ಚಿತ್ರ / ವರದಿ: ರೋನ್ಸ್ ಬಂಟ್ವಾಳ್
ಮುಂಬಯಿ: ನಮ್ಮ ದೇಶದ ಸ್ವಾತಂತ್ರ್ಯದ ಸಡಗರ. ಈ ದಿನ ನಾವು ನಮ್ಮ ರಾಷ್ಟ್ರ ಸಂರಕ್ಷಿಸಿದ ಶೂರವೀರರೆಣಿಸಿದ (ಹೀರೋಗಳು) ಸ್ವಾತಂತ್ರ್ಯ ಹೋರಾಟಗಾರರನ್ನು ನೆನಪಿಸುವ ಸುದಿನ. ಆದ್ದರಿಂದ ಈ ದಿನವನ್ನು ರಾಷ್ಟ್ರದ ತ್ಯಾಗದ ಸಂಕೇತವಾಗಿಯೂ ಆಚರಿಸುವ ಅಗತ್ಯವಿದೆ. ಇಂತಹ ಭವ್ಯ ರಾಷ್ಟ್ರದ ಭವಿಷ್ಯದ ಜವಾಬ್ದಾರಿ ನಿಭಾಯಿಸವ ಪ್ರತಿಜ್ಞೆ ಸ್ವೀಕರಿಸುವುದೇ ನಿಜಾರ್ಥದ ಸ್ವಾತಂತ್ರ್ಯ. ನಾವು ಈ ದೇಶವನ್ನು ಮತ್ತಷ್ಟು ಉತ್ತಮವಾಗಿಸಲು ಪ್ರತಿದಿನ ಶ್ರಮಿಸಬೇಕು. ಎಲ್ಲರನ್ನೂ ಸಮಾನವಾಗಿ ಕಂಡು ಪ್ರೀತಿಯಿಂದ ಬದುಕುವುದು ನಿಜವಾದ ದೇಶಭಕ್ತಿ. ದೊರಕಿದ ಸ್ವಾತಂತ್ರ್ಯವನ್ನು ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಲಿ. ಸದ್ಭಾವನೆಯ ಬದುಕೇ ಸ್ವಾಂತತ್ರ ದ ಉದ್ದೇಶವಾಗಿದೆ. ಆದುದರಿಂದ ಮಕ್ಕಳು, ಯುವಕರು, ಹಿರಿಯರೆಲ್ಲರೂ ಸೇರಿ ಭವ್ಯ ಭಾರತದ ಭವಿಷ್ಯದ ಜವಾಬ್ದಾರಿ ಸ್ವಯಂಪ್ರೇರಿತರಾಗಿ ವಹಿಸಿ ರಾಷ್ಟ್ರದ ಪ್ರಗತಿಗೆ ಕೈಜೋಡಿಸೋಣ. ಎಂದು ಕನ್ನಡ ಸಂಘ ಸಾಂತ್ರಾಕ್ರೂಜ್ ಸಂಘದ ಅಧ್ಯಕ್ಷೆ ಸುಜಾತ ಆರ್.ಶೆಟ್ಟಿ ಕರೆಯಿತ್ತರು. ಶುಕ್ರವಾರ ಬೆಳಿಗ್ಗೆ ಕನ್ನಡ ಸಂಘ ಸಾಂತ್ರಾಕ್ರೂಜ್ ತನ್ನ ಸಾಂತಾಕ್ರೂಜ್ ಪೂರ್ವದ ವಕೋಲಾದಲ್ಲಿನ ಸಂಘದ ಸ್ವಕಚೇರಿಯಲ್ಲಿ ರಾಷ್ಟ್ರದ ೭೯ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿದ್ದು ಅಧ್ಯಕ್ಷೀಯ ಭಾಷಣವನ್ನುದ್ದೇಶಿಸಿ ಸುಜಾತ ಆರ್.ಶೆಟ್ಟಿ ಮಾತನಾಡಿದರು.
ಸಂಘದ ಸದಸ್ಯರು, ನೆರೆಹೊರೆಯ ನಾಗರಿಕರು ಮತ್ತು ಮಕ್ಕಳು ಉಪಸ್ಥಿತರಿದ್ದು, ಸಂಘದ ಅಧ್ಯಕ್ಷೆ ಸುಜಾತ ಶೆಟ್ಟಿ ರಾಷ್ಟ್ರಧ್ವಜವನ್ನು ಆರಿಸಿದರು. ಸದಸ್ಯರು ರಾಷ್ಟ್ರ ಧ್ವಜಕ್ಕೆ ಗೌರವ ವಂದನೆ ಸಲ್ಲಿಸಿ ರಾಷ್ಟ್ರ ಗೀತೆಯೊಂದಿಗೆ ರಾಷ್ಟ್ರಪ್ರೇಮ ಮೆರೆದರು.
ಸಂಘದ ಗೌರವಾಧ್ಯಕ್ಷ ಎಲ್.ವಿ ಅಮೀನ್ ಮಾತನಾಡಿ ಸ್ವಾತಂತ್ರ್ಯದ ನಂತರವೂ ಪ್ರಗತಿಯನ್ನು ಮುಂದುವರೆಸಿದ ಭಾರತವು ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಸ್ಮರಿಸಿ ಗೌರವ ಸಲ್ಲಿಸುತ್ತೀರುವುದು ಭಾರತೀಯರ ದೊಡ್ಡಸ್ಥಿಕೆಯಾಗಿದೆ. 79 ವರ್ಷಗಳ ಹಿಂದೆ ಆ.೧೫ರಂದು ಸ್ವಾತಂತ್ರ್ಯವನ್ನು ಜಯಿಸಿ ಕೊಟ್ಟು ತ್ಯಾಗಮಾಡಿದ ಭಾರತದ ಜನರು ಪ್ರಜಾಪ್ರಭುತ್ವಕ್ಕಾಗಿ ಯಶಸ್ವಿ ಪರಿವರ್ತನೆ ಮಾಡಿದ್ದರು. ಇಂದು ರಾಷ್ಟ್ರದ ತ್ರಿವರ್ಣ ಧ್ವಜ ಅರಳಿಸಿ ನಮಸ್ಕರಿಸುವಾಗ ಇವೆಲ್ಲವನ್ನೂ ನೆನಪಿಸುವ ಅಗತ್ಯವಿದೆ. ಭಾರತವು ವಿಶ್ವದ ಅತ್ಯಂತ ಹಳೆಯ ಗಣರಾಜ್ಯಗಳನ್ನು ಹೊಂದಿದ್ದು ಪ್ರಜಾಪ್ರಭುತ್ವದ ಆಚರಣೆಯನ್ನು ಬಲಪಡಿಸುವುದರ ಜೊತೆಗೆ ನಾವು ಎಲ್ಲಕ್ಕಿಂತ ಹೆಚ್ಚಾಗಿ ಸಂವಿಧಾನವನ್ನೂ ಗೌರವಿಸಬೇಕು. ವೀರ ರಾಷ್ಟ್ರಪ್ರೇಮಿಗಳ ತ್ಯಾಗದ ಫಲವೇ ನಮ್ಮೆದುರಿಗೆ ಇರುವ ಈ ಸ್ವತಂತ್ರ ಭಾರತ. ಆದುದರಿಂದ ನಮ್ಮ ದೇಶವನ್ನು ಸದಾ ಮುನ್ನಡೆಸಲು ಪ್ರೀತಿ, ಶ್ರದ್ಧೆ ಮತ್ತು ಸಹಬಾಳ್ವೆಯಿಂದ ಬಾಳೋಣ ಎಂದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಭಜಂಗ ಆರ್.ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಜಯ ವಿ.ಪೂಜಾರಿ, ಗೌರವ ಕೋಶಾಧಿಕಾರಿ ಸುಧಾಕರ್ ಉಚ್ಚಿಲ್, ಗೌರವ ಜೊತೆ ಕಾರ್ಯದರ್ಶಿ ಚಂದ್ರಹಾಸ ಜೆ.ಕೋಟ್ಯಾನ್, ಗೌರವ ಜೊತೆ ಕೋಶಾಧಿಕಾರಿ ಬನ್ನಂಜೆ ರವೀಂದ್ರ ಅವಿನ್, ಸಾಂಸ್ಕೃತಿಕ ವಿಭಾಗದ ಕಾರ್ಯಾಧ್ಯಕ್ಷೆ ವನಿತಾ ಯೋಗೇಶ್ ನೋಂಡಾ, ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ವಿಜಯಕುಮಾರ್ ಕೆ.ಕೋಟ್ಯಾನ್, ಸಲಹೆಗಾರರಾದ ಕಾರ್ಯಕಾರಿ ಸಮಿತಿ ಸದಸ್ಯರುಗಳಾದ ಸುಮಿತ್ರಾ ಜಿ.ದೇವಾಡಿಗ, ಗಿರೀಶ್ ಶೆಟ್ಟಿ, ಬಬಿತಾ ಜಿ.ಪೂಜಾರಿ, ವೀಣಾ ಗೌಡ ಹಾಗೂ ಶಾಲಿನಿ ಜಿ.ಶೆಟ್ಟಿ, ಪ್ರವೀಣ್ ಶೆಟ್ಟಿ ಸೇರಿದಂತೆ ಪರಿಸರದ ಜನರು, ಮಕ್ಕಳು ಮತ್ತನೇಕರು ಹಾಜರಿದ್ದರು.
ಧ್ವಜ ವಂದನೆ, ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮ ಆದಿಗೊಂಡಿತು. ಜಯ ವಿ.ಪೂಜಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದನಾರ್ಪಣೆಗೈದರು.