ಮಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ “ಹರ್ ಘರ್ ತಿರಂಗಾ, ಹರ್ ಘರ್ ಸ್ವಚ್ಛತಾ, ಸ್ವಚ್ಛತೆಯೊಂದಿಗೆ ಸ್ವಾತಂತ್ಯ್ರದ ಉತ್ಸವ” ಹಾಗೂ ಒಂದು ವಾರದ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ನರ್ವಾಡೆ ವಿನಾಯಕ್ ಕಾರ್ಬಾರಿ ಪ್ರತಿಜ್ಞಾ ವಿಧಿ ಬೋಧಿಸಿದರು.
ಅವರು ಮಾತನಾಡಿ, ದೇಶಾದ್ಯಂತ ನಾಗರಿಕರಲ್ಲಿ ಒಗ್ಗಟ್ಟಿನ ಮನೋಭಾವವನ್ನು ಬೆಳೆಸುವ ಜೊತೆಗೆ ಸ್ವಾತಂತ್ರ್ಯದ ಸಾರವನ್ನು, ಸ್ವಚ್ಛತೆ ಮತ್ತು ಸುಜಲತೆ ಗುರಿಗಳೊಂದಿಗೆ ಸಂಯೋಜಿಸಬೇಕು. ಗ್ರಾಮೀಣ ಜನರಲ್ಲಿ ನೀರು ಮತ್ತು ನೈರ್ಮಲ್ಯ ಕುರಿತು ಹೆಚ್ಚಿನ ಅರಿವು ಮೂಡಿಸುವ ಉದ್ದೇಶದೊಂದಿಗೆ ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅಭಿಯಾನದ ಅಡಿಯಲ್ಲಿ ಗ್ರಾಮ ಮತ್ತು ಗ್ರಾಮ ಪಂಚಾಯತ್‍ಗಳಲ್ಲಿ ಸ್ವಚ್ಛ ಸುಜಲ್ ಗ್ರಾಮ ಪ್ರತಿಜ್ಞೆಗಳು, ಸಮುದಾಯ ಶುಚಿತ್ವ ಅಭಿಯಾನಗಳು, ಆಸ್ತಿಗಳ ಶುಚಿಗೊಳಿಸುವಿಕೆ, ಅರಿವು ಮೂಡಿಸುವ ಚಟುವಟಿಕೆಗಳು, ಜಲ ಸಂರಕ್ಷಣೆ ಮತ್ತು ಅಮೃತ್ ಸರೋವರಗಳು, ಸಾರ್ವಜನಿಕ ಸ್ಥಳಗಳು ಇತ್ಯಾದಿ ಪ್ರಮುಖ ವಾಶ್ ಮೂಲಸೌಕರ್ಯ ಸ್ಥಳಗಳಲ್ಲಿ ಧ್ವಜಾರೋಹಣ ಸಮಾರಂಭಗಳನ್ನು ಆಯೋಜನೆ ಮಾಡಲಾಗುವುದು ಎಂದು ತಿಳಿಸಿದರು.
“ಹರ್ ಘರ್ ತಿರಂಗಾ, ಹರ್ ಘರ್ ಸ್ವಚ್ಛತಾ, ಸ್ವಚ್ಛತೆಯೊಂದಿಗೆ ಸ್ವಾತಂತ್ಯ್ರದ ಉತ್ಸವ” ಅಭಿಯಾನದಲ್ಲಿ ತಾಲೂಕು ಮತ್ತು ಗ್ರಾಮ ಪಂಚಾಯತ್‍ಗಳು, ಸ್ಥಳೀಯ ಸಂಸ್ಥೆಗಳು, ಗ್ರಾಮ ನೀರು ಮತ್ತು ನೈರ್ಮಲ್ಯ ಸಮಿತಿಗಳು, ಸ್ವ-ಸಹಾಯ ಸಂಘದ ಗುಂಪುಗಳು, ಪಂಚಾಯತ್ ರಾಜ್ ಸಂಸ್ಥೆಗಳು, ಶಾಲಾ ಮಕ್ಕಳು, ಸ್ವಯಂ-ಸೇವಕರು ಮತ್ತು ಮುಂಚೂಣಿ ಕಾರ್ಯಕರ್ತೆಯರು ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರು ಈ ವೇಳೆ ಕರೆ ನೀಡಿದರು.
ಸ್ವಚ್ಛ ಭಾರತ್ ಮಿಷನ್ (ಗ್ರಾ) ಜಿಲ್ಲಾ ಸಮಾಲೋಚಕ ಡೊಂಬಯ್ಯ ಇಡ್ಕಿದು ಪ್ರತಿಜ್ಞಾ ವಿಧಿ ಬೋಧಿಸಿದರು. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯ ನಿರ್ವಾಹಕ ಇಂಜಿನಿಯರ್ ಜೈಪ್ರಕಾಶ್ ಪ್ರಸ್ತಾವನೆಗೈದರು. ವಿವಿಧ ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಬ್ಬಂದಿಗಳು ಉಪಸ್ಥಿತರಿದ್ದರು.