ಉಜಿರೆ:  “ಕಷ್ಟಪಟ್ಟು ಬೆಟ್ಟದ ಮೇಲೆ ಹತ್ತಿ ಜಾರಿದರೆ ಮರಳಿ ಬೆಟ್ಟ ಏರಲು ತುಂಬಾ ಕಷ್ಟ ಪಡಬೇಕಾಗುತ್ತದೆ. ಮದ್ಯಪಾನಾದಿ ದುಶ್ಚಟಗಳು ಒಮ್ಮೆ ಚಟವಾಗಿ ಅಂಟಿಕೊಂಡರೆ ಜೀವನ ಪರ್ಯಂತ ನಮ್ಮನ್ನುಆವರಿಸುತ್ತವೆ. ಆದುದರಿಂದ ಅದನ್ನು ಒಮ್ಮೆ ಬಿಟ್ಟವರು ಮತ್ತೊಮ್ಮೆಕುಡಿಯುವ ಪ್ರಯತ್ನ ಮಾಡಬಾರದು. ವ್ಯಸನಕ್ಕೆ ಎಳೆಯುವ ಸ್ನೇಹಿತರನ್ನು ದೂರವಿರಿಸಬೇಕು. ನಾವು ನಮ್ಮಅಲಂಕಾರಕ್ಕೆ ಕನ್ನಡಿಯನ್ನು ನೋಡುವಂತೆ ನಮ್ಮದೋಷವನ್ನು ಸರಿಪಡಿಸಿಕೊಳ್ಳಲು ನಾವೇ ದೃಢ ಮನಸ್ಸನ್ನು ಹೊಂದಬೇಕಾದುದು ಬಹಳ ಮುಖ್ಯ. ವ್ಯಸನಕ್ಕೊಳಗಾಗಿ ಈ ಹಿಂದೆ ಮಾಡಿದ ಪಾಪದಿಂದ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಹೆಮ್ಮೆಯ ವಿಷಯ. ನಾವು ಕಷ್ಟಪಟ್ಟು ಮಾಡಿದ ದುಡಿಮೆ ವ್ಯಸನದಿಂದಾಗಿ ನಮ್ಮ ಕೈ ಸೇರದೆ ಮತ್ತೊಬ್ಬರ ಪಾಲಾಗುವುದರಿಂದ ವ್ಯಸನಿಯ ದುಡಿಮೆ ಅಕ್ಷಯ ಪಾತ್ರೆಯಲ್ಲಿರುವ ರಂಧ್ರದಂತೆ. ಆದುದರಿಂದ ಆತ್ಮ ವಿಶ್ವಾಸದ ಮೂಲಕ ಮರಳಿ ಕುಡಿತಕ್ಕೆ ಜಾರದಂತೆ ಎಚ್ಚರಿಕೆ ವಹಿಸಬೇಕು. ಮನುಷ್ಯನಾಗಿ ಹುಟ್ಟಿದ ಮೇಲೆ ಅವನ ಆಯುಷ್ಯವನ್ನು ಸದ್ವಿನಿಯೋಗವಾಗಿ ಕಳೆಯಬೇಕು”ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಡಾ| ಡಿ. ವೀರೇಂದ್ರ ಹೆಗ್ಗಡೆಯವರು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು. ಅವರು ಉಜಿರೆ, ಲಾೈಲದ ಶ್ರೀ ಕ್ಷೇತ್ರ ಧರ್ಮಸ್ಥಳ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ದಾಖಲಾಗಿ ಮದ್ಯವರ್ಜನದ ಚಿಕಿತ್ಸೆ ಪಡೆದ 191ನೇ ವಿಶೇಷ ಶಿಬಿರದ ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. 

ಶಿಬಿರದಲ್ಲಿ ರಾಜ್ಯ ವಿವಿಧ ಕಡೆಗಳಿಂದ 75 ಮಂದಿ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ| ಎಲ್.ಹೆಚ್. ಮಂಜುನಾಥ್‍ ರವರು ಕ್ರಿಸ್ಮಸ್ ಹಬ್ಬದ ವಿಶೇಷತೆಯನ್ನು ತಿಳಿಸುವುದರೊಂದಿಗೆ ವ್ಯಸನದಿಂದ ಹೊರಬರಲು ಪರಸ್ಪರಗೌರವ ಮನೋಭಾವನೆ, ದೇವರ ಮೇಲಿನ ಭಕ್ತಿ, ದುಡಿಮೆಯಲ್ಲಿ ಪ್ರಾಮಾಣಿಕತೆ, ಭಜನೆ, ಧ್ಯಾನ, ಸಂಯಮ, ಕುಟುಂಬದ ಪ್ರೀತಿ, ಕ್ಷಮಾಗುಣ, ಕುಟುಂಬದಲ್ಲಿ ಉತ್ತಮ ಸಂಬಂಧ, ಪರಸ್ಪರ ಆತ್ಮೀಯತೆ, ಸಕಾರಾತ್ಮಕ ಮನೋಭಾವನೆ ಬಹಳ ಮುಖ್ಯ. ಮದ್ಯವರ್ಜನೆಯಾದಾಗ ಈ ಅಂಶಗಳನ್ನು ಮೈಗೂಡಿಸಿಕೊಂಡು ಸುಖೀ ಜೀವನ ನಡೆಸಲು ಸಾಧ್ಯ’ ಎಂದರು.

ಶಿಬಿರದಲ್ಲಿ ಮನೋವೈದ್ಯಕೀಯ ಚಿಕಿತ್ಸೆ, ಯೋಗ ಮತ್ತು ಪ್ರಕೃತಿ ಚಿಕಿತ್ಸೆ, ಗುಂಪು ಮತ್ತು ವೈಯಕ್ತಿಕ ಸಲಹೆ, ಕೌಟುಂಬಿಕ ಸಲಹೆ, ಆತ್ಮವಲೋಕನ, ಭಜನೆ ಹಾಗೂ ವಿವಿಧ ತರಗತಿಗಳ ಮೂಲಕ ಪರಿವರ್ತನೆಗೆ ಅವಕಾಶ ನೀಡಲಾಗಿದೆ. ಕಾರ್ಯಕ್ರಮದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಆಗಮಿಸಿ ವಿಷಯಾಧಾರಿತ ಚರ್ಚೆಗಳನ್ನು ನಡೆಸಿರುತ್ತಾರೆ. ಯೋಜನೆಯ ಪ್ರಾದೇಶಿಕ ನಿರ್ದೇಶಕರಾದ ವಿವೇಕ್ ವಿ. ಪಾೈಸ್‍ರವರು ಶಿಬಿರದ ನೇತೃತ್ವ ವಹಿಸಿದ್ದು,  ಶಿಬಿರದ ವ್ಯವಸ್ಥೆಯಲ್ಲ ಮೋಹನ್, ಆಡಳಿತ ಯೋಜನಾಧಿಕಾರಿಗಳು, ಶಿಬಿರಾಧಿಕಾರಿಯಾಗಿ ವಿದ್ಯಾಧರ್, ಆರೋಗ್ಯ ಸಹಾಯಕಿಯಾಗಿ ನೇತ್ರಾವತಿ ಸಹಕರಿಸಿರುತ್ತಾರೆ. ಇದೇ ರೀತಿಯ ಮುಂದಿನ ವಿಶೇಷ ಶಿಬಿರವು ದಿನಾಂಕ: 02.01.2023 ರಿಂದ ಪ್ರಾರಂಭವಾಗಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.