ಪ್ರತಿಷ್ಠಿತ ಕರ್ಣಾಟಕ ಬ್ಯಾಂಕ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ  ಮಹಾಬಲೇಶ್ವರ ಎಂ.ಎಸ್. ಅವರ ಎರಡನೆಯ ಅವಧಿ 14.04.2023 ರಂದು ಮುಕ್ತಾಯಗೊಂಡ ಪ್ರಯುಕ್ತ ಶ್ರೀಯುತರನ್ನು ಬ್ಯಾಂಕಿನಿಂದ ಗೌರವದಿಂದ ಬೀಳ್ಕೊಡಲಾಯಿತು.

ಮಹಾಬಲೇಶ್ವರ ಎಂ.ಎಸ್. ಅವರ ನೇತೃತ್ವದಲ್ಲಿ ಬ್ಯಾಂಕಿನ ಬಹುನಿರೀಕ್ಷಿತ ಮತ್ತು ಮಹತ್ವಾಕಾಂಕ್ಷಿ ಯೋಜನೆಯಾದ ‘ಕೆಬಿಎಲ್-ವಿಕಾಸ್' ಎಂಬ ಬ್ಯಾಂಕಿನ ಸಮಗ್ರ ಪರಿವರ್ತನಾ ಅಭಿಯಾನವನ್ನು ಯಶಸ್ವಿಯಾಗಿ ಬ್ಯಾಂಕ್ ಅಳವಡಿಸಿಕೊಂಡಿತು. ಈ ಮಹಾಪರಿವರ್ತನಾ ಅಭಿಯಾನವು ಕರ್ಣಾಟಕ ಬ್ಯಾಂಕನ್ನು ಭವಿಷ್ಯದ ‘ಪ್ರಮುಖ, ಸದೃಢ, ಚೈತನ್ಯಶಾಲಿ ಮತ್ತು ತಾಂತ್ರಿಕ ಸಂಪನ್ನತೆಯಿಂದೊಡಗೂಡಿದ ಡಿಜಿಟಲ್ ಬ್ಯಾಂಕ್' ಆಗಿ ರೂಪಿಸಲು ಸಹಕಾರಿಯಾಗಿದೆ. ಇವರ ನಾಯಕತ್ವದಲ್ಲಿ ಬ್ಯಾಂಕ್ 1,48,000/- ಕೋಟಿ ರೂಪಾಯಿಗಳಿಗೂ ಮಿಕ್ಕಿದ ವಾರ್ಷಿಕ ವಹಿವಾಟನ್ನು ದಾಟಿ 130 ಲಕ್ಷ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಯನ್ನು ಸಲ್ಲಿಸಿದ್ದು ಮಾತ್ರವಲ್ಲದೆ, ದಾಖಲೆ ಸಂಖ್ಯೆಯ ಪ್ರತಿಷ್ಠಿತ ಪ್ರಶಸ್ತಿಗಳನ್ನೂ ಬ್ಯಾಂಕು ಗಳಿಸಿದೆ. ಸಾಮಾಜಿಕ ಕಳಕಳಿಯ ಅನೇಕ ಚಟುವಟಿಕೆಗಳಲ್ಲಿ ಮುನ್ನಡೆದ ಬ್ಯಾಂಕ್ ತನ್ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆಯ (ಅSಖ) ಅಂಗವಾಗಿ ಅನೇಕ ಸಮಾಜಮುಖಿ ಕಾರ್ಯಗಳಿಗೆ ಧನಸಹಾಯವನ್ನೂ ಕೊಟ್ಟು ಈ ನೆಲೆಯಲ್ಲಿ ನವಭಾಷ್ಯವನ್ನೂ ಬರೆದಿದೆ. ಮಹಾಬಲೇಶ್ವರ ಎಂ.ಎಸ್. ಅವರು ಕರ್ಣಾಟಕ ಬ್ಯಾಂಕಿನಲ್ಲಿ ತನ್ನ ಮೂವತ್ತೊಂಬತ್ತು ವರುಷಗಳ ಸುದೀರ್ಘ ಅನುಭವದಲ್ಲಿ ಬ್ಯಾಂಕಿನ ಎಲ್ಲಾ ಕ್ಷೇತ್ರಗಳಲ್ಲಿಯೂ ಪರಿಣತಿಯನ್ನು ಸಾಧಿಸಿ ‘ಕರ್ಣಾಟಕ ಬ್ಯಾಂಕ್‍ನ ಮಹಾಪುರುಷ' ಎಂದೇ ಗುರುತಿಸಿಕೊಂಡಿದ್ದಾರೆ.

ತಮ್ಮ ವಿದಾಯ ಭಾಷಣದಲ್ಲಿ ಬ್ಯಾಂಕಿನ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ  ಮಹಾಬಲೇಶ್ವರ ಎಂ.ಎಸ್. ಅವರು, "ಕರ್ಣಾಟಕ ಬ್ಯಾಂಕ್ ಕೇವಲ ಒಂದು ವ್ಯವಹಾರ ಕೇಂದ್ರಿತ ಬ್ಯಾಂಕ್ ಆಗಿರದೆ, ಅದು ‘ಸಮಾಜಮುಖಿ ಆರ್ಥಿಕ ಆಂದೋಲನ'ವಾಗಿದ್ದು ಕೋಟ್ಯಂತರ ಜನರ ಜೀವನವನ್ನು ರೂಪಿಸಿ ಬೆಳಗಿಸಿದ ಸಂಸ್ಥೆಯಾಗಿದೆಯೆಂಬ ಹೆಮ್ಮೆ ನನಗಿದೆ. ನೂರು ವರುಷದ ಐತಿಹಾಸಿದ ಮಹಾಪರಿಕ್ರಮಗಾಥೆಯಲ್ಲಿ, ಬ್ಯಾಂಕ್ ಹೊಸ ಸಾಧನೆಯ ಮೈಲುಗಲ್ಲುಗಳನ್ನು ಮುಟ್ಟುತ್ತಾ, ಶ್ರೇಷ್ಠ ನಿರ್ವಹಣಾ ಸಂಸ್ಕ್ರತಿಯನ್ನೇ  ಕಟ್ಟಿದೆ ಎಂದು ಹೇಳಲು ಸಂತೋಷವಾಗುತ್ತದೆ. ಬ್ಯಾಂಕಿನ ಕಳೆದ ನಾಲ್ಕೈದು ತ್ರೈಮಾಸಿಕಗಳ ನಿರ್ವಹಣೆಯನ್ನು ಮತ್ತು ಬ್ಯಾಂಕಿನ ಮೂಲಭೂತ ನಿರ್ವಹಣಾಸೂಚಕಗಳಾದ ಪಿಸಿಆರ್, ಸಿ ಆರ್‍ ಎ ಆರ್, ನಿಮ್, ಆರ್‍ಓಎ, ಆರ್‍ ಓಇ ಮತ್ತು ಕಾಸಾ(ಅಂSಂ) ಗಳನ್ನು ಕಂಡಾಗ ಬ್ಯಾಂಕಿನ ನವಪರಿವರ್ತನಾಮುಖದ ಸದೃಢತೆಯ ಅರಿವಾಗುತ್ತದೆ. ಈ ಎಲ್ಲ ಸೂಚಕಾಂಶಗಳು ಬ್ಯಾಂಕಿನ ನೂರು ವರುಷದ ಪಯಣಗಳಲ್ಲೇ ಅತ್ಯಂತ ಗರಿಷ್ಟ ನೆಲೆಯನ್ನು ತಲುಪಿದವುಗಳು. ನನ್ನ ಕನಸೆಂದರೆ, ನಮ್ಮ ಬ್ಯಾಂಕ್ ತನ್ನ ಶ್ರೇಷ್ಟ ನಿರ್ವಹಣೆಯಿಂದ ಬ್ಯಾಂಕಿಂಗ್ ವಲಯದಲ್ಲೇ ಮಾದರಿಯಾಗಬೇಕೆನ್ನುವುದಾಗಿದೆ. ನಮ್ಮಲ್ಲಿಯ ‘ಕೌಶಲ್ಯವೃದ್ಧಿ' ಮತ್ತು ‘ಬದಲಾವಣೆಗೆ ಸ್ಪಂದನೆ' ಇವೇ ಈಗಿನ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಯಶಸ್ಸಿನ ಪರಮಮಂತ್ರವಾಗಿದೆ. ನಮ್ಮ ನೂರು ವರುಷಗಳ ಯಶೋಸಾಧನೆಯ ನೆನಪಲ್ಲೇ ನಾವಿರದೆ, ಸದಾ ಜಾಗ್ರತವಾಗಿದ್ದು ಕಾರ್ಯತತ್ಪರರಾಗಿರಬೇಕು. ಅದಕ್ಕಾಗಿ ನಾವು ‘ಆಡಳಿತ' (ಗವರ್ನೆನ್ಸ್), ‘ಅನುಪಾಲನೆ' (ಕಂಪ್ಲಯನ್ಸ್) ಹಾಗೆಯೇ ‘ಸಂಭಾವ್ಯನಷ್ಟ ಮತ್ತು ಅದರ ನಿರ್ವಹಣೆ' (ರಿಸ್ಕ್ ಮ್ಯಾನೇಜ್‍ಮೆಂಟ್) ಇವುಗಳ ಮೇಲೆ ಹೆಚ್ಚು ಗಮನಹರಿಸಬೇಕು. ಇವು ಬ್ಯಾಂಕಿನ ಸದೃಢ ನಿರ್ವಹಣೆ ಮತ್ತು ಬೆಳವಣಿಗೆಗೆ ಪ್ರಮುಖ ಪೂರಕ ಅಂಶಗಳಾಗಿವೆ. ನನಗೆ ಈ ಅವಧಿಯಲ್ಲಿ ಸಂಪೂರ್ಣ ಸಹಕಾರವಿತ್ತ ಎಲ್ಲಾ ಸಿಬ್ಬಂದಿಗಳಿಗೂ, ಬೆಂಬಲ ಮತ್ತು ಮಾರ್ಗದರ್ಶನ ಕೊಟ್ಟ ಬ್ಯಾಂಕಿನ ನಿರ್ದೇಶಕ ಮಂಡಳಿಗೂ, ಅತ್ಯಮೂಲ್ಯ ಸಲಹೆ ಸೂಚನೆಗಳನ್ನು ಕೊಟ್ಟ ಆರ್‍ಬಿಐಗೂ ಮತ್ತು ನನ್ನ ಮೇಲೆ ವಿಶ್ವಾಸವಿರಿಸಿ ಪ್ರೋತ್ಸಾಹಿಸಿದ ಬ್ಯಾಂಕಿನ ಗೌರವಾನ್ವಿತ ಶೇರುದಾರರು ಹಾಗು ಗ್ರಾಹಕರಿಗೂ ನನ್ನ ಹೃದಯಾಳದ ಕೃತಜ್ಞತೆಗಳು." ಎಂದು ನುಡಿದರು.

ಬ್ಯಾಂಕಿನ ಕಾರ್ಯನಿರ್ವಾಹಕ ನಿರ್ದೇಶಕರಾದ  ಶೇಖರ್ ರಾವ್ ಅವರು ಬ್ಯಾಂಕಿನ ಮಧ್ಯಂತರ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯಕಾರ್ಯನಿರ್ವಾಹಣಾಧಿಕಾರಿಗಳಾಗಿ 15.04.2023 ರಂದು ಜವಾಬ್ದಾರಿಯನ್ನು ವಹಿಸಿಕೊಂಡು ಮಾತನಾಡಿ “ಅನುಭವಿ ಹಾಗೂ ಸಮರ್ಥ ನಾಯಕರಾಗಿದ್ದ  ಮಹಾಬಲೇಶ್ವರ ಎಂ.ಎಸ್. ಅವರ ಸ್ಥಾನದಲ್ಲಿ ಬ್ಯಾಂಕನ್ನು ಸಮರ್ಥವಾಗಿ ಮುನ್ನಡೆಸುವುದು ನನ್ನ ಮುಂದಿರುವ ದೊಡ್ಡ ಸವಾಲು. ಕಾಲದ ನಿಕಷಕ್ಕೆ ತನ್ನನ್ನು ಒಡ್ಡಿಕೊಂಡು ಸದೃಢವಾಗಿ ಬೆಳೆದು ಬಂದ ಈ ಸಂಸ್ಥೆಯ ಎಲ್ಲಾ ಮಹಾನ್ ನಾಯಕರು ನಡೆದ ಹಾದಿಯಲ್ಲೇ ಸಾಗಿ ಈ ಬ್ಯಾಂಕನ್ನು ಇನ್ನಷ್ಟು ಉತ್ತುಂಗಕ್ಕೆ ಏರಿಸುವುದು ನನ್ನ ಕರ್ತವ್ಯವೆಂದು ಭಾವಿಸಿದ್ದೇನೆ. ಅದಕ್ಕಾಗಿ ನಾನು ಸರ್ವ ಪ್ರಯತ್ನವನ್ನೂ ಮಾಡುತ್ತೇನೆ. ಕರ್ಣಾಟಕ ಬ್ಯಾಂಕ್‍ನ ಎರಡನೆಯ ಶತಮಾನದ ಪರಿಕ್ರಮಕ್ಕೆ ಅತ್ಯಂತ ಬಲಿಷ್ಠ ಬುನಾದಿಯನ್ನು ನಿರ್ಮಿಸಿದ ಹಿರಿಯ ನಾಯಕರ ಕನಸನ್ನು ನನಸಾಗಿಸುವ ಹೊಣೆ ನಮ್ಮ ಮೇಲಿದ್ದು, ಅದನ್ನು ಸಾಕಾರಗೊಳಿಸುವಲ್ಲಿ ನಿರ್ದೇಶಕ ಮಂಡಳಿಯ ಮಾರ್ಗದರ್ಶನ, ಸಿಬ್ಬಂದಿಗಳ ಸಹಕಾರ, ಗ್ರಾಹಕರ ಹಾಗೂ ಶೇರುದಾರರ ಪ್ರೋತ್ಸಾಹವನ್ನು ಕೋರುತ್ತೇನೆ. ಕಳೆದ ಕೆಲವು ವರ್ಷಗಳಿಂದ ಸತತವಾಗಿ ದಾಖಲೆಯ ಪ್ರಗತಿಯತ್ತ ಮುಖ ಮಾಡಿದ ಬ್ಯಾಂಕಿಗೆ, ಈ ವಿತ್ತೀಯ ವರ್ಷದ ಪ್ರಥಮ ತ್ರೈಮಾಸಿಕದಿಂದಲೇ ಗುಣಮಟ್ಟದ ಬೆಳವಣಿಗೆಯ ಯಶೋಮನ್ವಂತರದ ದ್ವಾರವನ್ನು ತೆರೆಯಲು ಸಜ್ಜಾಗಿದ್ದೇವೆ." ಎಂದು ನುಡಿದರು.