ಚಹಾ ಭಾರತದಲ್ಲಿ ಅತಿಹೆಚ್ಚು ಜನ ಸೇವಿಸುವ ಪೇಯವಾಗಿದ್ದು, ಸಹಜ ಆಂಟಿ ಆಕ್ಸಿಡೆಂಟ್‍ಗಳನ್ನು ಇದು ಅಧಿಕ ಪ್ರಮಾಣದಲ್ಲಿ ಹೊಂದಿರುತ್ತದೆ. ಆದಾಗ್ಯೂ ಸ್ಥಳೀಯವಾಗಿ ಲಭ್ಯವಾಗುವ ಬ್ರಾಂಡ್‍ರಹಿತ ಸಾಮಾನ್ಯ ಚಹಾ, ಆರೋಗ್ಯಕ್ಕೆ ಹಾನಿಕರವಾದ ಕೃತಕ ಬಣ್ಣದಂಥ ಕಲ್ಮಶಗಳಿಂದ ಕಲಬೆರಕೆಯಾಗಿರುತ್ತದೆ. ಈ ಹಾನಿಕಾರಕ ಬಣ್ಣಗಳನ್ನು ಸಾಮಾನ್ಯ ಚಹಾಗೆ ಸೇರಿಸುವ ಬಗ್ಗೆ ಅರಿವಿಲ್ಲದೇ, ಅದು ಲಭ್ಯವಿರುವ ಚಹಾದಲ್ಲಿ ಅತ್ಯಂತ ಅಗ್ಗ ಎಂಬ ಕಾರಣಕ್ಕೆ ಗ್ರಾಹಕರು ಅದನ್ನೇ ಖರೀದಿಸುತ್ತಿರುತ್ತಾರೆ.
ಭಾರತದ ಅತ್ಯುನ್ನತ ಆಹಾರ ನಿಯಂತ್ರಣ ಸಂಸ್ಥೆಯಾದ ಎಫ್‍ಎಸ್‍ಎಸ್‍ಎಐ (ಭಾರತದ ಆಹಾರ ಸುರಕ್ಷೆ ಮತ್ತು ಗುಣಮಟ್ಟ ಪ್ರಾಧಿಕಾರ) ಪ್ರಕಾರ, "ಎಫ್‍ಎಸ್‍ಎಸ್‍ಎಐ ಕೆಲ ನಿರ್ದಿಷ್ಟ ಕೃತಕ ಬಣ್ಣಗಳನ್ನು ನಿರ್ದಿಷ್ಟವಾದ ಆಹಾರ ವಸ್ತುಗಳಿಗೆ ಬಳಸಲು ಅನುಮತಿ ನೀಡುತ್ತದೆ. ಆದರೆ ಆ ಪಟ್ಟಿಯಲ್ಲಿ ಚಹಾ ಸೇರಿಲ್ಲ. ಗ್ರಾಹಕರ ಹಿತದೃಷ್ಟಿಯಿಂದ ಬಣ್ಣದ ಕಲಬೆರಕೆಯನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಚಹಾಗೆ ಬಣ್ಣ ಸೇರಿಸುವುದು ಗಂಭೀರ ಆತಂಕದ ವಿಷಯವಾಗುತ್ತಿದೆ. ಬಣ್ಣ ಬರಿಸುವ ವಿವಿಧ ವಸ್ತುಗಳ ಮೂಲಕ ಚಹಾವನ್ನು ಸಂಸ್ಕರಿಸುವುದು ಕಲಬೆರಕೆ ಶೀರ್ಷಿಕೆಯಡಿ ಬರುತ್ತದೆ"
"ಕಲರಿಂಗ್ ಆಫ್ ಟೀಸ್" ಎಂಬ ಶೀರ್ಷಿಕೆಯ ಲೇಖನದಲ್ಲಿ ಭಾರತದ ಚಹಾ ಮಂಡಳಿ ಹೇಳಿದಂತೆ, ಬಣ್ಣದ ಕಲಬೆರಕೆಯು ಬೆಳೆಯುತ್ತಿರುವ ಪಿಡುಗಾಗಿ ಬೆಳೆದಿದೆ. ಗ್ರಾಹಕರ ಆರೋಗ್ಯ ದೃಷ್ಟಿಯಿಂದ ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಬಿಸ್ಮಾರ್ಕ್ ಕಂದು, ಪೊಟ್ಯಾಷಿಯಂ ನೀಲಿ, ಅರಿಶಿನ, ಇಂಡಿಗೊ, ಪ್ಲಂಬಾಗೊ ಮತ್ತಿತರ ಬಣ್ಣದ ಸಾಧನಗಳನ್ನು ಮಿಶ್ರ ಮಾಡಲು ಕಳಪೆ ಗುಣಮಟ್ಟದ ಚಹಾ ಎಲೆಗಳನ್ನು ಬಳಸಲಾಗುತ್ತದೆ. ಉತ್ಪನ್ನಕ್ಕೆ ಆಕರ್ಷಕ ಬಣ್ಣ ಅಥವಾ ಹೊಳಪು ಬರುವ ಸಲುವಾಗಿ ಹೀಗೆ ಮಾಡಲಾಗುತ್ತದೆ.
ಆದ್ದರಿಂದ ಗ್ರಾಹಕರಿಗೆ ಈ ಮೂಲಕ ಎಚ್ಚರಿಕೆ ನೀಡುವುದೇನೆಂದರೆ, ಚಹಾ ಖರೀದಿ ಹಾಗೂ ಸೇವನೆ ಮೊದಲು ಮುನ್ನೆಚ್ಚರಿಕೆ ವಹಿಸಬೇಕು. ಸರಳವಾದ ಸೂತ್ರವೆಂದರೆ, ಚಹಾ ಪುಡಿಯನ್ನು ತಣ್ಣೀರಿಗೆ ಸೇರಿಸುವ ಮೂಲಕ ಕಲಬೆರಕೆಯ ಬಣ್ಣದ ಚಹಾವನ್ನು ನೀವು ಪತ್ತೆ ಮಾಡಬಹುದು. ಕೃತಕ ಬಣ್ಣವು ತಕ್ಷಣ ನೀರಿನಲ್ಲಿ ಕರಗಿ ಬಣ್ಣವನ್ನು ನೀರಿಗೆ ಬಿಡುಗಡೆ ಮಾಡುತ್ತದೆ.