ಬೆಂಗಳೂರು: "ಕರ್ನಾಟಕದಲ್ಲಿ 2021 ರ ಆರಂಭದಲ್ಲೇ ಕೊರೊನಾ ವೈರಸ್ ಲಸಿಕೆ ಸಿಗಲಿದೆ" ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವ ಡಾ.ಕೆ. ಸುಧಾಕರ್, "ಅಸ್ಟ್ರಾಜನಿಕಾ ಸಂಸ್ಥೆ ಎಂಡಿ ಗಗನ್ ದೀಪ್ ಸೇರಿದಂತೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು, ಅಕ್ಸಫರ್ಡ್ ವಿವಿ ಲಸಿಕೆ ಪ್ರಯೋಗ ಮೊದಲ ಹಂತ ಮುಕ್ತಾಯವಾಗಿದ್ದು, 2021 ಆರಂಭದಲ್ಲೇ ರಾಜ್ಯದ ಜನತೆಗೆ ಕೋವಿಡ್ ಲಸಿಕೆ ಸಿಗಲಿದೆ" ಎಂದರು.
"ಲಸಿಕೆ ಪ್ರಯೋಗ ಮೊದಲ ಹಂತದಲ್ಲಿ 18 ವರ್ಷದ ಮೇಲ್ಪಟ್ಟವರಿಗೆ, 50 ವರ್ಷದ ಮೇಲ್ಪಟ್ಟರ ಮೇಲೆ ಪ್ರಯೋಗ ಆಗಿದೆ. ಪ್ರಯೋಗ ಮಾಡಿಸಿಕೊಂಡವರಲ್ಲಿ. 28 ದಿನಗಳಲ್ಲಿ ರೋಗ ನಿರೋಧಕ ಶಕ್ತಿ ಉತ್ಪಾದನೆ ಆಗಿದೆ. ಲಸಿಕೆ ಯಶಸ್ವಿಯಾದರೆ ವೈರಸ್ ವಿರುದ್ಧ ಹೋರಾಟ ಸಾಧ್ಯವಾಗುತ್ತದೆ ಎಂದಿದ್ದಾರೆ. ಕೊರೊನಾ ಲಸಿಕೆ ಇನ್ನೂ ಬಂದಿಲ್ಲ ಹೀಗಾಗಿ ಅದು ಉಚಿತವೇ ಅಂತ ಈಗಲೇ ಹೇಳುವುದಕ್ಕೆ ಆಗುವುದಿಲ್ಲ. ಲಸಿಕೆ ಬಂದ ಮೇಲೆ ದರ ಬಗ್ಗೆ ಸರಕಾರ ನಿರ್ಧಾರ ಮಾಡಲಿದೆ. ಆದರೆ ಕೊರೊನಾ ಚಿಕಿತ್ಸೆಗೆ ರಾಜ್ಯ ಸರಕಾರ ಉಚಿತ ಸೌಕರ್ಯವನ್ನೇ ಒದಗಿಸಿದೆ. ಸರ್ಕಾರವೇ ಚಿಕಿತ್ಸೆ ವೆಚ್ಚ ಭರಿಸಿದ್ದೇವೆ" ಎಂದರು.
"ಕೊರೊನಾ ಲಸಿಕೆ 2021 ರ ಆರಂಭಕ್ಕೆ ಸಿಗುವ ಸಾಧ್ಯತೆ ಇದ್ದು, ಲಸಿಕೆ ಹಂಚಲು ಸಿದ್ಧತೆ ನಡೆಸಿದ್ದೇವೆ. ಲಸಿಕೆಗೆ ತಗುಲುವ ವೆಚ್ಚವನ್ನು ಮಾತ್ರ ಪಡೆದು ಲಸಿಕೆ ನೀಡಲಾಗುವುದು" ಎಂದು ಹೇಳಿದರು.