ಕೋರಿಕೆ 


ಯಾರು ತೆತ್ತುವಿರೀ ಈ ಬೆಲೆಯಾ..? 

ಕೇಳಿ ನಿಮ್ಮೊಳ ಮನಸನು 

ಪರರ ಜೀವದ ಬೆಲೆಗೊತ್ತೆ...? 

ನಿಮ್ಮವರ ಕಾಳಜಿ ಗೊತ್ತೇ...? 

ನಿಮ್ಮ ಬದುಕಿನ ಹೊಣೆಗಾದರು 

ನೀವು ಬದ್ಧರೇ.............? 


ಹಸಿ ಮರದ ತುಂಡುಗಳ 

ದಹಿಸಲು ಕರಗಿ ಕಣ್ಣೀರಾಗುವ ನಾವುಗಳು

ಇಂದು ಕಾಣುತ್ತಿದ್ದೇವೆ   ..... 

ಸಾಮೂಹಿಕ ಶವಸಂಸ್ಕಾರದ ಕಿಚ್ಚಿನಲಿ 

ಕೆಂಡ ಕರಕಲಾದ ಮೃತ ದೇಹಗಳು 


ಅದೆಷ್ಟೋ ಪ್ರಾಮಾಣಿಕ ಸೇವಕರು 

ಕೈಮುಗಿದು ಗೋಗರೆದು  ಕಣ್ಣೀರಿಟ್ಟಿದ್ದಾರೆ 

ಕಾಲನ ಮುಂದೆ ತಲೆಬಾಗಿ..... 

ಅನ್ಯರ ತಪ್ಪಿಗೆ ತಾವು ಸೋತು ಶರಣಾಗಿ



ಮನೆ ಮಕ್ಕಳು, ಮಡದಿಯ ಬಿಟ್ಟು 

ಕರ್ತವ್ಯವೇ ದೇವರೆಂದುಕೊಂಡು 

ಪ್ರಾಣ ಪಣಕ್ಕಿಟ್ಟು ಹಗಲಿರುಳು 

ಅವಿರತ ಶ್ರಮದಿಂದ ಹೆಣಗಾಡುತ್ತಿದ್ದಾರೆ


ತನ್ನೆಲ್ಲ ಬಯಕೆಗಳ ಬದಿಗೊತ್ತಿ 

ನಿಂತ ನೆಲವೆಲ್ಲ ಶೋಕಿಸುವಷ್ಟು 

ತಮ್ಮ ದೇಹವೇ ಸ್ಪಂದಿಸದಷ್ಟು 

ಕುಗ್ಗಿದರು ಮೇಲೆದ್ದು ..... 

ನಿಮ್ಮ ಪ್ರಾಣವನುಳಿಸಿದ್ದಾರೆ 

ತಮ್ಮ ಪ್ರಾಣವನು ಕೊಟ್ಟು.. 


ಹಸುಳೆಗಳ ಆಕ್ರಂದನ ಮನ ಮಿಡಿಯದೇ 

ಹೆತ್ತೊಡಲ ಕೂಗಿಗೂ ಕಿವಿಯಿಲ್ಲವೇ... 

ವೃದ್ದ ತಂದೆ ತಾಯಂದಿರ ಕಂಬನಿಯ ಕಾಣಿರೆ 

ಅನಾಥ ಕುಟುಂಬಗಳ ನಿರವ ಮೌನವು ಮುಂದಿರೇ 


ಸಾಂಕ್ರಾಮಿಕ ರೋಗದ ವಿರುದ್ಧ 

ಮಾಡಲೇ ಬೇಕಿರುವ ಕರ್ತವ್ಯ ಮರೆಯದಿರಿ 

ಗ್ರಹಬಂಧನದ ನಿಯಮವನು ಮೀರದಿರಿ 

ಕರ್ತವ್ಯ ನಿರತರಿಗೆ ಸಹಕರಿಸುವುದ ಮರೆಯದಿರಿ 

ರೋಗದ ವಿರುದ್ಧ ಹೋರಾಡಿ ಮಡಿದವರ ನೆನೆಯುವುದನು ಮರೆಯದಿರಿ... 


ಬೆಳಕ ಮೋಹಿಸಿ ರೆಕ್ಕೆ ಸುಟ್ಟೊಡೇ 

ಸಾಯಲಹುದೇ..... 

ಬೆಳಕಿನ ಮಿಂಚುಹುಳುಗಳಲ್ಲವೋ 

ಸಂಬಂಧಗಳು ಭಾವನೆಗಳು 

ಮಿಗಿಲಾಗಿ ಬಂಧ ಹೊಂದಿರೋ ..... 

ಬಾಳಿ ಬದುಕುವ ಮನುಷ್ಯ ಜೀವನ. 


ನಾಳೆಗಳ ಉತ್ತಮ ದಿನಕ್ಕಾಗಿ 

ಸಮಾಜದ ಒಳಿತಿಗಾಗಿ  

ರೋಗಹರಡದೆ ಮನೆಯಲ್ಲಿರೋಣ...

ರೋಗನಿರ್ಮೂಲನೆಯ ನಿಯಮ ಪಾಲಿಸೋಣ.. 


ಪ್ರೀತಿ. ಮಾಂತಗೌಡ. ಬನ್ನೆಟ್ಟಿ