ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದ್ದ ಅನ್ ಲಾಕ್ 5.0 ಮಾರ್ಗಸೂಚಿಯನ್ನು ನವೆಂಬರ್ 30ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ. ಹೊಸ ಮಾರ್ಗಸೂಚಿಯನ್ನು ಸರ್ಕಾರ ಪ್ರಕಟಿಸುವುದಿಲ್ಲ.ಕೇಂದ್ರ ಗೃಹ ಸಚಿವಾಲಯ ಮಂಗಳವಾರ ಈ ಕುರಿತು ಆದೇಶ ಹೊರಡಿಸಿದೆ. ಸೆಪ್ಟೆಂಬರ್ 30ರಂದು ಪ್ರಕಟಿಸಿದ್ದ ಅನ್ ಲಾಕ್ 5.0 ಮಾರ್ಗಸೂಚಿ ನವೆಂಬರ್ 30ರ ತನಕ ವಿಸ್ತರಣೆಯಾಗಿದೆ. ಯಾವುದೇ ಹೊಸ ಮಾರ್ಗಸೂಚಿಯನ್ನು ಹೊರಡಿಸುವುದಿಲ್ಲ.

ಮಾರ್ಗಸೂಚಿ ಅನ್ವಯ ದೇಶಾದ್ಯಂತ ಕಂಟೈನ್ಮೆಂಟ್ ಝೋನ್‌ಗಳಲ್ಲಿ ಲಾಕ್ ಡೌನ್ ನವೆಂಬರ್ 30ರ ತನಕ ಮುಂದುವರೆಯಲಿದೆ. ಉಳಿದ ಪ್ರದೇಶಗಳಲ್ಲಿ ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಪ್ರಕಟಿಸಿದ ನಿಯಮಗಳು ಜಾರಿಯಲ್ಲಿರುತ್ತವೆ. ಅಂತರರಾಜ್ಯಗಳ ನಡುವೆ ವಾಹನ, ವ್ಯಕ್ತಿಗಳ ಸಂಚಾರಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಅಂತರರಾಜ್ಯ ಸಂಚಾರಕ್ಕೆ ಪ್ರತ್ಯೇಕವಾದ ಯಾವುದೇ ಪಾಸ್‌ಗಳ ಅಗತ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಸ್ಪಷ್ಟಪಡಿಸಿದೆ.

ಅನ್ ಲಾಕ್ 5.0 ಮಾರ್ಗಸೂಚಿಯಲ್ಲಿ ಸಿನಿಮಾ ಮಂದಿರ, ಈಜುಕೊಳ, ಕ್ರೀಡಾ ತರಬೇತಿ, ಮನೋರಂಜನಾ ಪಾರ್ಕ್‌ಗಳನ್ನು ತೆರೆಯಲು ಅನುಮತಿ ನೀಡಲಾಗಿತ್ತು. ಚಿತ್ರಮಂದಿರಲ್ಲಿ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಬೇಕು ಎಂದು ತಿಳಿಸಲಾಗಿತ್ತು. ಇದು ನವೆಂಬರ್ 30ರ ತನಕ ಮುಂದುವರೆಯಲಿದೆ.

ಅಕ್ಟೋಬರ್ 15ರಿಂದ ಶಾಲಾ-ಕಾಲೇಜುಗಳನ್ನು ತೆರೆಯಬಹುದು. ಈ ಬಗ್ಗೆ ರಾಜ್ಯ ಸರ್ಕಾರಗಳು ಅಂತಿಮ ತೀರ್ಮಾನ ಕೈಗೊಳ್ಳಬೇಕು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿತ್ತು. ಕರ್ನಾಟಕ ಸರ್ಕಾರ ನವೆಂಬರ್ 17ರಿಂದ ಕಾಲೇಜುಗಳನ್ನು ಆರಂಭಿಸಲು ಮುಂದಾಗಿದೆ.