ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರೀ ಅವರ ಜಯಂತಿಯನ್ನು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು. ಡಾ. ಶ್ರೀರಾಮ ಮೊಗೆರಾಯ ಆಯುರ್ವೇದಿಕ್ ವೈದ್ಯರು ಮತ್ತು ಸಮಾಜ ಸೇವಕರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಗಾಂಧೀಜಿಯವರು ಸರಳ ವ್ಯಕ್ತಿತ್ವದೊಂದಿಗೆ ಅಹಿಂಸೆ, ಸತ್ಯ ಹಾಗೂ ಶಾಂತಿಯುತ ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯಾ ತಂದು ಕೊಟ್ಟರು. ಅವರ ಈ ಗುಣಗಳನ್ನು ಇಂದಿನ ಮಕ್ಕಳು ತಮ್ಮಲ್ಲಿ ಅಳವಡಿಸಿಕೊಳ್ಳುದರ ಜೊತೆಗೆ ದೇಶದ ಸೈನಿಕರಾಗಿ, ಸ್ವಚ್ಚತಾ ಸೇನಾನಿಗಳಾಗಿ ಕರ್ತವ್ಯ ನಿರ್ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು”. ಕಾರ್ಯಕ್ರಮದ ಇನ್ನೋರ್ವ ಅತಿಥಿಯಾಗಿದ್ದ ಡಾ. ಉದಯ ಕುಮಾರ್ ಇರ್ವತ್ತೂರುರವರು ಮಾತನಾಡುತ್ತಾ, “ಗಾಂಧೀಜಿಯವರು ವಿದ್ಯಾರ್ಥಿಯಾಗಿದ್ದಾಗಲೇ ಸತ್ಯ, ಧರ್ಮ, ನ್ಯಾಯ, ನಿಷ್ಠೆಯ ಗುಣವನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದು ಸ್ವಷ್ಟ ಮನೋಭಾವ ಹಾಗೂ ಇಚ್ಚಾಶಕ್ತಿಯನ್ನು ಹೊಂದಿದ್ದರು. ಇಂತಹ ವ್ಯಕ್ತಿತ್ವವನ್ನು ಇಂದಿನ ವಿದ್ಯಾರ್ಥಿಗಳು ತಮ್ಮಲ್ಲಿ ಅಳವಡಿಸಿಕೊಂಡಾಗ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ ನ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಜಯಂತಿಗಳನ್ನು ಆಚರಿಸುವ ಉದ್ದೇಶ ಮಹಾನ್ ವ್ಯಕ್ತಿಗಳ ಶ್ರೇಷ್ಠ ಗುಣಗಳು ಹಾಗೂ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದಾಗಿದೆ. ಗಾಂಧೀಜಿ ಅವರ ಆದರ್ಶಗಳನ್ನು ಇಡೀ ಜಗತ್ತೇ ತನ್ನಲ್ಲಿ ಅಳವಡಿಸಿಕೊಂಡಿದೆ. ಸ್ವಚ್ಚ ಪರಿಸರದ ಜೊತೆಗೆ ಸ್ವಚ್ಚ ಮನಸ್ಸು ಕೂಡಾ ನಮ್ಮದಾಗಬೇಕು. ಸ್ವಚ್ಚ ಮನಸ್ಸಿನಿಂದ ಸ್ವಚ್ಚ ದೇಶ ನಿರ್ಮಾಣವಾಗುತ್ತದೆ” ಎಂದು ಹೇಳಿದರು.

ಅತಿಥಿಗಳು ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರು ಶಾಸ್ತ್ರೀ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಸರ್ವಧರ್ಮ ಪ್ರಾರ್ಥನೆ ನಡೆಯಿತು. ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ರುಡಾಲ್ಫ್ ಕಿಶೋರ್ ಲೋಬೊರವರು ಪ್ರತಿಜ್ಞಾ ವಿಧಿಯನ್ನು ನಡೆಸಿಕೊಟ್ಟರು. ಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮೀ ನಾರಾಯಣ ಕಾಮತ್, ಉಪಪ್ರಾಚಾರ್ಯರಾದ ಡಾ. ಪ್ರಕಾಶ್ ಭಟ್, ಸಂಸ್ಥೆಯ ಆಡಳಿತಾಧಿಕಾರಿ ಕಿರಣ್ ಕ್ರಾಸ್ತರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಸಹಾಯಕ ಶಿಕ್ಷಕಿಯಾದ ಆಲಿಸ್ ಲೋಬೋ ಸ್ವಾಗತಿಸಿ, ಪ್ರೌಢ ಶಾಲಾ ಸಹಾಯಕ ಶಿಕ್ಷಕಿಯಾದ ನೀತಿ ಆಚಾರ್ಯರವರು ಕಾರ್ಯಕ್ರಮ ನಿರ್ವಹಿಸಿದರು.