ಏ ಅನಿಷ್ಠ, ಹಿತ್ತಲ ಬಾಗಿಲಲ್ಲಿ ಕೂತು ಎನ್ ಕಣಿ ಹೇಳ್ತಿದ್ದೀಯಾ. ಬೇಗ ಬಾ, ಪಾತ್ರೆ ತೊಳೆದು ಹೋಗಿ ಸೌದೆ ಹೊತ್ಕೊಂಡು ಬಾ. ಮಳೆ ಬರುವ ಹಂಗಾಗಿದೆ. ಸೌದೆ ನೆಂದರೆ ನಿನ್ನನ್ನೇ ಒಲೆಗೆ ಕಚ್ಚಿ ನೀರು ಕಾಯಿಸಿಕೊಂಡು ಸ್ನಾನ ಮಾಡ್ಬಿಡ್ತೀನಿ. ಕರ್ಮ ಕಳಿತು ಅಂತ ನೆಮ್ಮದಿಯಾಗಿದ್ದುಬಿಡ್ತೀನಿ. ಅದ್ಯಾವ ಗಳಿಗೆಯಲ್ಲಿ ಬಂದು ನಮ್ಮನೆ ಸೇರ್ಕೊಂಡೆ ನೀನು. ನಿನಗೆ ಅನ್ನ ಹಾಕೋ ಕರ್ಮ ಬೇರೆ ನಮಗೆ.
ಚಿಕ್ಕಮ್ಮ 'ಚಂದ್ರಾ'ಳ ಮಾತಿಗೆ ಕಣ್ಣು ತುಂಬಿಕೊಂಡು ಮೌನವಾಗಿ ತನಗೊಹಿಸಿದ್ದ ಕೆಲಸ ಮಾಡುತ್ತಿದ್ದಳು ಸ್ಪಂದನ. ಅವಳಿಗೆ ಚಿಕ್ಕಮ್ಮನ ಬೈಗಳಗಳೇನೂ ಹೊಸದಲ್ಲ. ಹೆಸರಿನಷ್ಟೇ ಮುದ್ದಾದ ಮೊಗದ ಮತ್ತು ಮನದ ಹುಡುಗಿ. ಆದರೆ ಅವಳ ಭಾವನೆಗಳಿಗೆ ಸ್ಪಂದಿಸುವ ಮನಗಳಾವು ಅಲ್ಲಿ ಇರಲಿಲ್ಲ, ಅವಳ ಮನೆಯಲ್ಲಿ.
ಚಿಕ್ಕಪ್ಪ ಅಂತೂ ತನ್ನ ಹೆಂಡತಿ ಕೊಡುವ ಬಿಡುಗಾಸಿನಲ್ಲೇ ಸಾರಾಯಿ ಅಂಗಡಿಯ ದಾಸನಾಗಿದ್ದ. ಚಿಕ್ಕ ವಯಸ್ಸಿಗೇ ಅಪ್ಪ ಅಮ್ಮನನ್ನು ಕಳೆದುಕೊಂಡ ಸ್ಪಂದನ ಚಿಕ್ಕಪ್ಪ ಚಿಕ್ಕಮ್ಮನ ನೆರಳಿನಲ್ಲಿ ಬೆಳೆಯುತ್ತಿರುವ ಹದಿನೇಳು ವರ್ಷದ ಹುಡುಗಿ.
ಮನೆಯಲ್ಲಿ ಹೇಳಿಕೊಳ್ಳುವಂತೆ ಸಿರಿತನವೆನು ಇರಲಿಲ್ಲ. ಅವಳ ಅಪ್ಪ ಅಮ್ಮ ಅಪಘಾತದಲ್ಲಿ ತೀರಿ ಹೋದ ನಂತರ ಚಿಕ್ಕಪ್ಪ ಚಿಕ್ಕಮ್ಮ ತಾವೇ ಸಾಕುತ್ತೇವೆಂದು ಮನೆಯಲ್ಲಿ ಇರಿಸಿಕೊಂಡಿದ್ದರು. ಆದರೆ ಮಗಳ ಪ್ರೀತಿ ಎಂದೂ ಕೊಡಲಿಲ್ಲ ಅವಳಿಗೆ. ಮನೆಯ ಕೆಲಸದ ಭಾರವನ್ನೆಲ್ಲ ಹೊರಿಸಿ ತಾವು ಆರಾಮಾಗಿ ಇದ್ದರು ಚಂದ್ರ. ಚಂದ್ರಾಳ ಏಕೈಕ ಪುತ್ರಿ ಚಾಂದಿನಿಯೂ ಅಮ್ಮನ ಪಡಿಯಚ್ಚು. ತನ್ನ ಪ್ರತಿಯೊಂದು ಕೆಲಸಕ್ಕೂ ಮತ್ತು ತಪ್ಪಿಗೂ ಸ್ಪಂದನಳನ್ನೇ ಹೊಣೆ ಮಾಡುತ್ತಿದ್ದಳು.
ಚಾಂದಿನಿ ಶಾಲೆಗೆ ಹೋಗಿ ವಿದ್ಯಾವಂತಳಾಗಿದ್ದರೂ ಹೆಸರಿಗಷ್ಟೇ ಆಕೆ ವಿದ್ಯಾವಂತೆ. ಶುದ್ಧ ಅಜ್ಞಾನಿಯ ವರ್ತನೆ. ಸ್ಪಂದನಳನ್ನು ಹೈಸ್ಕೂಲಿನಲ್ಲಿ ಬಿಡಿಸಿ ಮನೆ ಕೆಲಸಕ್ಕೆ ಹಚ್ಚಿದ್ದರು ಚಂದ್ರ. ಆಕೆಯ ಸ್ಥಿತಿಯ ಅರಿವಿದ್ದರೂ ಅಕ್ಕಪಕ್ಕದವರು ಏನು ಮಾಡುವ ಪರಿಸ್ಥಿತಿಯಲ್ಲಿರಲಿಲ್ಲ. ಚಂದ್ರಾಳ ಬಜಾರಿತನಕ್ಕೆ ಅವರೆಲ್ಲರೂ ಹೆದರಿ ಮೌನವಾಗಿದ್ದರು.
ಸ್ಪಂದನಾಳಿಗಂತು ಇದೆಲ್ಲಾ ಅಭ್ಯಾಸವಾಗಿತ್ತು. ಚಿಕ್ಕಮ್ಮನ ಕುಟುಕು ಮಾತು, ನೆರೆಹೊರೆಯ ಸಹಾಯವಿಲ್ಲದೆ ಒಂದು ರೀತಿಯ ಖಿನ್ನತೆಯಲ್ಲಿ ಬೆಳೆದ ಅವಳಿಗೆ ಜೀವನವೇ ಬೇಸರವಾಗಿತ್ತು. ಆದರೂ ವಿಧಿಯಿಲ್ಲದೇ ಚಿಕ್ಕಪ್ಪ ಚಿಕ್ಕಮ್ಮನ ಜೊತೆ ಇದ್ದಳು. ಹೀಗಿರುವಾಗಲೇ ಸ್ಪಂದನಾ ಹದಿನೆಂಟು ವರ್ಷಕ್ಕೆ ಕಾಲಿಟ್ಟಿದ್ದಳು. ಅವಳ ಚಿಕ್ಕಮ್ಮನಿಗೆ ಒಂದು ಕೆಟ್ಟ ಆಲೋಚನೆ ಮನದಲ್ಲಿ ಮೂಡಿತು. ಅದನ್ನು ಕಾರ್ಯಗತಗೊಳಿಸಲೆತ್ನಿಸಿದ್ದಳು.
ದೂರದ ಸಂಬಂಧಿ ಎಂದು ಕರೆಸಿ ಒಬ್ಬ ಹುಡುಗನನ್ನು ಸ್ಪಂದನಗಳಿಗೆ ಮದುವೆ ಮಾಡಿಸಿದಳು. ಚಿಕ್ಕಪ್ಪ ಚಿಕ್ಕಮ್ಮನ ಕಾಟದಿಂದ ಬೇಸತ್ತಿದ್ದ ಸ್ಪಂದನ ಈ ಮದುವೆಯಿಂದಾದರೂ ಕತ್ತಲಾವರಿಸಿದ್ದ ತನ್ನ ಬದುಕಲ್ಲಿ ಬೆಳಕು ಕಾಣಬಹುದು ಎಂದುಕೊಂಡಿದ್ದಳು. ಆದರೆ ಅಸಲಿ ಕಥೆಯೇ ಬೇರೆಯಾಗಿತ್ತು.
ಚಿಕ್ಕಮ್ಮ ಯಾರೋ ಗೊತ್ತು ಗುರಿ ಇಲ್ಲದ ಹುಡುಗನಿಗೆ ಸ್ಪಂದನಳನ್ನು ಮಾರಿದ್ದಳು. ಊರಿನವರ ಎದುರಿಗೆ ಸಭ್ಯಸ್ಥೆಯಂತೆ ತೋರಿಸಿಕೊಳ್ಳಲು ಸರಳ ವಿವಾಹದ ನಾಟಕವಾಡಿದ್ದಳು. ಸ್ಪಂದನಾ ಬದುಕು ಇನ್ನೂ ದುಸ್ತರವಾಯಿತು. ಮದುವೆ ನಾಟಕವಾಡಿ ತನ್ನನ್ನು ಕರೆದುಕೊಂಡು ಬಂದವನಿಂದ ಹೇಗೋ ತಪ್ಪಿಸಿಕೊಂಡು ಹೊರಬಂದಳು. ಮತ್ತೆ ಚಿಕ್ಕಮ್ಮನ ಬಳಿ ಹೋಗಲು ಮನ ಒಪ್ಪಲಿಲ್ಲ.
ಹಸಿವು ಬಾಯಾರಿಕೆ ಹೊತ್ತು ಬೀದಿ ಬೀದಿ ಸುತ್ತುತ್ತಾ ಎಲ್ಲೋ ಒಂದೆಡೆ ಹೋಗಿ ಪ್ರಜ್ಞೆ ತಪ್ಪಿ ಬಿದ್ದಳು. ಮತ್ತೆ ಕಣ್ಣು ಬಿಟ್ಟಾಗ ಯಾರದೋ ಮನೆಯ ಹಾಸಿಗೆಯ ಮೇಲಿದ್ದಳು. ಆ ಮನೆಯ ಹೆಂಗಸು ಅವಳಿಗೆ ಊಟೋಪಚಾರ ಮಾಡಿ, ತನ್ನ ಬಳಿಯೇ ಉಳಿದುಕೊಂಡರೆ ನಿನಗೆ ಕೆಲಸ ಮತ್ತು ಕೈತುಂಬ ಸಂಬಳ ನೀಡುತ್ತೇನೆಂದು ಆಸೆ ತೋರಿಸಿ ಒಪ್ಪಿಸಿದಳು. ಮುಗ್ಧ ಸ್ಪಂದನ ಯಾವ ಕೆಲಸವೆಂದು ಅರಿಯದೆ ಒಪ್ಪಿಕೊಂಡಳು. ಅವಳಿಗೆ ಹೊರಗಿನ ಪ್ರಪಂಚದ ಕ್ರೂರತ್ವದ ಅರಿವಿರಲಿಲ್ಲ. ತನ್ನ ಹಿಂದಿನ ಬದುಕಿನ ಕತೆಯೆಲ್ಲ ಆ ಹೆಂಗಸಿಗೆ ಹೇಳಿದಳು. ಆ ಹೆಂಗಸಿಗು ಒಳಗೊಳಗೆ ಖುಷಿ ಆಯಿತು. ಇವಳಿಗೇನಾದರು ಕೇಳುವವರು ಯಾರು ಇಲ್ಲವೆಂದು.
ಅವಳು ಕೊಂಚ ಸುಧಾರಿಸಿಕೊಂಡ ನಂತರ, ಒಂದು ಮಧ್ಯಾಹ್ನ ಸುಮಾರು ನಲವತ್ತು ವರ್ಷದ ಗಂಡಸೊಬ್ಬ ಅವಳ ಕೋಣೆಗೆ ಬಂದು ಚಿಲಕ ಹಾಕಿಕೊಂಡು ವಿಕೃತವಾಗಿ ನಗತೊಡಗಿದ. ಆಗಲೇ ಅರಿವಾಗಿದ್ದು ಅವಳಿಗೆ, ತಾನು ಒಪ್ಪಿಕೊಂಡಿದ್ದು ಯಾವ ಕೆಲಸ ಎಂದು. ಈ ಬದುಕು ಪಡೆಯಲಿಕ್ಕೆ ನಾನು ಇಷ್ಟೊಂದು ಹೋರಾಟ ನಡೆಸಿ ಇಲ್ಲಿ ಬಂದಿದ್ದಾ? ಎಂದು ಒಳಗೊಳಗೇ ನೊಂದು ನೊಂದು ಹೋದಳು. ಪೂರ್ತಿ ಕರಗಿಹೋದಳು. ಆದರೆ 'ಪರಿಸ್ಥಿತಿ' ಏನೂ ಮಾಡುವಂತಿರಲಿಲ್ಲ.
ಅಷ್ಟೇ.... ಅಂದಿನಿಂದ ಅವಳು ಶುದ್ಧ ಜಾರಿಣಿಯಾದಳು. ಈಗ ಸಮಾಜ ಏನೊಂದುಕೊಂಡಾತು ಎಂಬ ಚಿಂತೆ ಅವಳಿಗಿರಲಿಲ್ಲ. ಮನಸ್ಸು ಕಲ್ಲಾಗಿತ್ತು.
ಒಂದು ದಿನ ತನ್ನ ವೃತ್ತಿಯಂತೆ ಯಾರಾದರೂ ಬಲೆಗೆ ಬೀಳುವವರು ಎಂದು ರಸ್ತೆಯಲ್ಲಿ ವಯ್ಯಾರ ಮಾಡುತ್ತಾ ನಿಂತಾಗ, ಯುವಕನೊಬ್ಬ ಇವಳ ಬಳಿ ಬಂದು ನಿಂತ. ಇವಳು ಸಂತಸದಿಂದ ಅವನ ಕೈ ಹಿಡಿದೆಳೆದಳು. ಅಲ್ಲಿಂದ ನಡೆದಿದ್ದೆಲ್ಲಾ 'ಇತಿಹಾಸ'ವೇ.
ಅವನು ಅವಳ ಕತೆ ಕೇಳಿಯೂ ಅವನ ಬದುಕಿನಲ್ಲಿ ಅವಳಿಗೆ ಜಾಗ ಕೊಟ್ಟ. ಅವಳನ್ನು ವೇಶ್ಯಾವೃತ್ತಿಯಿಂದ ಹೊರತಂದ. ಸ್ವಾಭಿಮಾನದಿಂದ ದುಡಿದು ತಿನ್ನುತ್ತಿದ್ದ ಅವನು, ಇವಳಿಗೂ ಸ್ವಾಭಿಮಾನದ ಪಾಠ ಕಲಿಸಿದ. ಆಸರೆಯ ಹಸ್ತ ಚಾಚಿದ. ನಿಯತ್ತಾಗಿ ಬದುಕುವ ಪಾಠ ಕಲಿಸಿದ. ಜೊತೆಗೆ ಅರ್ಧಾಂಗಿಯ ಸ್ಥಾನ ಕೊಟ್ಟ ಅವಳ ಹಿನ್ನೆಲೆ ತಿಳಿದಿದ್ದ ಮೇಲು.!!
ಜಾರಿಣಿಯಾಗಿದ್ದವಳು ಶುದ್ಧ ಗೃಹಸ್ಥೆಯಾದಳು. ಸ್ಪಂದನಾಳ ಭಾವನೆಗಳಿಗೆ ಸ್ಪಂದಿಸಿ ಅವಳ ಬದುಕಲ್ಲಿ ಸಂತಸದ ಹೊಳೆಯನ್ನೇ ಹರಿಸಿದ ಸಂತೋಷ್. ಹೀಗೆ ಯಾವುದೂ ಒತ್ತಡದ ಸಂಧಿಯಲ್ಲಿ ಜಾರಿಣಿಯಾಗಿದ್ದವಳ ಬದುಕು ಬದಲಾಯಿತು.
ಸಮಾಜ ಅರ್ಥಾತ್ ನಾವು, ಸಮಾಜದೊಳಗಿನ ನಾವು ನೀವು ಮನಸ್ಸು ಮಾಡಿದರೆ ಒಬ್ಬರ ಬದುಕನ್ನು ಹೇಗೆಲ್ಲ ಬದಲಿಸಬಹುದು ಎಂಬುದನ್ನು ಸಣ್ಣ ಕಥೆಯ ಮೂಲಕ ಹೇಳಲು ಇಚ್ಛಿಸಿದ್ದೇನೆ.
'ಸಂತೋಷ್'ನಂತ ಶುದ್ಧ ಮನದವರು ಈ ಸಮಾಜದೊಳಗೆ ಹೆಚ್ಚಲಿ ಮತ್ತು ಸ್ಪಂದನಾಳಂತೆ ತನ್ನ ಬದುಕು ಬದಲಿಸಿಕೊಂಡು ಒಳ್ಳೆಯ ಜೀವನ ನಡೆಸುವ ಮನಸ್ಥಿತಿಯವರೂ ಹೆಚ್ಚಲಿ.
ಉದ್ದೇಶ ಪೂರ್ವಕವಾಗಿಯೇ ಎಲ್ಲರೂ ಅಂತಹ ವೃತ್ತಿಗಳಿಗೆ ಇಳಿಯುವುದಿಲ್ಲ. ಅಸಲಿಗೆ ಮನ ಒಪ್ಪದೆ ಮಾಡುವ ಎಲ್ಲ ಕಾರ್ಯಗಳು ಜಾರತನವೇ ಆಗಿದೆ..!
-By ಪಲ್ಲವಿ ಚೆನ್ನಬಸಪ್ಪ