ಉಡುಪಿ (ಜುಲೈ 25): ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರ ನೇತೃತ್ವದ ಕರ್ನಾಟಕ ರಾಜ್ಯ ಸರ್ಕಾರ ಒಂದು ವರ್ಷ ಪೂರ್ಣಗೊಳಿಸಿರುವ ಸುಸಂದರ್ಭದ ಪ್ರಥಮ ವರ್ಷದ ಪ್ರಧಾನ ಸಮಾರಂಭವು ನವತಂತ್ರಜ್ಞಾನದ ವರ್ಚುವಲ್ ವೇದಿಕೆಯ ಮೂಲಕ ಜುಲೈ.27ರಂದು ಬೆಳಗ್ಗೆ 11 ಕ್ಕೆ  ವಿಧಾನ ಸೌಧದ ಬ್ರಾಂಕೈಟ್ ಹಾಲ್‍ನಲ್ಲಿ ನಡೆಯಲಿದೆ.

    ಪ್ರಸ್ತುತ ಕಾರ್ಯಕ್ರಮವು ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಬಿತ್ತರವಾಗಲಿದೆ. ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪರವರು ರಾಜ್ಯದ ಜನರನ್ನು ಉದ್ದೇಶಿಸಿ , ಕಳೆದ ಒಂದು ವರ್ಷದಲ್ಲಿ ಕೈಗೊಂಡಿರುವ ಜನಪರ ಕಲ್ಯಾಣ ಕಾರ್ಯಗಳು,  ಅಭಿವೃದ್ಧಿ ಕಾರ್ಯಗಳು , ಕೋವಿಡ್-19 ಸಮಯದಲ್ಲಿ ಕೈಗೊಂಡಿರುವ  ಕಾರ್ಯಕ್ರಮಗಳ ಬಗ್ಗೆ ಹಾಗೂ ಮುಂದಿನ ದಿನಗಳಲ್ಲಿ ಆಗಬೇಕಾದ ಕೆಲಸ-ಕಾರ್ಯಗಳು ಸೇರಿದಂತೆ ಮತ್ತಿತ್ತರ ವಿಷಯಗಳ ಕುರಿತು ಮಾತನಾಡಲಿದ್ದಾರೆ. ಅಲ್ಲದೇ, ಸರ್ಕಾರದಿಂದ ವಿವಿಧ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ.

      ಉಡುಪಿ ಜಿಲ್ಲೆಯಲ್ಲಿ ಜುಲೈ 27ರಂದು ಬೆಳಿಗ್ಗೆ 11.00ಘಂಟೆಗೆ ಜಿಲ್ಲಾಧಿಕಾರಿ ಕಚೇರಿ ಸಂಕಿರ್ಣದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಈ ಕಾರ್ಯಕ್ರಮದ ನೇರ ಪ್ರಸಾರವನ್ನು  ನವತಂತ್ರಜ್ಞಾನದ ವರ್ಚುವಲ್ ಪ್ಲಾಟ್ ಫಾರಂ ಮೂಲಕ ವೀಕ್ಷಿಸಲು ವ್ಯವಸ್ಥೆ ಮಾಡಲಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಎಲ್ಲಾ ಶಾಸಕರು ಹಾಗೂ  ಜನಪ್ರತಿನಿಧಿಗಳು , ಅಧಿಕಾರಿಗಳು , ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನ ಪಡೆದ ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

    ಈ ಸಂದರ್ಭದಲ್ಲಿ ಸರ್ಕಾರದ ಒಂದು ವರ್ಷದ ಸಾಧನೆಗೆ ಸಂಬಂಧಿಸಿದಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಹೊರ ತಂದಿರುವ ಕಿರುಹೊತ್ತಿಗೆ ಹಾಗೂ ಸರ್ಕಾರದ ಒಂದು ವರ್ಷದ ಪ್ರಗತಿ ಸಾಧನೆ ಬಿಂಬಿಸುವ  ಜನಪದ ಮತ್ತು ಮಾರ್ಚ್ ಆಫ್ ಕರ್ನಾಟಕ ಬಿಡುಗಡೆ ನಡೆಯಲಿದೆ ಎಂದು ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ ತಿಳಿಸಿದ್ದಾರೆ.