ಪರವಾನಿಗೆ ಇಲ್ಲದೆ ಬಂದ ಪಾಪಿ ನಾನು

ಪಾರಿತೋಷಕ ಕೊಟ್ಟು ಸಮ್ಮಾನಿಸುತ್ತಿರುವೆ ನೀನು.

ಸಲುಗೆಯಿಂದ ಕೇಳಲು ಎರಡು ಮಾತು ನಿನ್ನಲ್ಲಿ,

ಮಾತನಾಡಲು ಸಮಯಾವಕಾಶ ನಿನ್ನಲ್ಲೆಲ್ಲಿ...?

ಚುಚ್ಚಿತು ಮನಕೆ ನೀಯಾಡಿದ ಮುಳ್ಳಿನ ಧ್ವನಿಯಿಂದ,

ಜಾರಿತು ಇಷ್ಟವಿಲ್ಲದೆ ನೀರು ಕಣ್ಣಂಚಿನಿಂದ.


ನಂಬುತ್ತಿದ್ದೆ ಅದೇಕೋ ನಿನ್ನನ್ನು ಕುರುಡನಂತೆ

ಕಾಣದ ಕಡಲಿಗೆ ಹಂಬಲಿಸಿದ ಮನದಂತೆ.

ಅನಿಸುತಿದೆ ಯಾಕೋ ಹೃದಯ ಕಾಣೆಯಾದಂತೆ,

ಕೇಳಿಕೊಳ್ಳುತ್ತಿರುವೆ ದಯವಿಟ್ಟು ಹುಡುಕಿಕೊಡುವಂತೆ.

ಮಾತನಾಡಲು ನಾಲಿಗೆ ಹೊರಳುತ್ತಿಲ್ಲ,

ಹೇಳಲು ತುಟಿಗಳೂ ಬಿಡುತ್ತಿಲ್ಲ.


ಬಚ್ಚಿಟ್ಟಿರುವೆ ನೂರಾರು ರಹಸ್ಯಗಳನ್ನು ಶಾಂತಿಸಾಗರದಂತೆ,

ಸಾವಿರಾರು ನೋವುಗಳನ್ನು ಮುಚ್ಚಿಡುವ ಹಾಸ್ಯಗಾರನಂತೆ.

ಅಂಗಲಾಚಿತು ಹಂಬಲಿಸಿದ ಮನ

ನೋಡಲು ನಿನ್ನ ಮೊಗವ ಮುದ್ದಾದ ಮಗುವಂತೆ

ದೂರಿದರು ಜನ ನಾ ಮಾಡದ ತಪ್ಪಿಗೆ

ಮೆಲ್ಲಮೆಲ್ಲನೆ ನೀ ದೂರವಾದಂತೆ...


-ಮಾಧವ್ ಪೈ ತೋನ್ಸೆ