ವರದಿ ರಾಯಿ ರಾಜಕುಮಾರ ಮೂಡುಬಿದಿರೆ
ಮೂಡುಬಿದಿರೆ ತಾಲೂಕಿನ ಪುತ್ತಿಗೆ ಗ್ರಾಮದ ಸೋಮನಾಥೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವದ ಹೋಮ-ಹವನಾದಿ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿದೆ. ಮಾರ್ಚ್ 4 ಮಂಗಳವಾರ ರುದ್ರಯಾಗ, ನಾಗ ಕಲಶಾಭಿಷೇಕ, ಆಶ್ಲೇಷಾ ಬಲಿ, ಶ್ರೀಚಕ್ರ ಪೂಜೆ, ನರಸಿಂಹ-ಗಣಪತಿ ದೇವರುಗಳ ಕಲಶಾಧಿವಾಸ ನಡೆದವು. ದೇವಾಲಯದ ಅನುವಂಶಿಕ ಆಡಳಿತ ಮೊಕ್ತೇಸರ ಕುಲದೀಪ್ ಎಂ ಎಲ್ಲಾ ಕಾರ್ಯಗಳಲ್ಲಿ ಹಾಜರಿದ್ದು ಸಾಂಗಗೊಳಿಸಿದರು.
ಊರಿನ ಶಕ್ತಿ ಕೇಂದ್ರಗಳಾದ ದೇವಸ್ಥಾನ, ದೈವಸ್ಥಾನ ಗಳನ್ನು ನಂಬುವದರಿಂದ ಕರಾವಳಿಯ ಮಂದಿಗೆ ಯಾವುದೇ ಕಾಲದಲ್ಲೂ ಹೆಚ್ಚಿನ ತೊಂದರೆ ಗಳಾಗಲಿಲ್ಲ. ಇದಕ್ಕೆ ಕಾರಣ ಇಲ್ಲಿನ ಜನರ ನಂಬಿಕೆ, ಶೃದ್ಧೆ. ದೇವ ಚಿತ್ತ, ಮನುಷ್ಯ ಚಿತ್ತ ಸೇರಿದರೆ ಮಾತ್ರ ಉತ್ತಮ ಕೆಲಸ ಮೂಡಿಬರಲು ಸಾಧ್ಯ. ಅದು ಇಲ್ಲಿ ಸಾಕಾರಗೊಂಡಿದೆ ಎಂದು ಕುಕ್ಕೆ ಸುಬ್ರಮಣ್ಯ ಮಠದ ವಿದ್ಯಾ ಪ್ರಸನ್ನ ಸ್ವಾಮೀಜಿ ದೇವಾಲಯದ ಕಾಮಗಾರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಕಟೀಲು ಕ್ಷೇತ್ರದ ವೇ.ಮೂ.ಹರಿನಾರಾಯಣ ಅಸ್ರಣ್ಣ ಮಾತನಾಡಿ ಮುಕ್ತಿ ಪಥಕ್ಕೆ ದಾರಿ ತೋರುವ ರುದ್ರದೇವ ಸೋಮನಾಥ, ಪಾರ್ವತಿಯ ಶಕ್ತಿ ಇಲ್ಲದೆ ಒಗ್ಗಟ್ಟು ಅಸಾಧ್ಯ ಎಂದು ತೋರಿಸಿಕೊಟ್ಟಿದ್ದಾನೆ ಎಂದು ಉದ್ಧರಿಸಿದರು.
ಸಭೆಯನ್ನು ಉದ್ದೇಶಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಎಂ ಸಿ ಎಸ್ ನ ಬಾಹುಬಲಿ ಪ್ರಸಾದ್, ಮುನಿರಾಜ ರೆಂಜಾಳ ಮಾತನಾಡಿದರು. ವೇದಿಕೆಯಲ್ಲಿ ಯೋಜನಾ ಪ್ರಾಧಿಕಾರದ ಹರ್ಷವರ್ಧನ್ ಪಡಿವಾಳ್, ನಂದಕುಮಾರ್ ಕುಡ್ವ, ಪುರಸಭಾ ಮುಖ್ಯಾಧಿಕಾರಿ ಇಂದು, ಬೊಕ್ಕಸ ಚಂದ್ರಶೇಖರ ರಾವ್, ಕುಂಗೂರು ಗೋಪಾಲ ಶೆಟ್ಟಿ, ಪುತ್ತಿಗೆ ಗುತ್ತು ಕಡಂದಲೆ ಪರಾರಿ ಸಂತೋಷ್ ಪೂಜಾರಿ, ಬಿಮಲ್ ಕನ್ಸ್ಟ್ರಕ್ಷನ್ ಪ್ರವೀಣ್ ಕುಮಾರ್, ನಡಿಗುಡ್ಡೆ ಯೋಗೀಶ್ ಶೆಟ್ಟಿ ಹಾಜರಿದ್ದರು.