ಎಲೆಗಳಿಲ್ಲದ ಮನದ ಮರ ಚಿಗುರೊಡೆ ಯಲಿನ್ನೆಷ್ಟು ಕಾಲ ನಾ ನಿನ್ನಲ್ಲಿ ಕೇಳ ಬೇಕು
ಬಲೆಯ ಬೀಸಿದೆಯಲ್ಲ ಒಲವ ಕಡಲಾದ್ಯಂತ
ಸಮ್ಮಿಲನ ಜಾಲಕೆ ಅಲ್ಲಿ ಆಳ ಬೇಕು
ಒಡಲೊಣಗಿ ವಿರಹದಲಿ ಒಡೆಯುವುದು ಕಾಣದೇ ಮತ್ತೇಕೆ ಮೌನ ಹೇಳು
ಚಡಪಡಿಸುತಿಹ ಗಿಣಿಯು ಎದೆಯೊಳಗೆ ನಡುಗುತಿರೆ ಮನವ ಸಂತೈಪಲ್ಲಿ ಸಮ್ಮೇಳ ಬೇಕು
ಜಕ್ಕವಕ್ಕಿಯು ಒಂಟಿಯಾಗಿ ಆಗಸದಲ್ಲಿ ಹಾರಾಡಿ ಮುದ ಪಡೆಯಲೆಂತು ಸಾಧ್ಯ
ಅಕ್ಕ ಪಕ್ಕದಿ ಚೊಕ್ಕದಾಗಿ ಚಕ್ಕಂದವನು ಸೊಗದಿಂದ ಪಡೆದಲ್ಲಿ ಬಾಳ ಬೇಕು
ಮಸಣದಲಿ ಅರಳಿರುವ ಹೂವ ಮುಡಿಸುತ ಪ್ರೀತಿ ತೋರಿಸುವ ಔದಾರ್ಯಕೆಂಥ ಅರ್ಥ
ನಸುನಗುತ ಕರಪಿಡಿದು ನಡೆಯುವಾತುರ ಇರದೆ
ಇದ್ದಾಗ ಒಲವೆಲ್ಲಿ ಹೂಳ ಬೇಕು
ನವಿಲೇಕೆ ನಲಿಯುವುದು ಮೋಡ ಕಪ್ಪಾದಾಗ ವರ್ಷ ಹರ್ಷದ ಧಾರೆಗಾಗಿ ತಾನೆ
ರವಿಯು ಕಡಲಾಳಕ್ಕೆ ಇಳಿವ ಹೊತ್ತಾದರೂ ಬಳಿಸಾರೆ ಎಷ್ಟಿಲ್ಲಿ ತಾಳ ಬೇಕು
ಹೂವು ಅಡಗಿರದೇನು ಅತ್ತಿ ಹಣ್ಣಲು ಕೂಡಾ ಮುಡಿಗೇರದಿಹ ಭಾಗ್ಯ ಇಟ್ಟುಕೊಂಡು
ಠಾವು ಬೇಕಾಗಿಹುದು ನಿನ್ನ ಸಾಂಗತ್ಯದಲಿ ಮನ ಸೆಳೆಯೆ ಹೊಡೆವಲ್ಲಿ ತಾಳ ಬೇಕು
ನಿಂತ ಗಡಿಯಾರವೂ ಕಾಲವನು ತೋರುವುದು ಸುಳ್ಳೇನು ದಿನಕೆರಡು ಬಾರಿ ತಾನು
ಕಂತಿ ಹೋಗದ ಹಾಗೆ ಕಾಂತಿಯನು ಉಳಿಸಗೊಡು
"ಈಶ" ನಾಸರೆಯಲ್ಲಿ ಬೀಳ ಬೇಕು.
-Dr.Suresh Negalaguli