ಕಾರ್ಕಳ: ಕನ್ನಡ ಸಾಹಿತ್ಯವು ಸಮಾಜದ ಒಳನೋವಿಗೆ ಸ್ಪಂದಿಸುವ ಸಂವೇದನಾಶೀಲ ಶಕ್ತಿ. ಅದು ವ್ಯಕ್ತಿಯ ಮನೋವಿಕಾಸಕ್ಕೂ, ಸಮೂಹದ ಸಾಂಸ್ಕೃತಿಕ ಬೆಳವಣಿಗೆಗೂ ಕಾರಣವಾಗುತ್ತದೆ ಎಂದು ಕಾರ್ಕಳ ತಾಲೂಕು 21ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಿದ್ದಾಪುರ ವಾಸುದೇವ ಭಟ್ ಅಭಿಪ್ರಾಯಪಟ್ಟರು.



ಕಾರ್ಕಳದ ಕ್ರಿಯೇಟಿವ್ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ನಡೆದ ತಾಲೂಕು ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಾಹಿತ್ಯವು ಮನುಷ್ಯನನ್ನು ಮನುಷ್ಯನಿಗೆ ಹತ್ತಿರ ಮಾಡುವ ಸಾಧನವಾಗಿದೆ ಎಂದರು. ಜೀವನದ ಕಠಿಣ ಅನುಭವಗಳಿಗೆ ಅರ್ಥ ನೀಡುವ ಶಕ್ತಿ ಸಾಹಿತ್ಯಕ್ಕಿದೆ. ಸಮಾಜದಲ್ಲಿ ಒಳ್ಳೆಯ ಮೌಲ್ಯಗಳನ್ನು ಬೆಳೆಸುವಲ್ಲಿ ಬರಹಗಾರರ ಪಾತ್ರ ಮಹತ್ವದ್ದೆಂದು ಹೇಳಿದರು.
ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್, ಸಾಹಿತ್ಯ ಸಮ್ಮೇಳನಗಳು ಆತ್ಮಾವಲೋಕನಕ್ಕೆ ಅವಕಾಶ ನೀಡಬೇಕು ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಸಣ್ಣ ವಿಷಯಗಳು ಹೆಚ್ಚಿನ ಗಮನ ಸೆಳೆಯುತ್ತಿರುವುದು ಗಮನಾರ್ಹ. ಆದರೆ ಒಂದು ಸಾಲಿನ ಸಾಹಿತ್ಯವೂ ಜನಮನದಲ್ಲಿ ದೊಡ್ಡ ಅಲೆ ಎಬ್ಬಿಸಬಲ್ಲ ಶಕ್ತಿ ಹೊಂದಿದೆ ಎಂಬುದು ಈ ಸಂದರ್ಭಗಳಲ್ಲಿ ಸ್ಪಷ್ಟವಾಗುತ್ತದೆ ಎಂದರು.
ತಾಲೂಕಿನಲ್ಲಿ ಸಾಹಿತ್ಯ ಚಟುವಟಿಕೆಗಳು ನಿರಂತರವಾಗಿ ಸಾಗುತ್ತಿರುವುದು ಸಂತಸದ ಸಂಗತಿ. ಮುಂದಿನ ಪೀಳಿಗೆಗೆ ಕನ್ನಡ ಸಾಹಿತ್ಯದ ಮೇಲಿನ ಆಸಕ್ತಿಯನ್ನು ಬೆಳೆಸುವ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತುಗಳು ಹೊಸ ಪ್ರಯತ್ನಗಳನ್ನು ಕೈಗೊಳ್ಳಬೇಕಿದೆ ಎಂದು ಅವರು ಸಲಹೆ ನೀಡಿದರು.
ಈ ಕಾರ್ಯಕ್ರಮದಲ್ಲಿ ಡಾ. ಮಾಲತಿ ಜಿ. ಪ್ರಭು ಅವರ ‘ನನ್ನೊಳಗಿನ ನಾನು’, ಆರ್. ರಮೇಶ್ ಪ್ರಭು ಅವರ ‘ಮನದಾಳದ ಮುತ್ತುಗಳು’ ಹಾಗೂ ಶ್ರೀಧರ್ ಗೋರೆ ನೆಲ್ಯಾಡಿ ಅವರ ‘ದ್ರೇಷ್ಕಾಣ ಫಲ ಸಂಚಯ’ ಎಂಬ ಮೂರು ಹೊಸ ಕೃತಿಗಳನ್ನು ಕಾರ್ಕಳ ಶ್ರೀ ಭುವನೇಂದ್ರ ಕಾಲೇಜಿನ ವಿಶ್ರಾಂತ ಪ್ರಾಂಶುಪಾಲ ಪ್ರೊ. ಬಿ. ಪದ್ಮನಾಭ ಗೌಡ ಅವರು ಲೋಕಾರ್ಪಣೆಗೊಳಿಸಿದರು.
ಸಮ್ಮೇಳನದ ಅಂಗವಾಗಿ ಕ್ರಿಯೇಟಿವ್ ಪುಸ್ತಕ ಮನೆ ಜೋಡುರಸ್ತೆಯಿಂದ ಆರಂಭವಾದ ಭುವನೇಶ್ವರಿ ದೇವಿಯ ಶೋಭಾಯಾತ್ರೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿತು. ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ವಿದ್ವಾನ್ ಗಣಪತಿ ಭಟ್ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ಕಾರ್ಕಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಹರಿಷತ್ ಧ್ವಜಾರೋಹಣ ಮಾಡಿದರು. ಮೆರವಣಿಗೆಗೆ ಕಾರ್ಕಳ ಯಕ್ಷ ಕಲಾರಂಗದ ಅಧ್ಯಕ್ಷ ವಿಜಯ್ ಶೆಟ್ಟಿ ಚಾಲನೆ ನೀಡಿದರು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಫೆಡರೇಷನ್ ಆಫ್ ಕರ್ನಾಟಕ ಕ್ವಾರಿ ಸ್ಟೋನ್ ಕ್ರಷರ್ ಓನರ್ಸ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಡಾ. ರವೀಂದ್ರ ಶೆಟ್ಟಿ ಬಜಗೋಳಿ ಉದ್ಘಾಟಿಸಿದರು. ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಸಮ್ಮೇಳನದ ಆಶಯವನ್ನು ವಿವರಿಸಿದರು.
ಸಮಾರೋಪದ ನುಡಿಗಳನ್ನಾಡಿದ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸ್ಥಾಪಕರಲ್ಲಿ ಒಬ್ಬರಾದ ಅಶ್ವತ್ ಎಸ್. ಎಲ್. ರವರು ಮಾತನಾಡಿ, ಸಾಹಿತ್ಯವು ಸಮಾಜದ ಮನೋವಿಕಾಸಕ್ಕೆ ದಿಕ್ಕು ತೋರಿಸುವ ಶಕ್ತಿಯಾಗಿದೆ ಎಂದು ಹೇಳಿದರು. ಮಾನವೀಯ ಮೌಲ್ಯಗಳನ್ನು ಬೆಳೆಸುವಲ್ಲಿ ಹಾಗೂ ಸಂವೇದನೆಯನ್ನು ಗಟ್ಟಿಗೊಳಿಸುವಲ್ಲಿ ಸಾಹಿತ್ಯದ ಪಾತ್ರ ಮಹತ್ವದ್ದಾಗಿದೆ ಎಂದ ಅವರು, ಹೊಸ ಪೀಳಿಗೆಯಲ್ಲಿ ಕನ್ನಡ ಸಾಹಿತ್ಯದ ಓದು ಮತ್ತು ಆಸಕ್ತಿಯನ್ನು ಹೆಚ್ಚಿಸುವತ್ತ ಸಂಘಟನೆಗಳು ಹಾಗೂ ಶಿಕ್ಷಣಸಂಸ್ಥೆಗಳು ಒಟ್ಟಾಗಿ ಕಾರ್ಯನಿರ್ವಹಿಸಬೇಕೆಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಪ್ರೊ. ಕೆ. ಗುಣಪಾಲ ಕಡಂಬ, ಶಿಕ್ಷಣಾಧಿಕಾರಿ ಗಿರಿಜಮ್ಮ ಎಸ್.ಆರ್., ಸಾಹಿತಿ ಎಚ್. ದುಂಡಿರಾಜ್, ಜ್ಞಾನಸುಧ ಶಿಕ್ಷಣ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ ಬಂಡಿ, ನ್ಯಾಯವಾದಿ ಎಂ.ಕೆ. ಸುವೃತ್ ಕುಮಾರ್, ವಿವಿಧ ತಾಲೂಕು ಹಾಗೂ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಹಾಗೂ ಸಾಹಿತ್ಯಾಸಕ್ತರು ಭಾಗವಹಿಸಿದ್ದರು. ತಾಲೂಕು ಕಸಾಪ ಅಧ್ಯಕ್ಷ ಪ್ರಭಾಕರ್ ಶೆಟ್ಟಿ ಕೊಂಡಳ್ಳಿ ಸ್ವಾಗತಿಸಿದರು. ಗಣೇಶ್ ಜಾಲ್ಸೂರು ಕಾರ್ಯಕ್ರಮ ನಿರ್ವಹಿಸಿದರು.