುರಂತಗಳು ಆಗದೇ ಮತ್ತಿನ್ನೇನು ಆಗಬೇಕು. ಜನತೆಯ ಮೌನ ರಾಜಕಾರಣಿಗಳ ಅಹಂಕಾರವನ್ನು ಹೆಚ್ಚಿಸುತ್ತದೆ. ಸರಕಾರ, ಅಧಿಕಾರ, ಕಾನೂನು ಅವರ ಕೈಯಲ್ಲಿ ಇರುವಾಗ ತಾವು ಏನು ಮಾಡಿದರೂ ಕೇಳುವವರು ಇಲ್ಲಾ ಎಂದು ಆದದ್ದೇ ಮೊನ್ನೆಯ ನೈಸರ್ಗಿಕ ದುರಂತಕ್ಕೆ ಕಾರಣ. ಇಂತಹ ದುರಂತಗಳು ಆದ ಮೇಲೆ ನಾವು ನಿಸರ್ಗದಿಂದ ಕಲಿಯಲೇ ಬೇಕಾದ ಪಾಠ ಬಹಳಷ್ಟಿವೆ. ಇನ್ನೂ ನಾವು ಕಲಿಯಲಿಲ್ಲ ಎಂದಾದರೆ ...? ಕೆಟ್ಟ ಮೇಲೆ ಬುದ್ಧಿ ಬಂದಿಲ್ಲಾ ಎಂದಾದರೆ ಇನ್ನು ಯಾವಾಗ ಸುಟ್ಟ ಮೇಲೆ ಬಂದು ಏನು ಪ್ರಯೋಜನ..!??

Dinesh Holla (Environmentalist )