ವಿದ್ಯಾಗಿರಿ, ಮೂಡುಬಿದಿರೆ: ವಿಶ್ವ ಮಾನ್ಯತೆ ಪಡೆದಿರುವ ಫುಟ್‍ಬಾಲ್ ಭಾರತದಲ್ಲೂ ಜನಪ್ರಿಯತೆಗೊಳ್ಳಬೇಕಾಗಿದೆ ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಆಶಯ ವ್ಯಕ್ತಪಡಿಸಿದರು.  

ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ ಹಾಗೂ ಆಳ್ವಾಸ್ ಫಿಸಿಯೋಥೆರಪಿ ಕಾಲೇಜು ಸಹಯೋಗದಲ್ಲಿ ಕಾಲೇಜಿನ ಅರಮನೆ ಮೈದಾನದಲ್ಲಿ ಹಮ್ಮಿಕೊಳ್ಳಲಾದ ವಿಶ್ವವಿದ್ಯಾಲಯದ ಮೈಸೂರು ವಲಯ ಅಂತರ ಕಾಲೇಜು ಪುರುಷ ಮತ್ತು ಅಂತರ ವಲಯ ಪುರುಷ ಮತ್ತು ಮಹಿಳೆಯರ ಫುಟ್‍ಬಾಲ್ ಟೂರ್ನಿಯನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು. 

ಭಾರತದಲ್ಲಿ ಕ್ರಿಕೆಟ್ ಜನಪ್ರಿಯತೆ ಪಡೆದಿದೆ. ಇದೇ ಮಾದರಿಯಲ್ಲಿ ಫುಟ್‍ಬಾಲ್ ಸೇರಿದಂತೆ ಇತರ ಕ್ರೀಡೆಗಳಿಗೂ ಪ್ರಾಧಾನ್ಯತೆ ದೊರೆಯಬೇಕು. ಶಿಕ್ಷಣದಲ್ಲಿ ಕ್ರೀಡೆಯ ಪಾತ್ರ ಬಹುಮುಖ್ಯ. ಆಳ್ವಾಸ್ ಶಿಕ್ಷಣ ಹಾಗೂ ಕ್ರೀಡೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದರು. 

ಆಳ್ವಾಸ್ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲೆ ಪ್ರೊ. ಕ್ಷಮಾ ಸುಶೀಲ್ ಶೆಟ್ಟಿ ಮಾತನಾಡಿ, ‘ಆಳ್ವಾಸ್ ಕ್ರೀಡೆಗೆ ನಿರಂತರ ಪ್ರೋತ್ಸಾಹ ನೀಡುತ್ತಾ ಬಂದಿದೆ’ ಎಂದರು. 

ಆಳ್ವಾಸ್ ದೈಹಿಕ ಶಿಕ್ಷಣ ಕಾಲೇಜಿನ ಪ್ರಾಂಶುಪಾಲ ಮಧು, ಟೂರ್ನಿಯ ಸಂಯೋಜಕ ಡಾ.ಸುರೇಶ್ ಎಸ್.ಎಂ., ಆಳ್ವಾಸ್ ಫಿಸಿಯೋಥೆರಪಿ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಅವಿನಾಶ್ ಎಸ್. ಇದ್ದರು. 

ಒಟ್ಟು 72 ತಂಡಗಳು ಸ್ಪರ್ಧಿಸುತ್ತಿದ್ದು, 1,150 ಕ್ರೀಡಾಪಟುಗಳು ಟೂರ್ನಿಯಲ್ಲಿ ಪಾಲ್ಗೊಂಡಿದ್ದಾರೆ. ಡಾ. ಫಿಯೋನಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಡಾ.ಸ್ನೇಹಾ ವಂದಿಸಿದರು.