ಮಂಗಳೂರು : ಬಾಡಿಗೆ ಹೆಚ್ಚಳ ಆಗ್ರಹಿಸಿ ಹಾಗೂ ಹೊರ ರಾಜ್ಯದ ಲಾರಿಗಳು ರಾಜ್ಯದೊಳಗೆ ನಡೆಸುತ್ತಿರುವ 2 ಪಾಯಿಂಟ್ ಟ್ರಿಪ್ ವಿರೋಧಿಸಿ ಸೆ.25 ಸೋಮವಾರದಿಂದ ದಕ್ಷಿಣ ಕನ್ನಡ ಟ್ರಕ್ ಓನರ್ಸ್ ಅಸೋಸಿಯೇಷನ್ (ರಿ.) ವತಿಯಿಂದ ಸ್ವಯಂಪ್ರೇರಿತ ಅನಿರ್ಧಿಷ್ಟಾವಧಿ ಕಲ್ಲಿದ್ದಲು ಲಾರಿ ಮುಷ್ಕರ ನಡೆಯಲಿದೆ.
"ರಾಜ್ಯದ ಬಹುತೇಕ ಜಿಲ್ಲೆಗಳಿಗೆ ಅದರಲ್ಲೂ ಕೊಪ್ಪಳ, ಬಳ್ಳಾರಿ ಜಿಲ್ಲೆಗಳ ಉಕ್ಕು ಕಾರ್ಖಾನೆಗಳಿಗೆ ನವಮಂಗಳೂರು ಬಂದರಿನಿಂದ ಕಲ್ಲಿದ್ದಲು ಸಾಗಾಟವಾಗುತ್ತಿದ್ದು, ಅತ್ಯಂತ ಕಡಿಮೆ ಬಾಡಿಗೆ ದರ ನೀಡಲಾಗುತ್ತಿದೆ. ಇದರಿಂದ ದಕ್ಷಿಣ ಕನ್ನಡ ಹಾಗೂ ಆಸುಪಾಸಿನ ಜಿಲ್ಲೆಗಳ ಸಾವಿರಾರು ಲಾರಿ ಮಾಲಕರು ಸಂಕಷ್ಟದಲ್ಲಿದ್ದು, ಫೈನಾನ್ಸ್ ಸಾಲದ ಕಂತುಗಳನ್ನು ಕಟ್ಟಲಾಗದೆ ಆರ್ಥಿಕ ಸಂಕಷ್ಟದಲ್ಲಿದ್ದಾರೆ" ಎಂದು ಸಂಘದ ಅಧ್ಯಕ್ಷ ಸುಶಾಂತ್ ಶೆಟ್ಟಿ ಹೇಳಿದ್ದಾರೆ.
"ನಮ್ಮ ರಾಜ್ಯದೊಳಗೆ ಒಂದು ಸ್ಥಳದಿಂದ ಲೋಡ್ ಮಾಡಿ ನಮ್ಮ ರಾಜ್ಯದೊಳಗೆ ಖಾಲಿ ಮಾಡುವುದಕ್ಕೆ ಮೋಟಾರು ವಾಹನ ಕಾಯಿದೆ ನಿಯನಗಳನ್ವಯ ರಾಜ್ಯದ ಹೋಮ್ ಸ್ಟೇಟ್ಸ್ ಪರ್ಮಿಟ್ ಹೊಂದಿರುವ ಲಾರಿಗಳಿಗೆ ಮಾತ್ರವೇ ಅವಕಾಶವಿದೆ. ಆದರೆ ನಿಯನ ಉಲ್ಲಂಘಿಸುವ ಮೂಲಕ ಹೊರ ರಾಜ್ಯಗಳ ಲಾರಿಗಳು ಮಂಗಳೂರು ಬಂದರಿನಿಂದ ಕಲ್ಲಿದ್ದಲು ತುಂಬಿ ರಾಜ್ಯದ ಇತರ ಭಾಗಗಳಾದ ಶಿವಮೊಗ್ಗ, ಬಳ್ಳಾರಿ, ಕೊಪ್ಪಳ ಜಿಲ್ಲೆಗಳಲ್ಲಿ ಅನ್ಲೋಡ್ ಮಾಡುತ್ತಿದ್ದಾರೆ. ಇದರಿಂದ ನಮಗೆ ಅನ್ಯಾಯವಾಗುತ್ತಿದೆ."
"ಕೊಪ್ಪಳ ಜಿಲ್ಲೆಗೆ ₹ 1300 ಹಾಗೂ ಬಳ್ಳಾರಿ ಜಿಲ್ಲೆಗೆ ₹ 1400 ಕನಿಷ್ಠ ಬಾಡಿಗೆ ದರ ಪ್ರತಿ ಟನ್ ನಂತೆ ನಿಗದಿ ಪಡಿಸಬೇಕು. ಕರ್ನಾಟಕ ಸಾರಿಗೆ ಇಲಾಖೆಯು ಲಾರಿಗಳಿಗೆ ಕಿ.ಮೀ. ಲೆಕ್ಕದಲ್ಲಿ ಬಾಡಿಗೆ ದರ ನಿರ್ಧರಿಸಿ ಮಾರ್ಚ್ ತಿಂಗಳಲ್ಲಿ ಆದೇಶ ಹೊರಡಿಸಿತ್ತು. ಅದು ಪಾಲನೆಯಾಗುತ್ತಿಲ್ಲ. ನ್ಯಾಯ ದೊರಕುವವರೆಗೆ ಕಲ್ಲಿದ್ದಲು ಲೋಡಿಂಗ್ ಬಂದ್ ಮಾಡುತ್ತಿದ್ದು, ರಾಜ್ಯದ ಎಲ್ಲಾ ಜಿಲ್ಲೆಗಳ ಲಾರಿ ಮಾಲಕರ ಸಂಘಗಳು ಬೆಂಬಲ ವ್ಯಕ್ತಪಡಿಸಿವೆ" ಎಂದು ಸುಶಾಂತ್ ಶೆಟ್ಟಿ ಹೇಳಿದರು.