ಸಚಿತ್ರ ವರದಿ: ರಾಯಿ ರಾಜಕುಮಾರ್ ಮೂಡುಬಿದಿರೆ
ಮೂಡಬಿದ್ರೆ: ಇಲ್ಲಿಗೆ ಸಮೀಪದ ನಾಗರಕಟ್ಟೆ ನಾಗಬನದ ಸ್ಥಳದ ಸಮೀಪದ 4-5 ಮನೆಗಳಿಗೆ ತೋಡಿನಲ್ಲಿ ಉಕ್ಕಿ ಬಂದ ಮಳೆ ನೀರಿನಿಂದಾಗಿ ಕಳೆದ ಎರಡು ದಿನಗಳಿಂದ ನೀರು ಅವರಿಸಿಕೊಂಡಿದೆ. ಮೂಡುಬಿದಿರೆ ಪುರಸಭೆಯವರು ತೋಡಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಯ ಬದಿಗಳನ್ನು ಸಮರ್ಪಕವಾಗಿ ನಿರ್ಮಿಸದ ಕಾರಣದಿಂದಾಗಿ ಈ ರೀತಿಯ ತೊಂದರೆ ಉಂಟಾಗಿದೆ. ಸೇತುವೆ ಕಟ್ಟುವುದಕ್ಕಾಗಿ ಸ್ವತಹ ತಮ್ಮದೇ ಜಾಗದ ಸ್ಥಳವನ್ನು ಬಿಟ್ಟುಕೊಟ್ಟಿರುವಂತಹ ಮೋಹನ್ ಕೋಟ್ಯಾನ್ ರವರು ಕೂಡ ತಮ್ಮ ಮನೆಗೆ ಹೋಗಲು ಸಾಧ್ಯವಾಗದಂತಹ ಪರಿಸ್ಥಿತಿಗೆ ಈಡಾಗಿದ್ದಾರೆ.


ಮೋಹನ್ ಕೋಟ್ಯಾನ್ ರವರ ಗದ್ದೆಯು ಕೂಡ ಮಳೆಯ ನೀರಿನಿಂದಾಗಿ ತುಂಬಿಕೊಂಡಿದ್ದು ಕೃಷಿ ಬೆಳೆಯು ಕೂಡ ನಾಶವಾಗಿರುತ್ತದೆ. ಪ್ರಸ್ತುತ ಮನೆಗೆ ಹೋಗುವ ದಾರಿಯೂ ಕೂಡ ಮಳೆಯ ನೀರು ಅವರಿಸಿಕೊಂಡಿದೆ. ಕೋಟ್ಯಾನ್ ರವರು ಬಿಟ್ಟುಕೊಟ್ಟ ಸ್ಥಳದ ತೋಡಿನ ಬದಿಯಲ್ಲಿ ಬಹಳ ದೊಡ್ಡ ಮರ ಒಂದು ಇದ್ದು ಪ್ರಸ್ತುತ ಅದರ ಬುಡದ ಮಣ್ಣೆಲ್ಲ ಕೊಚ್ಚಿ ಹೋಗುತ್ತಿದ್ದು ಬೀಳುವ ಸಂಭವನೀಯತೆ ಕಂಡುಬರುತ್ತಿದೆ. ಅದರ ಸಮೀಪದಲ್ಲಿ ವಿದ್ಯುತ್ ಕಂಬವು ಕೂಡ ಇದ್ದು ಮರ ಒಂದು ವೇಳೆ ಆ ಕಡೆಗೆ ವಾಲಿಯಲ್ಲಿ ಆ ಪ್ರದೇಶದ ಎಲ್ಲ ವಿದ್ಯುತ್ ಲೈನುಗಳಿಗೂ ಕೂಡ ತೊಂದರೆಯಾಗುವಂತಹ ಸಾಧ್ಯತೆ ಇರುತ್ತದೆ. ತಹಶೀಲ್ದಾರರು ಹಾಗೂ ಪುರಸಭಾ ಅಧಿಕಾರಿಗಳು ಆದಷ್ಟು ಬೇಗ ಈ ಬಗ್ಗೆ ಕ್ರಮ ಕೈಗೊಂಡು ಪರಿಸ್ಥಿತಿಯನ್ನು ನಿಭಾಯಿಸಬೇಕೆಂದು ಮೋಹನ್ ಕೋಟ್ಯಾನ್ ರವರು ವಿನಂತಿಸಿದ್ದಾರೆ. ಈ ಬಗ್ಗೆ ಈಗಾಗಲೇ ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸಿದರು ಕ್ರಮ ಕೈಗೊಳ್ಳಲಿಲ್ಲ ಎಂದು ತಿಳಿಸಿದ್ದಾರೆ.
ಮಳೆ ಪ್ರಾರಂಭ ಆಗುವುದಕ್ಕೆ ಮೊದಲೇ ತೋಡಿನಲ್ಲಿದ್ದ ಮಣ್ಣು ಇತ್ಯಾದಿಗಳನ್ನು ನಿವಾರಿಸಿದ್ದಲ್ಲಿ ಇಂತಹ ಪರಿಸ್ಥಿತಿ ಉದ್ಭವವಾಗುತ್ತಿರಲಿಲ್ಲ ಎಂದು ಅವರು ನೆನಪಿಸಿದ್ದಾರೆ.