ಕುಡುಬಿ ಹೋಳಿ ಹಬ್ಬ


ದೇವದೂತರಂತೆ

ಧರೆಯಲ್ಲಿಳಿದವರಂತೆ

ಚಂದದಿ ಸಿಂಗರಿಸಿ ನಿಂತಾರೋ

ಅಂದದ ಮನಸೂರೆ ಗೊಂಡಾರೋ


ಕಾಮನಬಿಲ್ಲಿನ ಬಣ್ಣ

ಇವರವಸ್ತ್ರಗಳಣ್ಣ

ವಿಧವಿಧದ ಸಂಕೇತ ಸಾರುವವೋ

ನೋಡುಗರಿಗಾನಂದ ಬೀರುವವೋ


ಹಕ್ಕಿ ಪುಕ್ಕವು ಪೇಟದಿ

ಕುಡುಬಿಗಳ್ ಧರಿಸಿದ ಕಿರೀಟ

ಮೇಲ್ ಗಂಧದ ಹೂಮಾಲೆ ಹೊಂದ್ಯಾರೋ

ಪರಿಸರ ಸ್ನೇಹಿಆಗ್ಯಾರೋ


ಕೋಲಿನಾಟದ ಕುಣಿತ

ಗುಮ್ಟ್ ನಾದದ ಸೆಳೆತ

ಸದ್ದಿಲ್ಲದೇ ಕಣ್ಮನವು ತಣಿದಾವೋ

ಸುಂದರ ಐಸಿರಿ ಹೊಂದ್ಯಾವೋ



ಜೋಡಿ ಕೂಡಿ ಹಾಡುತ ಮೋಡಿ

ಕಾಲಲಿ ಕಟ್ಟಿದ ಗೆಜ್ಜೆ

ನಾದಕೆ ತಕಧಿಮಿ ಹೆಜ್ಜೆ

ನವಿಲಿನ ನಾಟ್ಯವ ತೋರುವವೋ



ಬಿಲ್ಲುಬಾಣವ ಹೊತ್ತು

ಬೇಟೆಯನರಿಸುತ ಸುತ್ತು

ಕಾಡುಮೇಡೆಲ್ಲವನು ಅಲೆದಾರೋ

ನೈಪುಣ್ಯದ ಕಲೆಯಲ್ಲಿ ಪಳಗ್ಯಾರೋ


ತೋಳು ತೆಕ್ಕೆಯಲಿಡಿದು

ಸಂಸ್ಕೃತಿ ಮಡಿಲಲಿ ಬೆಳೆದು

ದೈವದ ಭಾವನೆ ಉಳಿಸ್ಯಾರೋ

ಒಮ್ಮತದ ಬಾಳುವೆ ನೆಡೆಸ್ಯಾರೋ


ಪ್ರೀತಿ. ಮಾಂತಗೌಡ. ಬನ್ನೆಟ್ಟಿ.