ಮೂಡುಬಿದಿರೆ: ಶಿಕ್ಷಣ ಮತ್ತು ರಂಗಕಲೆಗಳನ್ನು ಪ್ರತ್ಯೇಕಿಸಿ ನೋಡುವ ಇತ್ತೀಚಿನ ಪ್ರವೃತ್ತಿ ಸಮಾಜಕ್ಕೆ ಒಳಿತಲ್ಲ. ಅರಿವು ಮತ್ತು ಆನಂದ — ಇವು ಬೇರ್ಪಡಿಸಲಾಗದ ನಿಜವಾದ ಸಂಪತ್ತು. ಕಲೆಯು ಶಿಕ್ಷಣದಿಂದ ದೂರವಿದ್ದರೆ, ಮಾನವೀಯತೆ, ಸೃಜನಶೀಲತೆ ಮತ್ತು ಜೀವನದ ಗಾಢತೆ ಕುಂದುತ್ತದೆ ಎಂದು ಪ್ರಸಿದ್ಧ ರಂಗ ನಿರ್ದೇಶಕ ಹಾಗೂ ಸಾಹಿತಿ ಡಾ. ಶ್ರೀಪಾದ ಭಟ್ ಕುಮಟಾ ಅಭಿಪ್ರಾಯಪಟ್ಟರು.
ಅವರು ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ಘಟಕ ಹಾಗೂ ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ರಂಗ ಸಂಸ್ಕ್ಕತಿ’ ಎಂಬ ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತಿದ್ದರು.
ರಂಗಭೂಮಿಯೆಂದರೆ ಹೊರ ಜಗತ್ತನ್ನು ನೋಡುವುದಷ್ಟೇ ಅಲ್ಲ, ತನ್ನನ್ನು ತಾನು ಅರಿಯುವ ಕ್ರಿಯೆ. ಇದು ಕೇವಲ ಬುದ್ಧಿ ಮತ್ತು ಭಾವದ ಕಸರತ್ತು ಮಾತ್ರವಲ್ಲ, ದೈಹಿಕ ಚಲನೆ, ಶಿಸ್ತು, ತಂಡ ಸಹಕಾರ ಮತ್ತು ಆತ್ಮವಿಶ್ವಾಸ ಬೆಳೆಸುವ ವಿಸ್ತೃತ ಪ್ರಕ್ರಿಯೆ. ರಂಗಭೂಮಿ ವ್ಯಕ್ತಿತ್ವವನ್ನು ರೂಪಿಸುವ ಸಶಕ್ತ ಸಾಧನ ಎಂದು ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೇಣು ಗೋಪಾಲ ಶೆಟ್ಟಿ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಆಳ್ವಾಸ್ ರಂಗ ಅಧ್ಯಯನ ಕೇಂದ್ರದ ನಿರ್ದೇಶಕ ಡಾ.ಜೀವನರಾಂ ಸುಳ್ಯ, ಪರಿಷತ್ತಿನ ಗೌರವ ಕಾರ್ಯದರ್ಶಿ ಸದಾನಂದ ನಾರಾವಿ ಉಪಸ್ಥಿತರಿದ್ದರು. ಡಾ. ಯೋಗೀಶ ಕೈರೋಡಿ ಸ್ವಾಗತಿಸಿ, ಉಪನ್ಯಾಸಕಿ ಡಾ. ಜ್ಯೋತಿ ರೈ ವಂದಿಸಿದರು. ಸೌಮ್ಯ ಕುಂದರ್ ವಂದಿಸಿದರು. ಮ್ಯೂಸಿಕ್ ಪೋರಂನ ವಿದ್ಯಾರ್ಥಿಗಳು ಹಾಡಿದರು.