ಉಡುಪಿ,(ಸೆಪ್ಟೆಂಬರ್, 3):  ಸೆಪ್ಟೆಂಬರ್ 2 ರಂದು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಆಯುತ್ತಿದ್ದ 4 ಮಂದಿ ಮಕ್ಕಳನ್ನು ರಕ್ಷಿಸಿ, ಪುನರ್ ವಸತಿಗಾಗಿ ಮಕ್ಕಳ ಕಲ್ಯಾಣ ಸಮಿತಿ ವಶಕ್ಕೆ ನೀಡಲಾಗಿದೆ. ಕಾರ್ಮಿಕ ಇಲಾಖೆ, ಸಮಾಜ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ , ಪೋಲಿಸ್ ಇಲಾಖೆ ಮಲ್ಪೆ, ಮಕ್ಕಳ ಸಹಾಯವಾಣಿ ಹಾಗೂ ಸ್ಪೂರ್ತಿ ವಿಶ್ವಾಸದ ಮನೆಯ ಸಹಯೋಗದೊಂದಿಗೆ ಇಲಾಖೆಯ ತಂಡವು  ಗದಗ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಯ ವಲಸೆ ಕಾರ್ಮಿಕರ 3 ಬಾಲಕರು ಮತ್ತು 1 ಬಾಲಕಿ ಸೇರಿದಂತೆ ಒಟ್ಟು 4 ಮಂದಿ ಮಕ್ಕಳನ್ನು ರಕ್ಷಣೆ ಮಾಡಲಾಗಿದೆ.

   ಬಾಲ ಮತ್ತು ಕಿಶೋರಾವಸ್ಥೆಯ ಕಾರ್ಮಿಕರ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986 ರ ತಿದ್ದುಪಡಿ ಪ್ರಕಾರ 14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಯಾವುದೇ ಕೆಲಸ ಮಾಡಿದ್ದಲ್ಲಿ ಹಾಗೂ 14 ರಿಂದ 18 ವರ್ಷದೊಳಗಿನ ಕಿಶೋರಾವಸ್ಥೆಯ ಕಾರ್ಮಿಕರು ಕಾರ್ಖಾನೆ, ಹೆಚ್ಚು ಸುಡುವ ದ್ರವ ತಯಾರಿ, ಗಣಿ ಕೆಲಸದಂತಹ  ಅಪಾಯಕಾರಿ ಉದ್ದಿಮೆಗಳಲ್ಲಿ ಕೆಲಸ ಮಾಡಿಸಿಕೊಂಡಲ್ಲಿ ಮಾಲೀಕರಿಗೆ  6 ರಿಂದ 2 ವರ್ಷ ಜೈಲು, ರೂ.20000 ದಿಂದ ರೂ.50000/- ದವರೆಗೆ ದಂಡ ಅಥವಾ ಎರಡನ್ನು ವಿಧಿಸಲು ಕಾಯ್ದೆಯಲ್ಲಿ ಕಾನೂನು ಜಾರಿಯಲ್ಲಿದ್ದು 14 ವರ್ಷ ದೊಳಗಿನ ಮಕ್ಕಳನ್ನು ಮತ್ತು 15 ರಿಂದ 18 ವರ್ಷದೊಳಗಿನ ಕಿಶೋರ ಕಾರ್ಮಿಕರನ್ನು ಕಾಯ್ದೆಯ ಪ್ರಕಾರ ಕೆಲಸಕ್ಕೆ  ನೇಮಿಸಿಕೊಳ್ಳಬಾರದೆಂದು ಕಾರ್ಮಿಕ ಇಲಾಖೆ ತಿಳುವಳಿಕೆ ನೀಡಿದೆ.