ಉಡುಪಿ, ಡಿಸೆಂಬರ್ 27: ವಿವಿಧ ಸರಕಾರಿ ಯೋಜನೆಗಳ ಸಾಲ ಪಡೆಯಲು ಫಲಾನುಭವಿಗಳು ಬ್ಯಾಂಕ್‍ಗಳಿಗೆ ಸಲ್ಲಿಸುವ ಸಾಲದ ಅರ್ಜಿಗಳನ್ನು ಆದ್ಯತೆಯ ಮೇಲೆ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಮಂಜೂರು ಮಾಡುವಂತೆ ಜಿಲ್ಲೆಯ ಎಲ್ಲಾ ಬ್ಯಾಂಕ್‍ಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಸೂಚನೆ ನೀಡಿದರು.
ಅವರು ಇಂದು ರಜತಾದ್ರಿಯ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಾಲ ಮತ್ತು ಠೇವಣಿ ಪ್ರಮಾಣ ರಾಜ್ಯಕ್ಕೆ ಹೋಲಿಸಿದ್ದಲ್ಲಿ ಕಡಿಮೆಇದ್ದು, ಇದನ್ನು ಸರಿದೂಗಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾಲ ವಿತರಿಸುವ ಅಗತ್ಯವಿದ್ದು, ಸರ್ಕಾರದ ವಿವಿಧ ಯೋಜನೆಗಳಲ್ಲಿ ಸಾಲ ಪಡೆಯಲು ವಿವಿಧ ಇಲಾಖೆಗಳ ಮೂಲಕ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶೀಘ್ರದಲ್ಲಿ ಸಾಲ ವಿತರಿಸುವ ಮೂಲಕ ಈ ಪ್ರಮಾಣವನ್ನು ಸರಿದೂಗಿಸುವ ಜೊತೆಗೆ ಜಿಲ್ಲೆಯಲ್ಲಿ ಸರಕಾರಿ ಕಾರ್ಯಕ್ರಮಗಳ ಯಶಸ್ವಿ ಅನುಷ್ಠಾನ ಹಾಗೂ ಸಾರ್ವಜನಿಕರಆರ್ಥಿಕ ಮಟ್ಟವನ್ನುಉತ್ತಮ ಪಡಿಸಲು ಸಾಧ್ಯವಾಗಲಿದೆ ಎಂದರು.
ಕೃಷಿ ಮತ್ತು ತೋಟಗಾರಿಕಾ ವಲಯದಲ್ಲಿ ಕಿರು ಸಂಸ್ಕರಣಾ ಉದ್ಯಮ ಸ್ಥಾಪನೆಗೆ ಸಾಲ ಕೋರಿ ಸಲ್ಲಿಕೆಯಾಗುವ ಫಲಾನುಭವಿಗಳ ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ತಿರಸ್ಕರಿಸುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಅವರು, ತಾಂತ್ರಿಕ ಕಾರಣಗಳ ಬಗ್ಗೆ ಬ್ಯಾಂಕ್ ಅಧಿಕಾರಿಗಳು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳುವುದರ ಮೂಲಕ ರೈತರಿಗೆ ಸಾಲ ವಿತರಿಸುವಂತೆ ಹಾಗೂ ವಿದ್ಯಾಭ್ಯಾಸ ಸಾಲವನ್ನು ಹೆಚ್ಚಿನ ಸಂಖ್ಯೆಯಲ್ಲಿ ನೀಡಲು ಎಲ್ಲಾ ಬ್ಯಾಂಕ್‍ಗಳು ಅಗತ್ಯಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಗ್ರಾಮ ಪಂಚಾಯತ್‍ಗಳಲ್ಲಿ ಸ್ವ-ಸಹಾಯ ಸಂಘಗಳ ಮೂಲಕ ವಿವೇಕಾನಂದ ಸಂಘಗಳನ್ನು ರಚಿಸಲು ಸರ್ಕಾರದ ಆದೇಶವಿದ್ದು, ಕೆಲ ಬ್ಯಾಂಕ್‍ಗಳಲ್ಲಿ ಕೆ.ವೈ.ಸಿ ಗೆ ದಾಖಲೆಗಳನ್ನು ನೀಡುವಂತೆ ಸ್ವ-ಸಹಾಯ ಸಂಘದ ಸದಸ್ಯರಿಗೆ ಸೂಚಿಸುತ್ತಿದ್ದು, ಇದಕ್ಕಾಗಿ ದಾಖಲೆಗಳನ್ನು ಪಡೆಯುವುದು ಅಗತ್ಯವಿಲ್ಲವೆಂದು ಈಗಾಗಲೇ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಹಿರಿಯ ಅಧಿಕಾರಿಗಳು ಈ ಬಗ್ಗೆ ಹಾಗೂ ಸರ್ಕಾರದಿಂದ ಬರುವ ಸುತ್ತೋಲೆಗಳನ್ನು ಪಾಲಿಸುವ ಕುರಿತು ತಮ್ಮ ಬ್ಯಾಂಕ್‍ಗಳ ಎಲ್ಲಾ ಶಾಖೆಗಳಿಗೆ ಸೂಕ್ತ ನಿರ್ದೇಶನ ನೀಡುವಂತೆ ತಿಳಿಸಿದರು.
ತ್ರೈಮಾಸಿಕ ವರದಿ ನೀಡಿದಕೆನರಾ ಬ್ಯಾಂಕಿನ ಪ್ರಾದೇಶಿಕ ಮ್ಯಾನೇಜರ್ ಸಂಜೀವಕುಮಾರ್, ಜಿಲ್ಲೆಯಲ್ಲಿ ಕಳೆದ ಸೆಪ್ಟಂಬರ್‍ಗೆ ಹೋಲಿಸಿದ್ದಲ್ಲಿ ಸಾಲ ನೀಡುವ ಪ್ರಮಾಣ ಶೇ.16.18 ಹೆಚ್ಚಳವಾಗಿದ್ದು, ಎಲ್ಲಾ ಬ್ಯಾಂಕ್‍ಗಳು ಮಾರ್ಚ್ ಅಂತ್ಯದ ವೇಳೆಗೆ ತಮ್ಮಗುರಿಯನ್ನು ಸಾಧಿಸುವಂತೆ ತಿಳಿಸಿದರು.
ಕೃಷಿ ಕ್ಷೇತ್ರಕ್ಕೆ 1439.32 ಕೋಟಿರೂ., ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯಕ್ಕೆ 859.94 ಕೋಟಿರೂ., ಶಿಕ್ಷಣ ಕ್ಷೇತ್ರಕ್ಕೆ 44.12 ಕೋಟಿರೂ., ವಸತಿ ಕ್ಷೇತ್ರಕ್ಕೆ 185.47 ಕೋಟಿರೂ. ಸಾಲ ವಿತರಿಸಲಾಗಿದ್ದು, ಜಿಲ್ಲೆಯಲ್ಲಿ ಸಾಲ ಮತ್ತುಠೇವಣಿಪ್ರಮಾಣ ಶೇ.47.93 ರಷ್ಟಿದ್ದು, ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯಲ್ಲಿ ಶೇ.190 ರಷ್ಟು ಸಾಧನೆ ಮಾಡಿದ್ದು, 173 ಸಾಲದಗುರಿಗೆ 330 ಸಾಲ ವಿತರಿಸಲಾಗಿದೆಎಂದರು.
ಇದೇ ಸಂದರ್ಭದಲ್ಲಿ ನಬಾರ್ಡ್ ವತಿಯಿಂದ ಪ್ರೊಟೆನ್ಷಿಯಲ್ ಲಿಂಕ್ಡ್ ಸಾಲ ಯೋಜನೆಯ ಪುಸ್ತಕವನ್ನು ಬಿಡುಗಡೆಗೊಳಿಸಿದ್ದು, ಆ ಪ್ರಕಾರ2023-24 ರಲ್ಲಿಒಟ್ಟು 10,689.27 ಕೋಟಿರೂ.ಸಾಲ ವಿತರಣೆಯಗುರಿ ಹೊಂದಲಾಗಿದೆ.
ಸಭೆಯಲ್ಲಿ ತರಬೇತಿ ನಿರತ ಐ.ಎ.ಎಸ್. ಅಧಿಕಾರಿಯತೀಶ್, ಆರ್.ಬಿ.ಐ. ನ ಮುರಳಿ ಮೋಹನ್ ಪಾಠಕ್, ನಬಾರ್ಡ್‍ನ ಡಿಡಿಎಂ ಸಂಗೀತಾಕಾರ್ಥಾ, ಯೂನಿಯನ್ ಬ್ಯಾಂಕ್‍ನ ಪ್ರಾದೇಶಿಕ ಮ್ಯಾನೇಜ ರ್ ಡಾ.ವಾಸಪ್ಪ, ಜಿಲ್ಲಾ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿಂಜಾರ ಹಾಗೂ ಜಿಲ್ಲೆಯ ವಿವಿಧ ಬ್ಯಾಂಕ್‍ಗಳ ಹಾಗೂ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.