ಉಡುಪಿ,(ಡಿಸೆಂಬರ್ 10): ಉಡುಪಿ ತಾಲೂಕು ಮಹಾಲಸ ಕ್ರಾಸ್, ಮನೆ ನಂ: 9-4-134, ಇಲ್ಲಿ ವಾಸವಾಗಿರುವ ಬಿ.ದಿನೇಶ್ ಹಿಂಬಾಳೆ ಈತನು ಜುಲೈ 4, 2013 ರಂದು ಬೆಳಗ್ಗೆ ಕೆ.ಸಂತೋಷ್ ಬೈಲಿಫ್ ಇವರು ಜಿ. ನಾರಾಯಣ, ಹರಿಕೃಷ್ಣ ಎಸ್.ಕೆ, ರಾಮಚಂದ್ರ ಉಪಾಧ್ಯ, ಜನಾರ್ಧನ, ಲಕ್ಷಿ ನಾರಾಯಣ ಉಪಾಧ್ಯ ಮತ್ತು ಉಡುಪಿ ನಗರ ಠಾಣಾ ಸಿಬ್ಬಂದಿಯವರಾದ ವಿಶ್ವಜಿತ್ ಮತ್ತು ಪ್ರಮೀಳಾ ಇವರುಗಳೊಂದಿಗೆ ನ್ಯಾಯಾಲಯದ ಆದೇಶದಂತೆ ಡೆಲಿವರಿ ವಾರೆಂಟ್‌ನ್ನು ಜಾರಿ ಮಾಡಲು ಉಡುಪಿಯ ಶಿವಳ್ಳಿ ಗ್ರಾಮದ ತೆಂಕಪೇಟೆ ವಾರ್ಡ್ನ ಬೊಬ್ಬರ್ಯಲೇನ್‌ನಲ್ಲಿರುವ ಆರೋಪಿತನ ಬಾಬ್ತು ಮನೆ ನಂ:9-4-152 ರ ಬಳಿ ಹೋದಾಗ, ತಾನು ವಾಸವಿರುವ ಮನೆಯೀಗ ನೀವು ಡೆಲಿವರಿ ವಾರೆಂಟ್ ಜಾರಿ ಮಾಡಲು ಬಂದ 9-4-152 ಆಗಿರದೇ, 9-4-134 ಆಗಿರುತ್ತದೆ ಎಂದು ವಾದ ಮಾಡಿ, ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ, ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

   ಈ ಬಗ್ಗೆ ಉಡುಪಿ ನಗರ ಠಾಣೆಯ ಪಿ.ಎಸ್.ಐ ಲಿಂಗರಾಜು ಹೆಚ್ ಇವರು ತನಿಖೆ ನಡೆಸಿ, ದೋಷಾರೋಪಣೆ ಪತ್ರ ಸಲ್ಲಿಸಿದ್ದರು.

   ಈ ಪ್ರಕರಣದ ವಿಚಾರಣೆ ನಡೆಸಿದ ಒಂದನೇ ಹೆಚ್ಚುವರಿ ಸಿ.ಜೆ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶ ಎಂ.ಎನ್. ಮಂಜುನಾಥ್, ಇವರು ಆರೋಪಿತನ ವಿರುದ್ಧದ ಆರೋಪವು ಸಾಬೀತಾಗಿದ್ದು, ಆರೋಪಿತನಿಗೆ ನ್ಯಾಯಾಲಯದ ಆದೇಶ ಪಾಲನೆಗೆ ಅಡ್ಡಿ ಉಂಟು ಮಾಡಿರುವುದಕ್ಕೆ ಆರು ತಿಂಗಳ ಕಾರಾಗೃಹ ಶಿಕ್ಷೆ ಮತ್ತು ತಲಾ 3000 ರೂ. ದಂಡ, ದಂಡ ಕಟ್ಟಲು ತಪ್ಪಿದ್ದ÷ಲ್ಲಿ 15 ದಿನಗಳ ಕಾರಾಗೃಹ ವಾಸದ ಶಿಕ್ಷೆ ನೀಡಿ ಡಿಸೆಂಬರ್ 2 ರಂದು ತೀರ್ಪು ನೀಡಿರುತ್ತಾರೆ.

ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕಿ ಮೋಹಿನಿ ಕೆ. ವಾದ ಮಂಡಿಸಿದ್ದರು.