ಮಂಗಳೂರು, ಏಪ್ರಿಲ್ 15: "ಕಾಂಗ್ರೆಸ್ ಪಕ್ಷದ ವರಿಷ್ಠ ನಾಯಕರಾದ ಸನ್ಮಾನ ಜಿ. ಪರಮೇಶ್ವರ್ ಅವರು ರಾಜಕೀಯ ಬೆಂಬಲಕ್ಕಾಗಿ ಎಸ್‌ಡಿಪಿಐಗೆ ಮಾಡಿರುವ ಬಹಿರಂಗ ಮನವಿ, ಕಾಂಗ್ರೆಸ್ ಪಕ್ಷದ ಪಿಎಫ್‌ಐ ಪರ ನಿಲುವು, ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಮಾನಸಿಕತೆ ಮತ್ತು ಮುಂದುವರಿದ ಓಲೈಕೆ ರಾಜಕಾರಣಕ್ಕೆ ಜೀವಂತ ಸಾಕ್ಷಿಯಾಗಿದೆ. ಅತ್ಯಂತ ಪ್ರಮುಖವಾದ ಈ ಕಾಲಘಟ್ಟದಲ್ಲಿ, ರಾಜ್ಯದ ಜನತೆ ತಮ್ಮ ಮತ್ತು ತಮ್ಮ ಮುಂದಿನ ಜನಾಂಗಗಳ ಭವಿಷ್ಯವನ್ನು ನಿರ್ಣಯಿಸುವ ಈ ಸಂದರ್ಭದಲ್ಲಿ ನಿಷೇಧಿತ ಭಯೋತ್ಪಾದಕ ಸಂಘಟನೆ ಪಿಎಫ್‌ಐ ನೊಂದಿಗೆ ಎಸ್‌ಡಿಪಿಐ ಗಿರುವ ನಿಕಟ ಸಂಬಂಧವನ್ನು ತಿಳಿದೂ ತಿಳಿದೂ ಈ ಸಂಘಟನೆಗಳಿಂದ ಕಾಂಗ್ರೆಸ್ ಪಕ್ಷ ರಾಜಕೀಯ ಬೆಂಬಲ ಕೋರಿರುವುದು ರಾಜ್ಯದ ಜನತೆಗೆ ತೀವ್ರ ಆಘಾತ ನೀಡಿದೆ. ಭಾರತೀಯ ಜನತಾ ಪಾರ್ಟಿಯು ಕಾಂಗ್ರೆಸ್ ಪಕ್ಷದ ರಾಷ್ಟ್ರ ವಿರೋಧಿ ಸಂಘಟನೆಗಳ ಜತೆಗಿನ ಸ್ವಾರ್ಥದ ರಾಜಕಾರಣದ ನಿಲುವನ್ನು ತೀವ್ರವಾಗಿ ಖಂಡಿಸುತ್ತದೆ."
"ಕಾಂಗ್ರೆಸ್ ಪಕ್ಷ ತನ್ನ ಸ್ವಾರ್ಥದ ರಾಜಕಾರಣಕ್ಕಾಗಿ ಕರ್ನಾಟಕವನ್ನು ತಮ್ಮ ಪ್ರಯೋಗಾಲಯವನ್ನಾಗಿ ಮಾಡಿರುವುದು ಸರ್ವಥಾ ಖಂಡನೀಯ, ಸನ್ಮಾನ ಸಿದ್ಧರಾಮಯ್ಯರವರ ಸರಕಾರದ ಅವಧಿಯಲ್ಲಿ ನಡೆದ ರುದ್ರೇಶ್, ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ದೀಪಕ್ ರಾವ್ ಸೇರಿದಂತೆ 23 ಹಿಂದೂ ಕಾರ್ಯಕರ್ತರ ಹತ್ಯೆ ಕಾಂಗ್ರೆಸ್ ಪಕ್ಷದ ಮಿತಿಮೀರಿದ ತುಷ್ಟೀಕರಣದ ರಾಜಕಾರಣಕ್ಕೊಂದು ಜ್ವಲಂತ ಉದಾಹರಣೆ ಕರ್ನಾಟಕದ ಜನತೆ ಕಾಂಗ್ರೆಸ್‌ನ ಈ ಅಪಾಯಕಾರಿ ಪ್ರಯೋಗಗಳ ಬಲಿಪಶುಗಳಾಗಿರುವುದು ದೊಡ್ಡ ದುರಂತ" ರಾಜ್ಯ ವಕ್ತಾರರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾ ವಕ್ತಾರರಾದ ಜಗದೀಶ್ ಶೇಣವ, ಪ್ರಮುಖರಾದ ಸಂಜಯ್ ಪ್ರಭು ಮತ್ತಿತರರು ಉಪಸ್ಥಿತರಿದ್ದರು.