ನವದೆಹಲಿ: ಮಂಗಳೂರು ಸೇರಿ ಮೂರು ವಿಮಾನ ನಿಲ್ದಾಣಗಳ ಜವಾಬ್ದಾರಿಯನ್ನ ಅದಾನಿ ಗ್ರೂಪ್ ಗೆ ವಹಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಅಕ್ಟೋಬರ್ 31ರಿಂದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ, ನವೆಂಬರ್ 2ರಿಂದ ಲಖನೌ ವಿಮಾನ ನಿಲ್ದಾಣ ಹಾಗೂ ನವೆಂಬರ್ 11ರಿಂದ ಅಹಮದಾಬಾದ್ ವಿಮಾನ ನಿಲ್ದಾಣಗಳ ಕಾರ್ಯಾಚರಣೆ, ನಿರ್ವಹಣೆ ಮತ್ತು ಅಭಿವೃದ್ಧಿ ಕೆಲಸಗಳನ್ನು ಅದಾನಿ ಗ್ರೂಪ್ ನೋಡಿಕೊಳ್ಳಲಿದೆ.

ವಿಮಾನಯಾನ ಸಚಿವಾಲಯ  ಅದಾನಿ ಗ್ರೂಪ್ ಗೆ ಮೂರು ಏರ್ಪೋಟ್ ಗಳ ಜವಾಬ್ದಾರಿ ನೀಡಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ. ಒಟ್ಟು ಆರು ಪ್ರಮುಖ ವಿಮಾನ ನಿಲ್ದಾಣಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ 2019ರಲ್ಲಿ ಕರೆದಿದ್ದ ಬಿಡ್ಡಿಂಗ್ ನಲ್ಲಿ ಅದಾನಿ ಎಂಟರ್ಪ್ರೈಸಸ್ ಆರೂ ವಿಮಾನ ನಿಲ್ದಾಣಗಳ ಹಕ್ಕುಗಳನ್ನು ಪಡೆದುಕೊಂಡಿದೆ. ಸದ್ಯ ಮೂರು ಏರ್ಪೋಟ್ ಗಳನ್ನ ಅದಾನಿ ಗ್ರೂಪ್ ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿದೆ, ಉಳಿದಂತೆ ಜೈಪುರ, ತಿರುವನಂತಪುರಂ ಮತ್ತು ಗುವಾಹಟಿ ಏರ್ಪೋಟ್ ಗಳಲ್ಲಿ ಮುಂದಿನ ದಿನಗಳಲ್ಲಿ ಜವಾಬ್ದಾರಿ ವಹಿಸಿಕೊಳ್ಳುವ ಸಾಧ್ಯತೆಗಳಿವೆ.

ಈ ಸಂಬಂಧ ಅದಾನಿ ಮಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಕಂಪೆನಿ ಜತೆ ವಿಮಾನ ಯಾನ ಸಚಿವಾಲಯದ ಒಪ್ಪಂದವು ಗುರುವಾರ ಆಗಿದೆ ಎಂದು ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕೃತವಾಗಿ ಪ್ರಕಟಿಸಿದೆ. ಈ ಒಪ್ಪಂದದಂತೆ ವಿಮಾನ ನಿಲ್ದಾಣವನ್ನು ಸಂಪೂರ್ಣವಾಗಿ ಅದಾನಿ ಕಂಪೆನಿ ನಿರ್ವಹಿಸಲಿದೆ. ಕೆಲ ತಿಂಗಳ ಕಾಲ ವಿಮಾನ ನಿಲ್ದಾಣದ ನಿರ್ದೇಶಕರು ಮುಂದುವರಿಯಲಿದ್ದು, ಬಳಿಕ ಅದಾನಿ ಕಂಪೆನಿಯು ಮುಖ್ಯಸ್ಥ ಹುದ್ದೆಗೆ ತನ್ನ ಅಧಿಕಾರಿಯನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಭಾರತೀಯ ವಿಮಾನ ನಿಲ್ದಾಣ ಪ್ರಾಧಕಾರದಿಂದ ನಿರ್ವಹಣೆಗೊಳ್ಳುತ್ತಿದ್ದ ವಿಮಾನ ನಿಲ್ದಾಣವನ್ನು ಸಾರ್ವಜನಿಕ ಖಾಸಗಿ ಪಾಲುದಾರಿಕೆಯಲ್ಲಿ ಸರಕಾರ ಅದಾನಿ ಗ್ರೂಪ್‌ಗೆ 50 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ.

ಅದಾನಿ ಸಂಸ್ಥೆಗೆ ಪೂರ್ಣವಾಗಿ ಹಸ್ತಾಂತರವಾದ ಬಳಿಕ ವಿಮಾನ ಆಗಮನ-ನಿರ್ಗಮನದ ಉಸ್ತುವಾರಿ ಮಾತ್ರ ಪ್ರಾಧಿಕಾರ ನೋಡಿಕೊಳ್ಳಲಿದೆ. ಹೀಗಾಗಿ ಎಟಿಸಿ (ಏರ್ ಟ್ರಾಫಿಕ್ ಕಂಟ್ರೋಲ್) ಹಾಗೂ ಕಮ್ಯುನಿಕೇಶನ್ ಆಯಂಡ್ ನೇವಿಗೇಶನ್ ಸೆಂಟರ್‌ಗೆ ಪ್ರಾಧಿಕಾರವೇ ಉಸ್ತುವಾರಿ ನೋಡಿಕೊಳ್ಳಲಿದೆ. ಉಳಿದಂತೆ ಭದ್ರತಾ ಸಿಬ್ಬಂದಿ ಹಾಗೂ ಏರ್‌ಲೈನ್ ಸಿಬಂದಿ ಹೊರತುಪಡಿಸಿ ಟರ್ಮಿನಲ್ ಕಟ್ಟಡ, ರನ್ ವೇ, ಎಲೆಕ್ಟ್ರಿಕಲ್, ಸಿವಿಲ್ ಸೇರಿದಂತೆ ಎಲ್ಲ ವಿಚಾರವನ್ನು ಅದಾನಿ ಸಂಸ್ಥೆ ನಿರ್ವಹಿಸಲಿದೆ.