ಕಲಬೆರಕೆಯು ಸಹಜ, ಅಸಹಜ, ಒಪ್ಪಿದ, ಒಪ್ಪಲಾಗದ, ಲಾಭಬಡುಕ, ಅಮಾನವೀಯ ಎಂದು ಹಲವು ಬಗೆಗಳಲ್ಲಿ ಇವೆ.
ಯಾವುದೇ ಕಲಬೆರಕೆಯು ಸಹಜ ಆಗಲಾರದಾದರೂ ಕೆಲವನ್ನು ಸಹಜ ಕಲಬೆರಕೆ ಎಂದೇ ತಿಳಿಯಲಾಗಿದೆ. ಭಾಷೆಗಳಲ್ಲಿ ಬೇರೆ ಭಾಷೆಯ ನುಡಿಗಳು ಬರುವುದು. ಪಂಚೆ ಹೋಗಿ ಪ್ಯಾಂಟು ಬಂದಂಥ, ಮೀನು ಸಾರು ಹೋಗಿ ಮೀನು ಪ್ರೈ ಅನಿವಾರ್ಯ ಆದಂಥ ಇಂತಹ ಹಲವಾರು ಕೂಡ ಕಲಬೆರಕೆ ಆದರೂ ಅವನ್ನು ಸಹಜ ಕಲಬೆರಕೆ ಎಂದು ಪರಿಗಣಿಸಲಾಗಿದೆ. ಪಂಚೆ ಉಟ್ಟು, ಲಂಡನ್ ರೆಡಿಮೇಡ್ ಅಂಗಿ ಹಾಕಿ, ಅಫಘಾನ್ ಕೋಟು ಇಲ್ಲವೇ ತಿಬೆಟ್ ಸ್ವೆಟರ್ ತೊಟ್ಟು, ಉದ್ದ ನಾಮ ಹಾಕಿದ್ದರೂ ಮುಚ್ಚುವಂತೆ ಮೆಕ್ಸಿಕೋ ಹ್ಯಾಟು ಹಾಕಿ, ಕೈಯಲ್ಲಿ ಚೀನೀ ಮೊಬಾಯಿಲ್, ಕಿಸೆಯಲ್ಲಿ ಜಪಾನಿನ ಪೆನ್, ಅರಬ್ ಸೆಂಟ್, ಪ್ಯಾರಿಸ್ ಪೌಡರ್ ಎಂದು ಸಂಪೂರ್ಣ ಕಲಬೆರಕೆ ಜನ ನಮ್ಮೆದುರು ಬರಬಹುದು. ಆದರೆ ಅದು ಸಹಜ ಕಲಬೆರಕೆ. ಏಕೆಂದರೆ ಬದಲಾವಣೆ ಕಾಲ ಧರ್ಮ.
ಇನ್ನು ಕೆಲವು ಘೋಷಣೆ ಮೂಲಕ ಒಪ್ಪಿದ ಕಲಬೆರಕೆ ಆಗಿದೆ. ಕಾಫಿ ಪುಡಿಯಲ್ಲಿ ಚಿಕೋರಿ ಪುಡಿ ಬೆರೆಸುವುದು, ಬ್ರೆಡ್ ತಯಾರಿಕೆಯಲ್ಲಿ ತುಸು ಸುಣ್ಣಾಂಶ ಬಳಸುವುದು ಇವೆಲ್ಲ ಒಪ್ಪಿದ ಕಲಬೆರಕೆಗಳು. ಇಲ್ಲಿ ಚಾಕ್ ಇಲ್ಲವೇ ಸುಣ್ಣಾಂಶವನ್ನು ಕ್ಯಾಲ್ಸಿಯಂ ಎಂದು ಪರಿಗಣಿಸಲಾಗುತ್ತದೆ. ಇವನ್ನೆಲ್ಲ ಘೋಷಿಸಿರಬೇಕು ಎಂಬುದು ಕಾನೂನು. ಆದರೆ ಅಂಥ ಅವಕಾಶ ಕಡಿಮೆ.
ಕೆಲವಕ್ಕೆ ಅನುಮತಿ ಇದ್ದರೂ ಕೆಟ್ಟ ಕಲಬೆರಕೆ ನಡೆಯುತ್ತದೆ. ಅವುಗಳಲ್ಲಿ ಮುಖ್ಯವಾದುದು ಆಹಾರದ ಬಣ್ಣ. ಸಿಹಿ ತಿಂಡಿ, ಸಿದ್ಧ ಆಹಾರ ಮೊದಲಾದವಕ್ಕೆ ನಿಶ್ಚಿತ ಪ್ರಮಾಣದಲ್ಲಿ ನಿಶ್ಚಿತ ಹಾನಿಕರವಲ್ಲದ ಬಣ್ಣ ಬೆರೆಸಲು ಅನುಮತಿ ಇದೆ. ಆದರೆ ಅವೆಲ್ಲ ದುಬಾರಿ, ಆದ್ದರಿಂದ ಅಗ್ಗದ ಯಾವುದೋ ಒಂದು ಬಣ್ಣ ಹಾಕಿ ತಿಂಡಿ ತಯಾರಿಸುವುದು ಭಾರತದಲ್ಲಿ ಮಾಮೂಲು. ಕೇಸರಿಬಾತಿಗೆ ಬಣ್ಣ ಹಾಕದೆ ತಿಂದರೆ ರುಚಿ ಕೆಡುವುದಿಲ್ಲ. ಆದರೆ ಆಕರ್ಷಣೆಗಾಗಿ ಯಾವುದೋ ಬಟ್ಟೆ ಬಣ್ಣ ಬೆರೆಸುವವರಿಗೆ ಕೊರತೆ ಇಲ್ಲ.
ಅನಿವಾರ್ಯದ ಕಲಬೆರಕೆಗಳು ಕೆಲವು. ಅದರಲ್ಲಿ ಮುಖ್ಯವಾದುದು ಬೆಳೆಯುವಾಗ ಕೀಟನಾಶಕ ಸಿಂಪಡಿಸುವುದು. ಇಂಥ ಕೃಷ್ಯುತ್ಪನ್ನದಲ್ಲಿ ಕೀಟನಾಶಕದ ಅಂಶ ಇರುತ್ತದೆ. ಆದರೆ ಇದನ್ನು ಅನಿವಾರ್ಯ ಎಂದೇ ಪರಿಗಣಿಸಲಾಗುತ್ತದೆ. ಹಿಂದೆಲ್ಲ ಕಲಬೆರಕೆ ಇಲ್ಲದ್ದು ಎಂದರೆ ಎಳನೀರು ಮತ್ತು ಕೋಳಿಮೊಟ್ಟೆ ಎನ್ನಲಾಗುತ್ತಿತ್ತು. ಆದರೆ ತೆಂಗಿನ ಮರಕ್ಕೆ ಸೂಜಿ ಮದ್ದು, ಫಲಕ್ಕೆ ಕೀಟನಾಶಕ, ಕೋಳಿಗೆ ಇಂಜೆಕ್ಷನ್, ಕೋಳಿ ಆಹಾರದಲ್ಲಿ ಕೃತಕತೆ, ಕೀಟನಾಶಕ ಎಂದು ಅವೂ ಕೂಡ ಇಂದು ಅನಿವಾರ್ಯದ ಕಲಬೆರಕೆ ಎನಿಸಿವೆ.
ಲಾಭದ ಉದ್ದೇಶ ಹೊಂದಿದ ಕಲಬೆರಕೆ ಭಾರತದ ಅತಿ ದೊಡ್ಡ ಶಾಪ. ಹಾಲಿಗೆ ಮೈದಾ, ನೀರು ಸೇರಿಸುವರು. ಹೋಗಲಿ ಎಂದರೆ ಯೂರಿಯಾ ಬೆರೆಸುವ ಖದೀಮರಿದ್ದಾರೆ. ಮೆಣಸಿನ ಪುಡಿ, ಮಸಾಲೆ ಪುಡಿಗಳಲ್ಲಿ ಕೆಳ ದರ್ಜೆಯವನ್ನು ಸಹಿಸಬಹುದು. ಆದರೆ ಕುದುರೆ ಲದ್ದಿಯಂಥವನ್ಮು ಒಣಗಿಸಿ ಪುಡಿ ಮಾಡಿ ಬೆರೆಸುವುದು, ಕಾರಾಕ್ಕೆ ಕ್ಷಾರ ಎಂದು ಊರು ಹಾಳು ಕಲಬೆರಕೆಗಳೂ ಇವೆ. ಚಾ ಪುಡಿಗೆ ಬಳಸಿದ ಪುಡಿ ಒಣಗಿಸಿ ಸೇರಿಸುವವರು ಇದ್ದಾರೆ. ಆದರೆ ಬಣ್ಣ ಸೇರಿಸುವ ಬೆರಕೆ ಮಂದಿ ಕಂಪೆನಿ ಹೆಸರಲ್ಲೂ ಇರುವರಂತೆ.
ಮಾರಣಾಂತಿಕ ರಾಸಾಯನಿಕ, ಕಲ್ಲು, ಗಾಜಿನ ಚೂರು ಬೆರೆಸುವ ಜನ ಮನುಷ್ಯತ್ವ ಮರೆತವರು. ಅಕ್ಕಿಯಂಥವುಗಳ ನಡುವೆ ಸಮಾನಾಕಾರದ ಕಲ್ಲು, ಗಾಜಿನ ಚೂರು, ಮರಳು ಬೆರೆಸುವ ಸಮಾಜ ಕಂಟಕರು ನಮ್ಮ ನಡುವೆ ಇದ್ದಾರೆ. ಸಿದ್ಧ ಆಹಾರಗಳಲ್ಲಿ ಅಗತ್ಯವಿಲ್ಲದೆಯೂ ರಾಸಾಯನಿಕ ಬೆರೆಸಿ ನಿಧಾನ ವಿಷ ತಿನಿಸುವ ಜನ ಇದ್ದಾರೆ. ಬೆಳೆಯದ ಕಾಯನ್ನು ರಾಸಾಯನಿಕದಿಂದ ಹಣ್ಣಾಗಿಸಿ ಕೊಡುತ್ತಾರೆ. ತಿಂದರೆ ಸತ್ವವಲ್ಲ, ಸಾವು ಸುಸ್ತು ಸುತ್ತಿಕೊಳ್ಳುತ್ತದೆ.
ಎಣ್ಣೆಗಳಿಗೆ ಕಡಿಮೆ ಬೆಲೆಯ ಎಣ್ಣೆ ಬೆರಕೆ ತಪ್ಪಾದರೂ ಅಪಾಯವಿಲ್ಲ. ಆದರೆ ಪೆಟ್ರೋಲಿಯಂ ಮೂಲದ ವೈಟ್ ಆಯಿಲ್ ಬೆರೆಸಿ ಕೊಲ್ಲುತ್ತಾರಲ್ಲ. ನನ್ನೂರಿನಲ್ಲೆ ಇಂಥ ಒಂದು ತೆಂಗಿನೆಣ್ಣೆ ಘಟಕ ಇದೆ. ಕೇಸು ಒಂದು ಕಡೆ ಮೋಸ ಇನ್ನೊಂದು ಕಡೆ ಮುಂದುವರಿದಿದೆ. ತುಪ್ಪ ಬೆಣ್ಣೆಗಳಿಗೆ ಪ್ರಾಣಿಜನ್ಯ ಕೊಬ್ಬು ಬೆರೆಸುವರು. ಬೆಂಗಳೂರಿನ ಹೋಟೆಲುಗಳ ಮಸಾಲೆ ದೋಸೆ ಪ್ರಿಯ ಒಂದು ಸ್ಥಳೀಯ ಕಂಪೆನಿಯ ತುಪ್ಪ, ಬೆಣ್ಣೆಗಳಿಗೆ ದನದ, ಹಂದಿಯ ಕೊಬ್ಬು ಹಾಕಿದ್ದು ಪತ್ತೆ ಆಗಿ ಅಂಗಡಿ ಸೀಲ್, ಬಂಧನ ಎಲ್ಲ ಆಯಿತು. ಇದು 20ನೇ ಶತಮಾನದ ಅಂತ್ಯದ ಮೊಕದ್ದಮೆ. ದಶಕದ ಬಳಿಕ 21ನೇ ಶತಮಾನದಲ್ಲಿ ಅದು ಮತ್ತೆ ತೆರೆದಿದೆ.
ಕಲಬೆರಕೆ ತಡೆ, ಆಹಾರ ಶುದ್ಧತೆ ಕಾನೂನು ಇದೆ. 2011ರ ಬಳಿಕ ಅದನ್ನು ಬಿಗಿಗೊಳಿಸಲಾಗಿದೆ. ಆದರೆ ಕಾನೂನು ಚಾಪೆ ಅಡಿ ತೂರಿ ನೋಡಿದರೆ, ಕಲಬೆರಕೆ ರಂಗೋಲಿಯಡಿ ತೂರಿ ಪಾರಾಗುತ್ತಲಿದೆ.
-By ಪೇಜಾ